ಸಾರಾಂಶ
ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ 2024 ಕ್ರೀಡೋತ್ಸವಕ್ಕೆ ಮೈದಾನದ ತಯಾರಿಗೆ ಭೂಮಿ ಪೂಜೆ ನೆರವೇರಿದೆ. ನಾಪೋಕ್ಲು ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಬುಧವಾರ ಪೂಜಾ ವಿಧಿ ವಿಧಾನಗಳೊಂದಿಗೆ ಕ್ರೀಡಾ ಸಮಿತಿಯ ಪ್ರಮುಖರು ಹಾಗೂ ಕುಟುಂಬಸ್ಥರು ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ 2024 ಕ್ರೀಡೋತ್ಸವಕ್ಕೆ ಮೈದಾನದ ತಯಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.ಸ್ಥಳೀಯ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಬುಧವಾರ ಪೂಜಾ ವಿಧಿ ವಿಧಾನಗಳೊಂದಿಗೆ ಕ್ರೀಡಾ ಸಮಿತಿಯ ಪ್ರಮುಖರು ಹಾಗೂ ಕುಟುಂಬಸ್ಥರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಬೊಟ್ಟೋಳಂಡ ಗಣೇಶ್ ಮಾತನಾಡಿ, ಕ್ರೀಡಾಕೂಟವು ಏ. 18ರಿಂದ 23ರ ವರೆಗೆ ಇಲ್ಲಿ ಆಯೋಜಿಸಲಾಗಿದೆ. ಎಲ್ಲರ ಸಹಕಾರದಿಂದ ಕೆಲಸ ಕಾರ್ಯಗಳು ಸಾಂಗವಾಗಿ ಜರುಗುತ್ತಿದೆ. ಇದೀಗಾಗಲೇ 150 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ನೋಂದಾವಣೆಗೆ ಬಾಕಿ ಉಳಿದವರು ಈ ತಿಂಗಳ 10 ರ ವರೆಗೆ ಸಮಯಾವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ನೋಂದಾಯಿಸಿ ಕ್ರೀಡೋತ್ಸವ ಯಶಸ್ವಿಗೊಳಿಸಬೇಕು ಎಂದರು. ಕ್ರೀಡಾ ಸಮಿತಿ ಸಂಚಾಲಕರಾದ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಪ್ರಾರ್ಥನೆ ಸಲ್ಲಿಸಿದರು. ಯಾವುದೇ ತರದ ವಿಘ್ನಗಳಿಲ್ಲದೇ ಸುಸೂತ್ರವಾಗಿ ಕ್ರೀಡಾಕೂಟವು ಜರುಗಲಿ ಎಂದು ಪ್ರಾರ್ಥಿಸಿದರು.ಪೂಜಾ ಕಾರ್ಯವನ್ನು ನಾಪೋಕ್ಲು ಶ್ರೀ ಭಗವತಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಭಟ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ 2024 ಕ್ರೀಡಾ ಸಮಿತಿಯ ಕಾರ್ಯದರ್ಶಿ ಬೊಟ್ಟೋಳಂಡ ಚೇತನ್, ಸಹ ಕಾರ್ಯದರ್ಶಿ ಪಳಂಗಪ್ಪ, ಖಜಾಂಜಿ ರಮೇಶ್ ಪೊನ್ನಯ್ಯ, ಹಿರಿಯರಾದ ಗಣೇಶ್, ಗಿರೀಶ್ ಮಂದಪ್ಪ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ, ಶಿವಣ್ಣ ಎಂ ಎಸ್ ಸೇರಿದಂತೆ ಕ್ರೀಡಾ ಸಮಿತಿ ನಿರ್ದೇಶಕರು ಹಾಗೂ ಕುಟುಂಬಸ್ಥರು ಇನ್ನಿತರರು ಉಪಸ್ಥಿತರಿದ್ದರು.