ಕನ್ನಡಪ್ರಭವಾರ್ತೆ ನಾಪೋಕ್ಲು
ಕೊಡಗು ಜಿಲ್ಲೆ ಮಿಲಿಟರಿ ಸೇವೆಗೆ ಹೇಗೆ ಹೆಸರುವಾಸಿಯಾಗಿದೆಯೋ ಅದೇ ರೀತಿ ಕ್ರೀಡೆಗೂ ಹೆಸರುವಾಸಿಯಾಗಿದೆ. ಹಾಕಿ ಕ್ರೀಡೆಗೆ ಸರ್ಕಾರ ನೀಡುತ್ತಿರುವ ಅನುದಾನದ ಸದ್ಬಳಕೆ ಆಗಬೇಕು ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕುಡಿಯೋಳಂಡ ಕುಟುಂಬಸ್ಥರು ಕುಂಡಿಯೊಳಂದ ಕಪ್ ಹಾಕಿ ಉತ್ಸವದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ದಾಖಲೆಯ ಸವಿನೆನಪಿಗಾಗಿ ನೂತನವಾಗಿ ನಿರ್ಮಿಸಿದ ಕ್ರೀಡಾಂಗಣವನ್ನು ಶನಿವಾರ ಲೋಕಾರ್ಪಣೆ ಮಾಡಿದ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಕಿ ಕ್ರೀಡೆಗೆ ಒಂದು ಕೋಟಿ ರೂಪಾಯಿ ಸರ್ಕಾರ ಅನುದಾನ ನೀಡುವ ಮೂಲಕ ಹಾಕಿ ಕ್ರೀಡೆಯನ್ನು ಉತ್ತೇಜಿಸುತ್ತಿದೆ. ಸರ್ಕಾರದಿಂದ ಹಣ ತರುವುದು ಸುಲಭದ ಕೆಲಸವಲ್ಲ. ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಒದಗಿಸುತ್ತಿರುವುದು ಹಾಕಿ ಉತ್ಸವಕ್ಕೆ ಮಾತ್ರ. ಕೊಡಗಿನಲ್ಲಿ ಪ್ರತಿ ವರ್ಷ ಹಾಕಿ ಉತ್ಸವ ನಡೆಯುವ ಸಂದರ್ಭದಲ್ಲಿ ಸರ್ಕಾರದ ಚಿಹ್ನೆ ಹಾಕಿ ಕ್ರೀಡಾ ಇಲಾಖೆಯನ್ನು ಗುರುತಿಸುವ ಕೆಲಸವನ್ನು ಮಾಡಬೇಕು ಎಂದರು. ಕೊಡಗಿನಲ್ಲಿ ಸಂಸ್ಕೃತಿ ಸಂಪ್ರದಾಯಗಳನ್ನು ಹೇಗೆ ಜೀವಂತವಾಗಿ ಉಳಿಸಿದ್ದೇವೆಯೋ ಅದೇ ರೀತಿ ಸಮುದಾಯದ, ಕ್ರೀಡಾ ಪ್ರೇಮಿಗಳ ಒಳಿತಿಗಾಗಿ ಕ್ರೀಡಾಂಗಣವನ್ನು ನಿರ್ಮಿಸಿರುವುದು ಆ ನಿಟ್ಟಿನಲ್ಲಿ ಒಂದು ಬಲವಾದ ಹೆಜ್ಜೆ ಎಂದರು.ಕುಂಡಿಯೊಳಂಡ ಹಾಕಿ ಉತ್ಸವದ ಅಧ್ಯಕ್ಷರಾದ ರಮೇಶ್ ಮುದ್ದಯ್ಯ ಮಾತನಾಡಿ ಯಾವುದೇ ಫಲ ನಿರೀಕ್ಷೆ ಮಾಡದೆ ಚೋಕಿರ, ಬೊಳ್ಳೆ ಪಂಡ, ಮಕ್ಕಿ ಬ್ರಾಹ್ಮಣ ಸೇರಿದಂತೆ ಐದು ಕುಟುಂಬಸ್ಥರು 52 ಎಕ್ರೆ ಜಾಗವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ. ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಕ್ರೀಡೆಗೂ ಉತ್ತೇಜನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಕ್ರೀಡಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎಂದು ಆಶಿಸಿ ಹಾಕಿ ಉತ್ಸವದ ಎಂದರು. ಕುಂಡಿಯೊಳಂಡ ಹಾಕಿ ಉತ್ಸವದ ಸಂಚಾಲಕ ದಿನೇಶ್ ಕ್ರೀಡಾಭಿಮಾನಿಗಳ, ಸಂಘ ಸಂಸ್ಥೆಗಳ ಸಹಕಾರದಿಂದ ಕ್ರೀಡಾ ಕೂಟ ಯಶಸ್ವಿಯಾಗಿ ಜರುಗಿದೆ. ಈ ಒಂದು ಕ್ರೀಡಾಕೂಟದ ಮೂಲಕ ಜಿಲ್ಲೆಗೆ ಕೊಡುಗೆ ನೀಡುವ ಬಗ್ಗೆ ಕುಟುಂಬಗಳು, ಚಿಂತಿಸಿದ್ದು ನಾಲ್ಕು ನಾಡಿಗೆ ಸಂಬಂಧಿಸಿದಂತೆ ಉತ್ತಮ ಕ್ರೀಡಾಂಗಣವನ್ನು ಒದಗಿಸಿರುವುದು ಹೆಮ್ಮೆ ಅನಿಸಿದೆ ಎಂದರು.
ನಿಕಟಪೂರ್ವ ಪ್ರಾಂಶುಪಾಲೆ ಡಾ. ಕಾವೇರಿ ಅವರು ಹಲವು ವರ್ಷಗಳ ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಅನುಭವ, ಕಾಲೇಜಿನ ಅಭಿವೃದ್ಧಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಉಷಾ ಜೋಯಪ್ಪ ಮಾತನಾಡಿ ಕಾಲೇಜಿನ ಪರವಾಗಿ ಕುಂಡಿಯೊಳಂಡ ಕುಟುಂಬಸ್ಥರಿಗೆ ಅಭಿನಂದನೆ ಸಲ್ಲಿಸಿದರು.ಸಾಧಕರಿಗೆ ಗೌರವ: ಈ ಸಂದರ್ಭ ಕುಂಡಿಯೊಳಂಡ ಕುಟುಂಬದ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಶಾಸಕ ಎ ಎಸ್ ಪೊನ್ನನ್ನ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪರವಾಗಿ ಕುಂಡಿಯೊಳಂಡ ಕುಟುಂಬದ ಹಿರಿಯ ಕೆ ಎಸ್ .ಸುಬ್ಬಯ್ಯ ಅವರನ್ನು ಹಾಗೂ ಶಾಸಕ ಎ ಎಸ್ ಪೊನ್ನನ್ನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಪಾಂಡಂಡ ಕೆ ಬೋಪಣ್ಣ,, ಕಾಲೇಜು ಪ್ರಾಂಶುಪಾಲೆ ಎಚ್ ಸಿ ಪಲ್ಲವಿ ಹಾಗೂ ಕುಂಡಿಯೊಳಂಡ ಕುಟುಂಬಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕರು ,ಕಾಲೇಜು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಾದ ಧನಲಕ್ಷ್ಮಿ ತಂಡದವರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರಾಂಶುಪಾಲೆ ಎಚ್ ಸಿ ಪಲ್ಲವಿ ಸ್ವಾಗತಿಸಿ ಸಹಾಯಕ ಪ್ರಾಧ್ಯಾಪಕಿ ಸಹನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ನಿರ್ದೇಶಕರಾದ ಬಿದ್ದಾತಂಡ ಮೇರಿ ಚಿಟ್ಟಿಯಪ್ಪ ವಂದಿಸಿದರು.