ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಪೇರಿಯಂಡ ಪೆಮ್ಮಯ್ಯ ಮತ್ತು ಜಿ.ಕೆ. ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ

ಮಡಿಕೇರಿ: ಬದಲಾದ ಸಾಮಾಜಿಕ ಪರಿಸ್ಥಿತಿ ಹಾಗೂ ಆಧುನಿಕತೆಯ ಭರಾಟೆಯಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತಿದೆ. ಆದರೂ ನಿಜವಾದ ಸತ್ವವನ್ನು ಹೊಂದಿರುವ ಉತ್ತಮ ಪುಸ್ತಕಗಳು ಎಂದಿಗೂ ಓದುಗರಿಂದ ದೂರವಾಗುವುದಿಲ್ಲ ಎಂದು ಸಾಹಿತಿ ಡಾ. ಕೋರನ ಸರಸ್ವತಿ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಪೇರಿಯಂಡ ಪೆಮ್ಮಯ್ಯ ಮತ್ತು ಜಿ.ಕೆ. ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಪ್ರಶಸ್ತಿ ಪುರಸ್ಕೃತರಾದ ಉಳುವಂಗಡ ಕಾವೇರಿ ಉದಯ್ ಮಾತನಾಡಿ, ಸಮಾಜಕ್ಕೆ ಸ್ಪಂದಿಸಿ, ಅಂತರಂಗದ ಭಾವನೆಗಳಿಗೆ ಅಕ್ಷರ ರೂಪ ನೀಡುವ ಮೂಲಕ ಮೂಡಿಬರುವ ಸಾಹಿತ್ಯಕ್ಕೆ ಸಾಮಾಜಿಕ ಪರಿವರ್ತನೆ ತರುವ ಅಗಾಧ ಶಕ್ತಿಯಿದೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶಗಳನ್ನು ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಸಾಹಿತ್ಯ ಕ್ಷೇತ್ರದ ಪ್ರಬುದ್ಧತೆಯನ್ನು ಹೆಚ್ಚಿಸಬಲ್ಲದು: ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಸುಭಾಷ್ ನಾಣಯ್ಯ ಮಾತನಾಡಿ, ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿ ಮುಖ್ಯವಾಹಿನಿಯತ್ತ ಕೊಂಡೊಯ್ಯುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.

‘ಕಾವೇರಿ’ಯನ್ನು ಬಿಟ್ಟು ಸಾಹಿತ್ಯ ರಚನೆ ಸಾಧ್ಯವಿಲ್ಲ: ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ’ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಊ.ರಾ.ನಾಗೇಶ್ ಮಾತನಾಡಿ, ಕೊಡಗು ಹಾಗೂ ಇಲ್ಲಿನ ಸಂಸ್ಕೃತಿ, ನೆಲದ ಸೊಗಡಿನ ಜಾನಪದ, ಆಚಾರ-ವಿಚಾರಗಳು ರೋಮಾಂಚನಗೊಳಿಸುತ್ತವೆ ಎಂದರು.

ಕೊಡಗಿನ ಸಾಹಿತ್ಯ ಪರಂಪರೆ ಶ್ರೀಮಂತವಾಗಿದೆ: ಕೊಡಗು ಜಿಲ್ಲೆಯ ಕನ್ನಡ ಸಾಹಿತಿಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕಿ ಪ್ರತಿಮಾ ರೈ ಮಾತನಾಡಿ, ಕೊಡಗಿನ ಸಾಹಿತ್ಯ ಪರಂಪರೆಯನ್ನು ಅವಲೋಕಿಸುವಾಗ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಆಶಯ ನುಡಿಗಳನ್ನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಯುವ ಸಾಹಿತಿಗಳನ್ನು ಒಗ್ಗೂಡಿಸಿ ಅವರ ಸಾಹಿತ್ಯ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಾಹಿತ್ಯ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

365 ದಿನಗಳೂ ಸಾಹಿತ್ಯ ಚಟುವಟಿಕೆ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಸ್ತುತ 45 ದತ್ತಿ ಪ್ರಶಸ್ತಿಗಳಿವೆ. ಇವುಗಳ ಸಂಖ್ಯೆ 100ಕ್ಕೂ ಅಧಿಕವಾದರೆ ವರ್ಷದ 365 ದಿನಗಳೂ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಬೇಕು. ಇದುವರೆಗೆ 24 ಮಹಿಳಾ ಸಾಹಿತಿಗಳು ಗೌರಮ್ಮ ದತ್ತಿ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳಾ ಸಾಹಿತಿಗಳ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಪ್ರೋತ್ಸಾಹದಾಯಕವಾಗಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ದತ್ತಿಗಳ ನೆರವಿನಿಂದ ಯುವ ಸಮೂಹದಲ್ಲಿ ಸಾಹಿತ್ಯದ ಒಲವು ಮೂಡಿಸುವ ಉದ್ದೇಶದಿಂದ ಶಾಲೆಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದತ್ತಿ ನಿಧಿ ನೀಡಿರುವ ದಾನಿಗಳ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಒಗ್ಗೂಡಿಸುವ ಶಕ್ತಿ: ಹಿರಿಯ ರಂಗಕರ್ಮಿ ನೆರವಂಡ ಉಮೇಶ್ ಮಾತನಾಡಿ, ಸಾಹಿತಿಗಳಿಗೆ ಚಪ್ಪಾಳೆಗಿಂತ ಮಿಗಿಲಾದ ಪ್ರೋತ್ಸಾಹ ದೊರೆಯುವುದು ವಿರಳ. ಆದ್ದರಿಂದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಪ್ರಸ್ತುತ ಸಮಾಜದಲ್ಲಿ ಜಾತಿ-ಮತಗಳ ಬೇಲಿಯನ್ನು ನಿರ್ಮಿಸಿಕೊಳ್ಳುವ ಪ್ರವೃತ್ತಿ ಕಂಡುಬರುತ್ತಿದೆ. ಆದರೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂತಹ ಎಲ್ಲ ಭೇದಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ ಎಂದು ಹೇಳಿದರು.

ಗೌರವಾರ್ಪಣೆ-ಸಮಾರಂಭದಲ್ಲಿ ದತ್ತಿ ದಾನಿಗಳಾದ ಕೊರವಂಡ ರೇವತಿ ಮತ್ತು ಕೊರವಂಡ ತಿಮ್ಮಯ್ಯ, ಡಾ. ಸುಭಾಷ್ ನಾಣಯ್ಯ, ಊ.ರಾ. ನಾಗೇಶ್ ಹಾಗೂ ಪ್ರತಿಮಾ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಸಾಪ ಸಂಘಟನಾ ಕಾರ್ಯದರ್ಶಿ ಬಿ.ಎಂ.ವಾಸು ರೈ ಉಪಸ್ಥಿತರಿದ್ದರು. ಕಸಾಪ ತಂಡದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲಾ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಎಂ.ಶ್ರೀಧರ ಹೂವಲ್ಲಿ ಮತ್ತು ರೇಣುಕಾ ಅವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ನೆರವಂಡ ಉಮೇಶ್ ವಂದಿಸಿದರು.

ಇಬ್ಬರು ಸಾಹಿತಿಗಳಿಗೆ ಪ್ರಶಸ್ತಿ: ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಇಬ್ಬರು ಸಾಹಿತಿಗಳಿಗೆ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.

‘ನುಡಿದೀಪ’ ಕೃತಿ ರಚನೆಗಾಗಿ ಡಾ. ಕೋರನ ಸರಸ್ವತಿ ಅವರಿಗೆ ಹಾಗೂ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಯನ್ನು ‘ಸಿಪಾಯಿ ಮಾದಪ್ಪ’ ಕೃತಿ ರಚನೆಗಾಗಿ ಸಾಹಿತಿ ಉಳುವಂಗಡ ಕಾವೇರಿ ಉದಯ್ ಅವರಿಗೆ ಪ್ರದಾನ ಮಾಡಲಾಯಿತು.