ರಾಜ್ಯ ಬಜೆಟ್ ನಲ್ಲಿ ಕೊಡಗಿಗೆ ಸಿದ್ದು ಕೊಡುಗೆ

| Published : Mar 07 2025, 11:48 PM IST

ರಾಜ್ಯ ಬಜೆಟ್ ನಲ್ಲಿ ಕೊಡಗಿಗೆ ಸಿದ್ದು ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಗೆ ಇಷ್ಟೊಂದು ದೊಡ್ಡ ಬಜೆಟ್‌ ಯಾರು ಮಂಡಿಸಿಲ್ಲ ಎಂದು ಕಾಂಗ್ರೆಸ್‌ ಹರ್ಷ ವ್ಯಕ್ತಪಡಿಸಿದರೆ ಜಿಲ್ಲೆಗೆ ಯಾವುದೇ ವಿಶೇಷ ಪ್ಯಾಕೇಜ್‌ ನೀಡಿಲ್ಲ ಎಂದು ಬಿಜೆಪಿ ಪ್ರಮುಖರು ಟೀಕಿಸಿದ್ದಾರೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 16ನೇ ಬಜೆಟ್ ಮಂಡಿಸಿದ್ದು, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಯೋಜನೆ ಘೋಷಣೆ ಮಾಡಿದ್ದಾರೆ. ಜಿಲ್ಲೆಗೆ ಇಷ್ಟೊಂದು ದೊಡ್ಡ ಬಜೆಟ್ ಯಾರೂ ಮಂಡಿಸಿಲ್ಲ ಎಂದು ಕಾಂಗ್ರೆಸ್ ಪ್ರಮುಖರು ಹರ್ಷ ವ್ಯಕ್ತಪಡಿಸಿದರೆ, ಜಿಲ್ಲೆಗೆ ಯಾವುದೇ ವಿಶೇಷ ಪ್ಯಾಕೇಜ್ ನೀಡಿಲ್ಲ ಎಂಬುದು ಬಿಜೆಪಿ ಪ್ರಮುಖರು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರಿಗೆ ಸಿದ್ದರಾಮಯ್ಯ ಅವರು ಈ ಬಜೆಟ್ ನಲ್ಲಿ ಮನ್ನಣೆ ನೀಡಿದ್ದು, ತಮ್ಮ ಕ್ಷೇತ್ರ ವಿರಾಜಪೇಟೆಯಲ್ಲಿ ಸುಮಾರು 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದಲ್ಲದೆ ಆರೋಗ್ಯ ಕ್ಷೇತ್ರಕ್ಕೆ ಹಲವು ಯೋಜನೆಗಳು ಈ ಬಜೆಟ್ ನಲ್ಲಿ ಕಂಡುಬಂದಿದೆ. ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಆರಂಭಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕುಶಾಲನಗರ ತಾಲೂಕು ಆಸ್ಪತ್ರೆಯನ್ನು ನವೀಕರಿಸುವುದು ಹಾಗೂ ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ.

ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಭೂಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ರು.200 ಕಾಮಗಾರಿ ವೆಚ್ಚ ಮಾಡಲಾಗುವುದು ಎಂದು ಈ ಆಯವ್ಯಯದಲ್ಲಿ ಉಲ್ಲೇಖಿಸಲಾಗಿದೆ. ಕುಶಾಲನಗರ ತಾಲೂಕಿನ ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ ರು.3 ಕೋಟಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ವಿರಾಜಪೇಟೆ-ಪೊನ್ನಂಪೇಟೆ ಹಾಗೂ ಮಡಿಕೇರಿ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಹಾನಿಗೆ ಒಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು ರು.20 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲು ಈ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗಿದೆ.

ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುವ ಆದಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರು. 200 ಕೋಟಿ ಅನುದಾನ ಮೀಸಲಿಡಲಾಗಿದೆ. ಕಾಡಾನೆ-ಮಾನವ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿಗೆ ಈ ಸಾಲಿನ ಬಜೆಟ್ ನಲ್ಲಿ 150 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರು.60 ಕೋಟಿ ಮೀಸಲಿಡಲಾಗಿದೆ.

ಕೊಡಗಿನಲ್ಲಿರುವ ವಸತಿ ಶಾಲೆಗಳಲ್ಲಿ 12 ತರಗತಿ ವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಮಡಿಕೇರಿ- ದೋಣಿಗಲ್(ಎನ್ ಹೆಚ್ 75) (ಮಾದಾಪುರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮಾರ್ಗ)95 ಕಿ.ಮೀ ರಸ್ತೆಯನ್ನು ಕೆ-ಶಿಪ್-4 ಯೋಜನೆಯಡಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಲಾಂಟಾನ ತೆರವು : ಕೊಡಗು ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅರಣ್ಯ ಸಂಪತ್ತನ್ನು ಹೊಂದಿರುವ ಜಿಲ್ಲೆಯಾಗಿದ್ದು, ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎಲ್ಲೆಲ್ಲೂ ಲಾಂಟಾನ ಗಿಡ ತುಂಬಿಕೊಂಡಿದೆ. ಇದರಿಂದ ಇತರೆ ಕಾಡು ಜಾತಿಯ ಗಿಡಗಳು ಬೆಳೆಯುತ್ತಿಲ್ಲ. ಇದರಿಂದ ಸರ್ಕಾರ ಅರಣ್ಯದಲ್ಲಿ ಬೆಳೆದಿರುವ ಲಂಟಾನ ಹಾಗೂ ಯಫಟೋರಿಯಂ ಕಳೆಗಳನ್ನು ನರೇಗಾ ಯೋಜನೆಯ ಸಹಯೋಗದೊಂದಿಗೆ ಸ್ವಚ್ಛಗೊಳಿಸಿ ವನ್ಯಪ್ರಾಣಿಗಳಿಗೆ ಪೂರಕವಾದ ಹುಲ್ಲು ಬೆಳೆಯಲು ಕ್ರಮ ಕೈಗೊಳ್ಳಲು ಈ ಬಜೆಟ್ ನಲ್ಲಿ ನಿರ್ಧರಿಸಲಾಗಿದೆ. ಪರಿಹಾರ ಮೊತ್ತ ಏರಿಕೆ: ಕೊಡಗಿನಲ್ಲಿ ಆನೆ-ಮಾನವ, ವನ್ಯಪ್ರಾಣಿಗಳ ಸಂಘರ್ಷ ಹೆಚ್ಚಾಗಿದೆ. ಇದರಿಂದ ಅಪಾರ ಮಂದಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೀಗ ವನ್ಯ ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣದಲ್ಲಿ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ರು.15ರಿಂದ ರು.20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಎಂಟು ಆನೆ ಕಾರ್ಯಪಡೆ ಹಾಗೂ ಎರಡು ಚಿರತೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರು.17 ಕೋಟಿ ಒದಗಿಸುವ ಮೂಲಕ ಕಾರ್ಯ ಯೋಜನೆಯನ್ನು ಮುಂದುವರೆಸಲಾಗಿದೆ.

ವಿಶೇಷ ಪ್ಯಾಕೇಜ್ ಇಲ್ಲ : ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ರಸ್ತೆಗಳಿಗೆ ವಿಶೇಷ ಪ್ಯಾಕೇಜ್ ನಿರೀಕ್ಷೆ ಇತ್ತು. ಆದರೆ ಇದೀಗ ರಸ್ತೆಗಳ ಅಭಿವೃದ್ಧಿಗೆ ರು.20 ಕೋಟಿ ಅನುದಾನ ಮೀಸಲಿಡಲಾಗಿದೆ. ನಮ್ಮ ಸರ್ಕಾರದಲ್ಲಿ ರಸ್ತೆಗೆ ಮಾತ್ರ ನೂರು ಕೋಟಿ ರುಪಾಯಿ ಅನುದಾನ ಮೀಸಲಿಡಲಾಗಿತ್ತು ಎಂದು ಬಿಜೆಪಿ ಪ್ರಮುಖರು ಹೇಳುತ್ತಾರೆ. ಕೊಡಗಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಯೋಜನೆಗಳು ಘೋಷಣೆಯಾಗಿಲ್ಲ.

ಕೊಡಗು ವಿಶ್ವ ವಿದ್ಯಾಲಯ ಮುಚ್ಚುವುದು ಹಾಗೂ ವಿಲೀನ ಮಾಡುವುದು, ಅಲ್ಲದೆ ವಿವಿಗೆ ಅನುದಾನ ನೀಡುವ ಬಗ್ಗೆ ಯಾವುದೇ ಪ್ರಸ್ತಾಪ ಬಜೆಟ್ ನಲ್ಲಿ ಕಂಡುಬಂದಿಲ್ಲ.

-------------

ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಕುಶಾಲನಗರ ತಾಲೂಕು ಆಸ್ಪತ್ರೆ ನವೀಕರಣ ಸೇರಿದಂತೆ ಹಲವು ಘೋಷಣೆಯನ್ನು ಈ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಇತಿಹಾಸದಲ್ಲಿ ಯಾವ ಸರ್ಕಾರ ಕೂಡ ಕೊಡಗು ಜಿಲ್ಲೆಗೆ ಇಷ್ಟು ದೊಡ್ಡ ಗಾತ್ರದ ಬಜೆಟ್ ನೀಡಿಲ್ಲ. ನಮ್ಮ ಸರ್ಕಾರ ಕೊಡಗು ಜಿಲ್ಲೆಗೆ ಆದ್ಯತೆ ನೀಡಿದೆ.

-ಎ. ಎಸ್. ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕರು

-------------ಶಾಸಕ ಪೊನ್ನಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮೀಯರಾಗಿರುವುದರಿಂದ ಕೊಡಗು ಜಿಲ್ಲೆಗೆ ಈ ಬಾರಿ ಬಜೆಟ್ ನಲ್ಲಿ ಉತ್ತಮ ಯೋಜನೆಗಳು ಘೋಷಣೆಯಾಗಿದೆ. ಇದುವರೆಗೆ ಕೊಡಗು ಜಿಲ್ಲೆಗೆ ಇಷ್ಟು ದೊಡ್ಡ ಬಜೆಟ್ ಯಾರೂ ನೀಡಿಲ್ಲ. ಎಲ್ಲ ಜನಾಂಗಕ್ಕೂ ಅನುದಾನವನ್ನು ಸಮಾನವಾಗಿ ಘೋಷಣೆ ಮಾಡಲಾಗಿದೆ.

-ಕೊಲ್ಲಿರ ಬೋಪಣ್ಣ, ಅಧ್ಯಕ್ಷರು ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ

------------

ಈ ಬಜೆಟ್ ನಲ್ಲಿ ಕೂಡ ಸಿದ್ದರಾಮಯ್ಯ ಅವರು ಹಿಂದುಗಳನ್ನು ಕಡೆಗಣನೆ ಮಾಡಿದ್ದಾರೆ. ಅತಿಯಾದ ಅಲ್ಪಸಂಖ್ಯಾತರ ಓಲೈಕೆ ಕಂಡುಬಂದಿದೆ. ನಮ್ಮ ಸರ್ಕಾರದ ಯೋಜನೆಗಳನ್ನು ಇವರು ಅರ್ಧದಷ್ಟು ಕೂಡ ಮಾಡಿಲ್ಲ. ರೈತರಿಗೆ ಯಾವುದೇ ಯೋಜನೆ ನೀಡಿಲ್ಲ. ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಉಚಿತ ಪಂಪ್ ಸೆಂಟ್ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ .

-ಚೆರಿಯಪಂಡ ಸಚಿನ್ ಪೆಮ್ಮಯ್ಯ, ಸಂಚಾಲಕರು ಬಿಜೆಪಿ ಸಾಮಾಜಿಕ ಜಾಲತಾಣ ಕೊಡಗು

--------------

ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಬರೆ ಎಳೆಯುವ ಬಜೆಟ್ ಅನ್ನು ಮಂಡನೆ ಮಾಡಿದ್ದು, 1 ಲಕ್ಷದ 16 ಸಾವಿರ ಕೋಟಿ ರುಪಾಯಿ ಸಾಲ ತೆಗೆದುಕೊಂಡಿದ್ದಾರೆ. ಅಬಕಾರಿ, ಕಂದಾಯ ಸೇರಿದಂತೆ ಹಲವು ತೆರಿಗೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಸಂಕಷ್ಟ ತಂದಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ಹೊರತು ಕೊಡಗಿಗೆ ದೊಡ್ಡ ಯೋಜನೆ ಸಿಕ್ಕಿಲ್ಲ.

-ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವರು

------------------

ಕೊಡಗು ಜಿಲ್ಲೆ ರಾಜ್ಯದಲ್ಲಿಯೇ ಅತಿ ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಆದರೆ ಇಲ್ಲಿ ಪ್ರವಾಸಿಗರಿಗೆ ಸಾಕಷ್ಟು ಮೂಲ ಸೌಕರ್ಯದ ಕೊರತೆಯಿದೆ. ಆದರೆ ಕೊಡಗಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಇದು ನಿರಾಶಾದಾಯಕ ಬಜೆಟ್.

-ನಿತನ್ ಪೂಣಚ್ಚ, ಮ್ಯಾನೇಜಿಂಗ್ ಪಾಟ್ನರ್ ಟ್ರಾವೆಲ್ ನೆಕ್ಸ್ಟ್ ಟೂರ್ ಅಂಡ್ ಟ್ರಾವೆಲ್ ಮೈಸೂರು

-------------

ಈ ಬಜೆಟ್ ನಲ್ಲಿ ಸಾಲದ ಹೊರೆ ಹೆಚ್ಚಳವಾಗಿದೆ. ಈ ಹಿಂದಿನ ಬಜೆಟ್ ಘೋಷಣೆಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದಾರೆ. ಕೊಡಗಿಗೆ ನಿರಾಶಾದಾಯಕವಾಗಿದೆ. ರಸ್ತೆಗೆ ರು.20 ಕೋಟಿ ಮಾತ್ರ ಮೀಸಲು ಮಾಡಿದ್ದಾರೆ. ಇದು ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ಸಾಲುವುದಿಲ್ಲ.

-ಶಿವಕುಮಾರ್ ನಾಣಯ್ಯ, ಸದಸ್ಯರು ಬಿಜೆಪಿ ಕಾರ್ಯಕಾರಿಣಿ

----------------

ಕೊಡಗಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಗೆ ಅಧಿಕ ಅನುದಾನ ಒದಗಿಸಲಾಗಿದೆ. ಕಾಡಾನೆಗಳ ಉಪಟಳದಿಂದ ಮುಕ್ತಿ ಹೊಂದಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಆನೆ ಕಂದಕ ಅಥವಾ ಸೋಲಾರ್ ತಂತಿ ನಿರ್ಮಾಣಕ್ಕೆ ಬಜೆಟ್ ನಲ್ಲಿ ವಿಶೇಷ ಅನುದಾನ ಒದಗಿಸಲಾಗಿದೆ. ಆನೆ ತುಳಿತ ಅಥವಾ ಇತರ ಪ್ರಾಣಿ ದಾಳಿಗಳಿಂದ ಮೃತಪಟ್ಟವರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ರು.15 ಲಕ್ಷದಿಂದ ರು. 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

-ಸಂಕೇತ್ ಪೂವಯ್ಯ, ರಾಜ್ಯ ವಕ್ತಾರರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ