ಕೊಡವ ಕೌಟುಂಬಿಕ ಹಾಕಿ: 19 ತಂಡಗಳು ಮುನ್ನಡೆ

| Published : Apr 09 2024, 12:49 AM IST

ಸಾರಾಂಶ

ಕೊಡವ ಕುಟುಂಬಗಳ ನಡುವಿನ ಹಾಕಿ ಸೋಮವಾರದ ಪಂದ್ಯಗಳಲ್ಲಿ 19 ತಂಡಗಳು ಮುನ್ನಡೆ ಸಾಧಿಸಿದೆ. ಜನರಲ್‌ ಕೆ.ಎಸ್‌. ತಿಮ್ಮಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿದೆ.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ಐನಂಡ, ಬಿದ್ದಂಡ, ಐಚೆಟ್ಟಿರ, ಕಂಬೆಯಂಡ, ಚಂಗೇಟಿರ, ಚೋಕಿರ, ಮಂದನೆರವಂಡ ಸೇರಿದಂತೆ 19 ತಂಡಗಳು ಮುನ್ನಡೆ ಸಾಧಿಸಿದವು.

ಐನಂಡ ತಂಡವುಚೇರಂಡ ತಂಡದ ವಿರುದ್ಧ 6-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಮೇಕೆರಿರ ತಂಡವು ಕಾಂಗೀರ ವಿರುದ್ಧ 6-2ರ ಅಂತರದ ಮುನ್ನಡೆ ಸಾಧಿಸಿತು. ಉಳಿದಂತೆ ಬಿದ್ದಂಡ ಚೋಳಂಡ ವಿರುದ್ಧ 3-1 ರಲ್ಲಿ ಜಯ ಸಾಧಿಸಿತು. ಐಚೆಟ್ಟಿರ ಮಾರ್ತಂಡ ವಿರುದ್ಧ ಟೈ ಬ್ರೇಕರ್ ನಲ್ಲಿ 5 -4 ಅಂತರದ ಗೆಲುವು ಸಾಧಿಸಿತು. ಕಂಬೇಯಂಡ ಕೋಲು ಮಾದಂಡ ವಿರುದ್ಧ 4- 0 ಅಂತರದಿಂದ, ಮರುವಂಡ ಪೋರಂಗಡ ವಿರುದ್ಧ 4-0 ಅಂತರದಿಂದ, ಚೋಕಿರ ಚೆಯ್ಯಂಡ ವಿರುದ್ಧ 1-0 ಅಂತರದಿಂದ, ಮಂದನೆರವಂಡ ಕೋಲತಂಡ ವಿರುದ್ಧ 5- 0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.

ಮುದ್ದಂಡ ತಂಡದ ಆಟಗಾರರು ಕೇವಲ ಒಂದು ಗೋಲು ಗಳಿಸಿ ಮಾಚಂಡ ವಿರುದ್ಧ ಜಯ ಸಾಧಿಸಿದರು. ಮಾಣಿರ ವಿರುದ್ಧ ಕಾಂಡೇರತಂಡಕ್ಕೆ 3-0 ಅಂತರದ ಜಯ ಲಭಿಸಿತು. ಮರುವಂಡ ಪೋರಂಗಡ ವಿರುದ್ಧ 4-0 ಅಂತರದಿಂದ, ಮುಕ್ಕಾಟಿರ (ಬೋಂದ) 4-0 ಅಂತರದಿಂದ ಬಿದ್ದಾಟಂಡ ವಿರುದ್ದ, ಅಳಮೇಂಗಡ ಬಟ್ಟಿಯಂಡ ವಿರುದ್ದ 4- 0 ಅಂತರದಿಂದ, ಚಂಗುಲಂಡ ಪಾಲೆಯಂಡ ವಿರುದ್ಧ 4-0 ಅಂತರದಿಂದ ಮುನ್ನಡೆ ಸಾಧಿಸಿದವು. ಚೇಂದಿರ ಮುಕ್ಕಾಟಿರ (ಮೂವತ್ತೋಕ್ಲು) ವಿರುದ್ಧ 2-1 ಒಂದು ಅಂತರದ ಗೆಲುವು ಸಾದಿಸಿತು. ಚೌರಿರ( ಹೊದ್ದೂರು) ತಂಡ 5 -0 ಅಂತರದಿಂದ ಐಯ್ಯನೆರವಂಡ ವಿರುದ್ಧ ಗೆಲುವು ಸಾಧಿಸಿತು. ಕೊಳ್ಳಿರ ಮತ್ತು ಬೊಳಕಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3- 2 ಅಂತರದಿಂದ ಕೊಳ್ಳಿರ ಮುನ್ನಡೆ ಸಾಧಿಸಿತು. ಮಲ್ಲಚ್ಚಿರ ಐತಿಚಂಡ ವಿರುದ್ಧ 2-1 ಅಂತರದ ಮುನ್ನಡೆ ಸಾಧಿಸಿತು. ಅಪ್ಪನೆರವಂಡ ಪಾಲೆಂಗಡ

ವಿರುದ್ಧ 2-0 ಅಂತರದ ಜಯ ಸಾಧಿಸಿತು. ಚಂಗೇಟಿರ ಮೊಳ್ಳೆರ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿತು.

ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ಕ್ರೀಡೆಯೊಂದಿಗೆ ಯುವ ಜನಾಂಗಕ್ಕೆ ಕಂಕಣ ಭಾಗ್ಯವನ್ನು ಕಲ್ಪಿಸುವ ವೇದಿಕೆಯಾಗಿಯೂ ಪರಿವರ್ತನೆಗೊಂಡಿತು. ಜಿಲ್ಲೆಯ ಕಾಫಿ ತೋಟದೊಂದಿಗೆ ಕೃಷಿ ಬದುಕನ್ನು ಉತ್ತಮವಾಗಿ ರೂಪಿಸಿಕೊಂಡಿರುವ ಕೊಡವ ಯುವಕರು ಮದುವೆಯ ವಯಸ್ಸು ಕಳೆದಿದ್ದರೂ ಕಂಕಣ ಭಾಗ್ಯವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಕೊಡವ ಯುವಕ ಯುವತಿಯರ ಬದುಕಿನಲ್ಲಿ ಹೊಸದೊಂದು ಆಶಾಭಾವವನ್ನು ಮೂಡಿಸುವ ಸಲುವಾಗಿ ಕೊಂಡ್ಯೋಳಂಡ ಕುಟುಂಬದವರು ಕಾರ್ನಿವಲ್ ಹೆಸರಿನೊಂದಿಗೆ ವಧು ವರರ ವೇದಿಕೆಯನ್ನು ಹುಟ್ಟು ಹಾಕಿ ಹಲವು ಅವಿವಾಹಿತರ ಬದುಕಿಗೆ ಒಂದು ಅರ್ಥ ರೂಪಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಹಾಕಿ ಕ್ರೀಡಾಕೂಟದ ನಡುವೆ ವಧು ಮತ್ತು ವರರ ಮಾಹಿತಿದಾರರನ್ನು ಒಂದೇ ವೇದಿಕೆಯಲ್ಲಿ ಪರಸ್ಪರ ಒಗ್ಗೂಡಿಸಿ ಮಾಹಿತಿ ಹಂಚಿಕೊಳ್ಳಲಾಯಿತು. ಯುವಕ ಯುವತಿಯರ ಸ್ವ ವಿವರವನ್ನು ಪಡೆಯಲಾಯಿತು. 50ಕ್ಕೂ ಅಧಿಕ ಮಂದಿ ಹೆಸರು ದಾಖಲಿಸಿದರು. ನಾಪೋಕ್ಲು ಕೊಡವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಕುಟುಂಬದವರು ವಾಟ್ಸಾಪ್ ಗುಂಪು ಮಾಡಿ ಮಾಹಿತಿ ಹಂಚಿಕೊಂಡಿರುವುದರಿಂದ ಹಲವು ಯುವಕ ಯುವತಿಯರಿಗೆ ಅನುಕೂಲವಾಗಲಿದೆ ಎಂದರು. ಯುವಕ ಯುವತಿಯರಿಗೆ ಕಂಕಣ ಭಾಗ್ಯ ಕಲ್ಪಿಸುವ ನಿಟ್ಟಿನಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಕೊಡವ ಜನಾಂಗದಲ್ಲಿ ಬಹುತೇಕ ಯುವಕ ಯುವತಿಯರಿಗೆ ಸೂಕ್ತ ಜೋಡಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂದಿನ ವಾರದಲ್ಲಿ ಇದೇ ವೇದಿಕೆಯಲ್ಲಿ ಸಂಬಂಧ ಬೆಸೆದವರಿಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಪತ್ರಿಕೆಗೆ ತಿಳಿಸಿದರು.

ಇಂದಿನ ಪಂದ್ಯಗಳು: ಮೈದಾನ ಒಂದು: 9 ಗಂಟೆಗೆ ಬೊಳಿಯಾಡಿರ-ಕುಳ್ಳಚಂಡ, 10 ಗಂಟೆಗೆ ಹಂಚೆಟ್ಟಿರ-ಉದಿಯಂಡ, 11 ಗಂಟೆಗೆ ಮಣವಟ್ಟೀರ-ನೆರಪಂಡ, 1 ಗಂಟೆಗೆ ಪೊನ್ನಚೆಟ್ಟೀರ-ಮಾಲೇಟಿರ(ಕೆದಮುಳ್ಳೂರು), 2 ಗಂಟೆಗೆ ಚೆಪ್ಪುಡಿರ -ಅಮ್ಮಾಟಂಡ, 3 ಗಂಟೆಗೆ ಚೊಟ್ಟೇಯಂಡಮಾಡ-ಕಂಜಿತಂಡ

ಮೈದಾನ ಎರಡು: 9 ಗಂಟೆಗೆ ಬಾಳೆಯಡ-ಕಾಚಪನೆರ, 10 ಗಂಟೆಗೆ ಹಂಚೆಟ್ಟಿರ-ಉದಿಯಂಡ, 11 ಗಂಟೆಗೆ ಮಣವಟ್ಟಿರ-ನೆರ್ಪಂಡ, 1ಗಂಟೆಗೆ ಪೊನ್ನಚೆಟ್ಟಿರ-ಮಾಲೆಟಿರ(ಕೆದಮುಳ್ಳೂರು), 2 ಗಂಟೆಗೆ ಚೆಪ್ಪುಡಿರ-ಅಮ್ಮಾಟಂಡ, 3 ಗಂಟೆಗೆ ಚೊಟ್ಟೆಯಂಡಮಾಡ-ಕಾಂಜಿತಂಡ

ಮೈದಾನ 3: 9 ಗಂಟೆಗೆ ಕೇಲೆಟಿರ-ಅಟ್ರಂಗಡ, 10 ಗಂಟೆಗೆ ಪಾಲಂದಿರ-ಮುಂಡೋಟಿರ, 11 ಗಂಟೆಗೆ ಕಡೇಮಾಡ-ಮೈಂದಪಂಡ, 1ಗಂಟೆಗೆ ಪಾಲೆಯಡ-ದಾಸಂಡ

2 ಗಂಟೆಗೆ ಕರ್ತಮಡ-ಪಾಲಚಂಡ, 3ಗಂಟೆ ಗೆ ಮೊಣ್ಣಂಡ-ಮಾಚಂಗಡ