ಮಡಿಕೇರಿ: ಕೊಡವ ಜನಾಂಗದ ಆಚಾರ–ವಿಚಾರ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿಯಲ್ಲಿ ನಡೆದ ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಕ್ಕಾಟಿರ ಗ್ರೀಷ್ಮ ಬೋಜಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಕೊಡವ ಸಮಾಜ ಮಡಿಕೇರಿಯ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಪೆಮ್ಮಚಂಡ ವಿನಿತ ದೇವಮ್ಮ, ಡಾ. ಮುಕ್ಕಾಟಿರ ಗ್ರೀಷ್ಮ ಬೋಜಮ್ಮ, ಕೊಡವ ಸಮಾಜ ಮಡಿಕೇರಿ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಮಾತನಾಡಿದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಕ್ಕಾಟಿರ ಗ್ರೀಷ್ಮ ಬೋಜಮ್ಮ ಹಾಗೂ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಪೆಮ್ಮಚಂಡ ವಿನಿತ ದೇವಮ್ಮ ಅವರನ್ನು ಗೌರವಿಸಲಾಯಿತು.


ತೀರ್ಪುಗಾರರಾಗಿ ಸಾಹಿತಿ ಅಂಚೆಟಿರ ಫ್ಯಾನ್ಸಿ ಮುತ್ತಣ್ಣ ಹಾಗೂ ಕಳಿಚಂಡ ಡಿಂಪಲ್ ಕಾರ್ಯನಿರ್ವಹಿಸಿದರು.

ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಸ್ವಾಗತಿಸಿ, ಪೊಮ್ಮಕ್ಕಡ ಕೂಟದ ಕಾರ್ಯವೈಖರಿ ಹಾಗೂ ಚಟುವಟಿಕೆಗಳ ಕುರಿತು ವಿವರಿಸಿದರು. ಕಾರ್ಯದರ್ಶಿ ಕೂಪದಿರ ಜೂನಾ ವಿಜಯ್, ಖಜಾಂಜಿ ಉಳ್ಳಿಯಡ ಸಚಿತಾ ಗಂಗಮ್ಮ, ಜಂಟಿ ಕಾರ್ಯದರ್ಶಿ ಚೆಟ್ರಂಡ ವಸಂತಿ ಹಾಗೂ ಸಲಹೆಗಾರರಾದ ಮುಕ್ಕಾಟಿರ ಪೊನ್ನಮ್ಮ ಉಪಸ್ಥಿತರಿದ್ದರು

ಸಂಭ್ರಮದ ಕೂಟ:

ಕೊಡಗು ನೆಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಪಾರಂಪರಿಕ ಆಹಾರ ಪದ್ಧತಿಯ ವೈವಿಧ್ಯತೆಯನ್ನು ಅನಾವರಣ ಗೊಳಿಸುವ ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ ಮಡಿಕೇರಿಯಲ್ಲಿ ಸಂಭ್ರಮದಿಂದ ನಡೆಯಿತು.

ಮರೆಯಾಗುತ್ತಿರುವ ಕೊಡವ ಪಾರಂಪರಿಕ ಆಹಾರ ಪದ್ಧತಿ, ಆಚರಣೆಗಳು, ಜನಪದ ಸಂಸ್ಕೃತಿ ಹಾಗೂ ಪುರಾತನ ಜೀವನ ಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ ಅರ್ಥಪೂರ್ಣ ವೇದಿಕೆಯಾಗಿ ಗಮನ ಸೆಳೆಯಿತು.

ಕಕ್ಕಡ ತೀನಿ ಪೈಪೋಟಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಕ್ಕಡ ಪಾಯಸ, ಮದ್ದ್ ಪುಟ್ಟ್, ನಾಟಿ ಕೋಳಿ ಕರಿ, ಞಂಡ್ ಕರಿ, ಪಾಪುಟ್ಟ್, ನಾಡ್ ಕುಮ್ಮು ಕರಿ, ಚಿಟ್ಟಾಣಿ ಪುಟ್ಟ್, ಕೊವುಲೆ ಪುಟ್ಟ್ ಸೇರಿದಂತೆ ಹಲವು ಪಾರಂಪರಿಕ ಖಾದ್ಯಗಳು ಸ್ಪರ್ಧೆಯಲ್ಲಿ ಗಮನ ಸೆಳೆದವು. ಅಪರೂಪದ ಎಳ್ಳಡಿಗೆ, ಬಾಳೆನೂರು ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳೂ ಪ್ರದರ್ಶನಗೊಂಡವು.

ಇಂದಿನ ಪೀಳಿಗೆಗೆ ಅಪರಿಚಿತವಾಗುತ್ತಿರುವ ಹಲವು ಕೊಡವ ಪಾರಂಪರಿಕ ಖಾದ್ಯಗಳು ಒಂದೇ ವೇದಿಕೆಯಲ್ಲಿ ಕಾಣಿಸಿ ಕೊಂಡವು.

ಕೊಡವರ ಪಾರಂಪರಿಕ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ ನೂಪ್‌ಟ್ಟ್ ವರ, ಸೇಕಲ, ಚಂದೂಕ, ಕರಿಚಟ್ಟಿ, ಬಿಂದಿಗೆ, ಚೊಂಬು, ಚಿಟ್ಟಾಣಿ ಪುಟ್ಟ್ ಕಲ್ಲ್, ಎಣ್ಣೆಚರ್ಕ್, ಕಿಂಡಿ ಸೇರಿದಂತೆ ಹಲವು ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಹಿಂದಿನ ಕಾಲದಲ್ಲಿ ಕೊಡವರು ಬಳಸುತ್ತಿದ್ದ ಗೃಹ ಬಳಕೆ ವಸ್ತುಗಳು ಹಾಗೂ ಜೀವನ ಪದ್ಧತಿಯ ಪರಿಚಯವನ್ನು ಈ ಪ್ರದರ್ಶನ ನೀಡಿತು.

ವಿವಿಧ ಕಳಿ ಪೈಪೋಟಿಗಳು, ಚೋದು–ಚೋದ್ಯ, ಕೊಡವ ಸಾಂಪ್ರದಾಯಿಕ ನೃತ್ಯ, ಸಂಗೀತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.

25 ಲಕ್ಷ ರು. ಅನುದಾನ ಭರವಸೆ:

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಈ ಆಚರಣೆಯು ಕೊಡಗಿನ ಸಂಸ್ಕೃತಿಯ ಭಾಗವಾಗಿದೆ. ಮಡಿಕೇರಿ ಕೊಡವ ಪೊಮ್ಮಕ್ಕಡ ಒಕ್ಕೂಟದ ಕಟ್ಟದ ನಿರ್ಮಾಣಕ್ಕೆ 25 ಲಕ್ಷ ಬಿಡುಗಡೆಗೊಳಿಸಿದ್ದು, ಈ ಬಾರಿ 25 ಲಕ್ಷ ರು. ನೀಡುವುದಾಗಿ ಭರವಸೆ ನೀಡಿದರು.