ರೆಂಟಲ್ ಬೈಕ್ ನಿಯಂತ್ರಣಕ್ಕೆ ಕೊರವೇ ಆಟೋ ಚಾಲಕರ ಸಂಘ ಆಗ್ರಹ

| Published : Aug 08 2024, 01:32 AM IST

ರೆಂಟಲ್ ಬೈಕ್ ನಿಯಂತ್ರಣಕ್ಕೆ ಕೊರವೇ ಆಟೋ ಚಾಲಕರ ಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರೆಂಟಲ್ ಬೈಕ್ ಹೆಸರಿನಲ್ಲಿ ಕೆಲವರು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆಯ ಮಡಿಕೇರಿ ನಗರ ಆಟೋ ಚಾಲಕರ ಸಂಘ, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಇಲಾಖೆಯನ್ನು ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರೆಂಟಲ್ ಬೈಕ್ ಹೆಸರಿನಲ್ಲಿ ಕೆಲವರು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆಯ ಮಡಿಕೇರಿ ನಗರ ಆಟೋ ಚಾಲಕರ ಸಂಘ, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಇಲಾಖೆಯನ್ನು ಒತ್ತಾಯಿಸಿದೆ.

ರೆಂಟಲ್ ಬೈಕ್ ಸಂಸ್ಥೆಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದ ಸಂಘದ ಪ್ರಮುಖರು, ಮಡಿಕೇರಿ ನಗರದಲ್ಲಿ ಕಳೆದ ಹಲವು ದಶಕಗಳಿಂದ ಸಾವಿರಕ್ಕೂ ಅಧಿಕ ಆಟೋ ಚಾಲಕರು ಹಗಲು ರಾತ್ರಿ ಎನ್ನದೆ ಗಾಳಿ ಮಳೆ ಬಿಸಿಲಿನಲ್ಲಿ ಆಟೋ ಓಡಿಸಿ ಅಲ್ಪ ಪ್ರಮಾಣದ ಆದಾಯದಲ್ಲಿ ಕುಟುಂಬಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಡಿಕೇರಿ ನಗರದಲ್ಲಿ ರೆಂಟಲ್ ಬೈಕ್ ಗಳ ಹಾವಳಿ ಹೆಚ್ಚಾಗಿದ್ದು, ಆಟೋ ಚಾಲಕರು ಆದಾಯ ಕುಸಿತದಿಂದ ಸಂಕಷ್ಟ ಎದುರಿಸುವಂತ್ತಾಗಿದೆ ಎಂದು ಗಮನ ಸೆಳೆದರು.

ಕೆಲವು ರೆಂಟಲ್ ಬೈಕ್ ಗಳ ಬಲಾಡ್ಯ ಸಂಸ್ಥೆಗಳು ಸಾರಿಗೆ ಇಲಾಖೆಯಿಂದ ಅನುಮತಿ ಪಡೆದ ನಿಯಮಗಳನ್ನು ಉಲ್ಲಂಘಿಸಿ ಮೂರು ಪಟ್ಟು ಹೆಚ್ಚು ಬೈಕ್ ಗಳನ್ನು ಅನಧಿಕೃತವಾಗಿ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿರುವುದು ಕಂಡು ಬಂದಿದೆ. ಸಂಸ್ಥೆಯ ಮಳಿಗೆಯಲ್ಲಿ ಬೆರಳೆಣಿಕೆಯಷ್ಟು ಬೈಕ್ ಗಳನ್ನು ನಿಲ್ಲಿಸಿಕೊಂಡು ಅನಧಿಕೃತವಾದ ಹೆಚ್ಚುವರಿ ಬೈಕ್ ಗಳನ್ನು ಯಾರಿಗೂ ತಿಳಿಯದಂತೆ ಬೇರೆ ಪ್ರದೇಶಗಳಲ್ಲಿ ನಿಲ್ಲಿಸಿ ವ್ಯವಹಾರ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಅನ್ಯಾಯವಾಗುತ್ತಿದೆ, ಅಲ್ಲದೆ ಆಟೋ ಚಾಲಕರ ಆದಾಯ ಕೂಡ ಕಡಿಮೆಯಾಗುತ್ತಿದೆ. ರೆಂಟಲ್ ಬೈಕ್ ಸವಾರರು ಹೆಲ್ಮೆಟ್ ಧರಿಸುತ್ತಿಲ್ಲ, ಒಂದು ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಾರೆ, ಅತಿವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡುತ್ತಾರೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು.

ಸಂಘದ ಅಧ್ಯಕ್ಷ ಸುಲೈಮಾನ್ ಎಂ.ವೈ., ಉಪಾಧ್ಯಕ್ಷ ವರ್ಗೀಸ್ ಟಿ.ಕೆ, ಸುನಿಲ್, ಅಭಿಜಿತ್ ಸಾದಿಕ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.