ಕೊಡವ ಅಭಿವೃದ್ಧಿ ನಿಗಮವು ಶಾಸಕ ಎ.ಎಸ್. ಪೊನ್ನಣ್ಣನವರಿಂದಾಗಿ ಕೊಡವರಿಗೆ ದೊರಕಿದ ಶ್ರೇಷ್ಠ ಕೊಡುಗೆಯಾಗಿದೆ. ಇದು ಯುನೈಟೆಡ್ ಕೊಡವ ಆರ್ಗನೈಸೇಷನ್ -ಯುಕೊ ಸಂಘಟನೆಯ ಪರಿಕಲ್ಪನೆ ಹಾಗೂ ಹೊರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಕೊಡವರು ಇದನ್ನು ಸಮಗ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಅಭಿವೃದ್ಧಿ ನಿಗಮವು ಶಾಸಕ ಎ.ಎಸ್. ಪೊನ್ನಣ್ಣನವರಿಂದಾಗಿ ಕೊಡವರಿಗೆ ದೊರಕಿದ ಶ್ರೇಷ್ಠ ಕೊಡುಗೆಯಾಗಿದೆ. ಇದು ಯುನೈಟೆಡ್ ಕೊಡವ ಆರ್ಗನೈಸೇಷನ್ -ಯುಕೊ ಸಂಘಟನೆಯ ಪರಿಕಲ್ಪನೆ ಹಾಗೂ ಹೊರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಕೊಡವರು ಇದನ್ನು ಸಮಗ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.

ಅರೆಕಾಡು- ಹೊಸ್ಕೇರಿ ಗ್ರಾಮದಲ್ಲಿ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಶನ್ ಅಸೋಸಿಯೇಷನ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ‘ಕೊಡವ ಭವನ’ದಲ್ಲಿ ಕೆಡಬ್ಲ್ಯುಆರ್‌ ಎ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕೊಡವರ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ನೂತನವಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಬೇಡಿಕೆಯನ್ನಿಟ್ಟು ಕಳೆದ ಒಂದು ದಶಕದಿಂದ ಪ್ಯವಸ್ಥಿತವಾಗಿ ಹೋರಾಟ ನಡೆಸುತ್ತಾ ಬರಲಾಗಿತ್ತು. ಇದೀಗ ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರಿಗೆ ಕೊಡವರ ಮೇಲಿರುವ ಕಾಳಜಿ ಹಾಗೂ ಸರ್ಕಾರದಲ್ಲಿ ಅವರಿಗಿರುವ ಪ್ರಭಾವದಿಂದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಕೊಡವರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಘೋಷಿಸುವಂತಾಗಿದೆ. ಇದನ್ನು ಕೊಡವರು ಸದಾ ಮನಸಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.

ಜಗತ್ತು ಕೊಡವರು ವಿಶಿಷ್ಟ ಜನಾಂಗವೆಂಬ ಬಿರುದನ್ನು ನೀಡಿದ್ದು, ಇದನ್ನು ಪ್ರತಿಯೊಬ್ಬ ಕೊಡವರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಕೊಡವರು ತಮ್ಮ ನೆಲ, ಜಲ, ಭಾಷೆ, ಪರಂಪರೆ ಹಾಗೂ ಸಂಸ್ಕೃತಿ ಬಗ್ಗೆ ನಿರ್ಲಕ್ಷ ವಹಿಸಿದರೆ ಕೊಡವರ ವೈಶಿಷ್ಟ್ಯತೆ ಉಳಿಯಲು ಸಾಧ್ಯವಿಲ್ಲ. ಕೇವಲ ತೋರಿಕೆಯ ಕೊಡವಾಮೆಯಿಂದ ಯಾವುದೇ ಪ್ರಯೋಜನವಿಲ್ಲ. ಕೊಡವಾಮೆಯ ಸಮಗ್ರತೆಯೊಂದಿಗೆ ಜೀವಿಸಬೇಕು. ಹಾಗಿದ್ದಾಗ ಮಾತ್ರ ಕೊಡವಾಮೆಯ ಮಹತ್ವ ಹಾಗೂ ವೈಶಿಷ್ಟ್ಯತೆ ಅನುಭವಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ಮೇಲ್ಪಂಕ್ತಿಯನ್ನು ಹಾಕಿ ಕೊಡುವ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಕೊಡವರ ಹೆಸರಿನಲ್ಲಿ ನಡೆಯುವ ಹೋರಾಟಗಳು ಡಂಬಾಚಾರಿಕೆಯಿಂದ ಕೂಡಿರಬಾರದು, ಸೂಕ್ಮಾತಿಸೂಕ್ಷ್ಮ ಅಲ್ಪಸಂಖ್ಯಾತ ಕೊಡವರಲ್ಲಿ ಬಹುಪಾಲು ಮುಗ್ದತೆ ಇದೆ. ಇದರಿಂದಾಗಿ ಕೊಡವರನ್ನು ವಂಚಿಸುವುದು ಸುಲಭ. ಆದರೆ ಕೊಡವ ಎಂಬ ತಲೆಬರಹವನ್ನು ಇಟ್ಟುಕೊಂಡು ಕೊಡವರನ್ನು ವಂಚಿಸುವ ಪ್ರಯತ್ನಗಳು ಇತಿಹಾಸದಿಂದಲೂ ನಿರಂತರ ನಡೆಯುತ್ತಾ ಬಂದಿದೆ. ಆದರೆ ಅಂತಹ ದುಷ್ಟ ಶಕ್ತಿಗಳು ಕಾಲ ಕಾಲಕ್ಕೆ ನಿರ್ನಾಮವಾಗುತ್ತಲೇ ಬಂದಿವೆ ಎಂಬುವುದನ್ನು ಮರೆಯುವಂತಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.

ಇದೇ ಸಂಧರ್ಭ ಕೊಡವ ಅಭಿವೃದ್ಧಿ ನಿಗಮ ಕುರಿತು ಸಭೆಯಲ್ಲಿ ಕೇಳಿದ ಹಲವು ಪ್ರಶ್ನೆಗಳಿಗೆ ಮಂಜು ಚಿಣ್ಣಪ್ಪ ಉತ್ತರಿಸಿ, ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಡಬ್ಲ್ಯುಆರ್‌ ಎ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಕೊಡವ ಭವನ ಸ್ಥಾಪಿಸಿದರ ಹಿಂದೆ ಅರ್ರೆಕಾಡು ಹೊಸ್ಕೇರಿ ಗ್ರಾಮದ ಕೊಡವರು ಒಗ್ಗಟ್ಟಿನಿಂದ ಸೇರಿ ಕೊಡವ ಜನಾಂಗದ ಏಳಿಗೆಗೆ ಪೂರಕವಾದ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳುವ ಸ್ಪಷ್ಟ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಇಂದಿನ ಈ ಚಿಂತನಾ ಸಭೆಯನ್ನು ಏರ್ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಹಲವಾರು ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಹೇಳಿದರು.

ಮಂಜು ಚಿಣ್ಣಪ್ಪನವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಲ್ಲಚಂಡ ವಿಠಲ ಕಾವೇರಪ್ಪ ಸ್ವಾಗತಿಸಿ, ಕಾರ್‍ಯದರ್ಶಿ ನೆಲ್ಲಮಕ್ಕಡ ಪವನ್ ವಂದಿಸಿದರು.

ಸಭೆಯಲ್ಲಿ ಯುಕೊ ಸದಸ್ಯರಾದ ನೆಲ್ಲಮಕ್ಕಡ ಮಾದಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಪುದಿಯೊಕ್ಕಡ ದಿನೇಶ್ ಮತ್ತು ಅರೆಕಾಡು ಹೊಸ್ಕೇರಿ ಕೆಡಬ್ಲ್ಯುಆರ್‌ ಎ ಸದಸ್ಯರು ಉಪಸ್ಥಿತರಿದ್ದರು.