ಕೊಡಗು ಪತ್ರಿಕಾಭವನ ಟ್ರಸ್ಟ್ ನಿಂದ 47 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ

| Published : Aug 12 2025, 12:30 AM IST

ಕೊಡಗು ಪತ್ರಿಕಾಭವನ ಟ್ರಸ್ಟ್ ನಿಂದ 47 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಪತ್ರಕರ್ತರ 47 ವಿದ್ಯಾರ್ಥಿಗಳಿಗೆ 2.19 ಲಕ್ಷ ರು. ವೆಚ್ಚದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖ ಮಾನದಂಡವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ, ಮಡಿಕೇರಿ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದ್ದಾರೆ.

ನಗರದ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಜಿಲ್ಲೆಯ ಪತ್ರಕರ್ತರ 47 ವಿದ್ಯಾರ್ಥಿಗಳಿಗೆ 2.19ಲಕ್ಷ ರು. ವೆಚ್ಚದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಿರಂಜನ್ ಮಾತನಾಡಿದರು.ಪತ್ರಕರ್ತರ ಮಕ್ಕಳಲ್ಲಿನ ಶೈಕ್ಷಣಿಕ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪತ್ರಿಕಾಭವನ ಟ್ರಸ್ಟ್ ನೀಡುತ್ತಿರುವ ವಿದ್ಯಾನಿಧಿ ಕಾರಣವಾಗಲಿ ಎಂದು ಹಾರೈಸಿದರಲ್ಲದೇ, ಜಿಲ್ಲೆಯಾದ್ಯಂತಲಿನ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಿರುವುದು ಶ್ಲಾಘನೀಯ ಎಂದು ನಿರಂಜನ್ ಹೇಳಿದರು.

ಈಗಿನ ಮಕ್ಕಳು ತಗ್ಗಿಬಗ್ಗುವುದಕ್ಕೆ ವಿನಯವಂತಿಕೆ ಕಾರಣ ಎಂದು ಭಾವಿಸುವುದಕ್ಕಿಂತ ಮೊಬೈಲ್ ನಲ್ಲಿ ಹುದುಗಿ ಹೋಗಿ ಕತ್ತು ತಗ್ಗಿಬಗ್ಗಿರುವುದೇ ಮುಖ್ಯ ಕಾರಣ ಎಂದು ನಿರಂಜನ್, ಮಕ್ಕಳ ಮೊಬೈಲ್ ವ್ಯಸನದ ಬಗ್ಗೆ ವಿಶ್ಲೇಷಿಸಿದರು. ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಮಕ್ಕಳು ಮೂಕರಂತೆ ಸಂಜ್ಞೆಗಳನ್ನು ಬಳಸಿಯೇ ವ್ಯವಹರಿಸುವ ಕಾಲವೂ ದೂರವಿಲ್ಲ ಎಂದೂ ಅವರು ಎಚ್ಚರಿಸಿದರು.

ಬೆಳ್ಳಿ ಮಹೋತ್ಸವ ಕಾರ್ಯಕ್ರಮ:

ಪತ್ರಿಕಾಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಮಾತನಾಡಿ, ಸಾಮಾಜಿಕ ಚಿಂತನೆಯೊಂದಿಗೆ ಪತ್ರಿಕಾಭವನ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಅಕ್ಟೋಬರ್ ನಿಂದ ಪತ್ರಿಕಾಭವನ ಟ್ರಸ್ಟ್ ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ ಎಂದು ಹೇಳಿದರು. ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸಮಾಜಮುಖಿಯಾಗಿರುವ ಅನೇಕ ಸಂಘಸಂಸ್ಥೆಗಳಿಗೆ ಪತ್ರಿಕಾಭವನ ಟ್ರಸ್ಟ್ ನೆರವಾಗುತ್ತಿದೆ ಎಂದೂ ರಮೇಶ್ ಹೇಳಿದರು.ಪತ್ರಿಕಾಭವನ ಟ್ರಸ್ಟ್ ನ ಟ್ರಸ್ಟಿ ಜಿ.ಚಿದ್ವಿಲಾಸ್ ಮಾತನಾಡಿ, ಹಳೇ ಕಾಲದಲ್ಲಿ ಯಾರಿಗಾದರೂ ದಾನ ಕೊಟ್ಟದ್ದು ಬೇರೆಯವರಿಗೆ ಗೊತ್ತಾಗಬಾರದು ಎಂಬ ಮನೋಭಾವವಿತ್ತು. ಆದರೆ ಈಗಿನ ಕಾಲದಲ್ಲಿ ದಾನ, ಕೊಡುಗೆ ನೀಡಿದ್ದು ಸಾರ್ವಜನಿಕವಾಗಿ ತಿಳಿದಾಗ ಅಂಥ ದಾನಿಗಳಿಗೆ ತೃಪ್ತಿಯಾಗುತ್ತದೆಯಲ್ಲದೇ, ಇತರ ದಾನಿಗಳಿಗೂ ಕೊಡುಗೆ ನೀಡಲು ಪ್ರೇರಣೆಯಾಗುತ್ತದೆ ಎಂದರು. ವಿದ್ಯಾನಿಧಿ ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮ ಹೊಣೆಗಾರಿಕೆ ಹೆಚ್ಚಾಗಿದೆ ಎಂಬ ಮನೋಭಾವನೆಯಿಂದ ಶೈಕ್ಷಣಿಕ ಸಾಧನೆಯತ್ತ ಹೆಚ್ಚಿನ ಗಮನ ನೀಡಬೇಕೆಂದೂ ಚಿದ್ವಿಲಾಸ್ ಕರೆ ನೀಡಿದರು.

ವಿದ್ಯಾನಿಧಿ ಹಂಚಿಕೆ: ಪತ್ರಿಕಾಭವನ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ, ಕಳೆದ ವರ್ಷ ಜಿಲ್ಲೆಯ 36 ವಿದ್ಯಾರ್ಥಿಗಳಿಗೆ 1.60 ಲಕ್ಷ ರು. ವಿದ್ಯಾನಿಧಿ ವಿತರಿಸಿದ್ದ ಟ್ರಸ್ಟ್ ಎರಡನೇ ವರ್ಷದಲ್ಲಿ 48 ವಿದ್ಯಾರ್ಥಿಗಳಿಗೆ 2.19 ಲಕ್ಷ ರುಪಾಯಿಗಳಷ್ಟು ವಿದ್ಯಾನಿಧಿಯನ್ನು ಹಂಚಿಕೆ ಮಾಡಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಭವನ ಟ್ರಸ್ಟ್ ನ ಟ್ರಸ್ಟಿಗಳಾದ ಅನಿಲ್ ಹೆಚ್.ಟಿ. ನಿರೂಪಿಸಿ, ಖಜಾಂಜಿ ಕೆ. ತಿಮ್ಮಪ್ಪ ಸ್ವಾಗತಿಸಿ, ಮುಲ್ಲೇಂಗಡ ಮಧೋಷ್ ಪೂವಯ್ಯ ವಂದಿಸಿದ ಕಾರ್ಯಕ್ರಮದಲ್ಲಿ ನವೀನ್ ಚಿಣ್ಣಪ್ಪ ಪ್ರಾರ್ಥಿಸಿದರು. ಟ್ರಸ್ಟಿಗಳಾದ ಶ್ರೀಧರ್ ಹೂವಲ್ಲಿ, ವಿ.ಪಿ.ಸುರೇಶ್ ಹಾಜರಿದ್ದರು.

---------------------------------------------------------------------------------------------------------

ಮಡಿಕೇರಿಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಿಂದ ಪತ್ರಕರ್ತರು, ಕುಟುಂಬ ವರ್ಗಕ್ಕೆ ರಾಖಿ ಕಟ್ಟಿ ಸಿಹಿ ನೀಡಿ ಶುಭ ಹಾರೈಸಲಾಯಿತು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಪ್ರಮುಖರಾಧ ಧನಲಕ್ಷ್ಮಿ, ಇಡೀ ವಿಶ್ವವೇ ನಮ್ಮೆಲ್ಲರ ಪರಿವಾರ ಎಂಬುದನ್ನು ನೆನಪಿಸುವಂಥ ರಕ್ಷೆಯನ್ನು ಪ್ರತೀಯೋರ್ವರೂ ಸಂರಕ್ಷಿಸಿಕೊಳ್ಳುವಂತೆ ಕರೆ ನೀಡಿದರು. ದೇಹದೊಳಗಿನ ಅಗೋಚರ ಶಕ್ತಿಯಂತಿರುವ ಪರಮಾತ್ಮನ ಸಾನಿಧ್ಯವನ್ನು ಪ್ರತೀಯೋರ್ವರು ಕಂಡುಕೊಳ್ಳುವಂತಾಗಬೇಕೆಂದು ಅವರು ಹೇಳಿದರು. ಶಕ್ತಿ ಸ್ವರೂಪಿಯಾಗಿರುವ ಧ್ಯಾನವನ್ನು ಪ್ರತೀಯೋರ್ವರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಪ್ರತೀಯೋರ್ವರು ತಮ್ಮದೇ ಆದ ಸಮಯ ಮೀಸಲಿಡಬೇಕೆಂದೂ ಧನಲಕ್ಷ್ಮಿ ಹೇಳಿದರು. ಧ್ಯಾನದ ಮೂಲಕ ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳುವಂತೆಯೂ ಅವರು ಸಲಹೆ ನೀಡಿದರು. ಬ್ರಹ್ಮಕುಮಾರಿ ಸಂಸ್ಥೆಯ ರಮಾದೇವಿ, ಸುರೇಶ್ ಕಾರಂತ್ ಹಾಜರಿದ್ದರು.