ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಮಾ.30ರಿಂದ: 360 ತಂಡ ನೋಂದಣಿ

| Published : Mar 23 2024, 01:01 AM IST

ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಮಾ.30ರಿಂದ: 360 ತಂಡ ನೋಂದಣಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷ 24ನೇ ಕೊಡವ ಕೌಟುಂಬಿಕ ಹಾಕಿ ಕೂಟ ಕುಂಡ್ಯೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಯಲಿದೆ. ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಾ.30ರಿಂದ ನಡೆಯಲಿರುವ ಕೂಟಕ್ಕೆ ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಾ.30ರಿಂದ ನಡೆಯಲಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟಕ್ಕೆ ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಕ್ರೀಡಾಕೂಟದ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಅಧ್ಯಕ್ಷ ರಮೇಶ್ ಮುದ್ದಯ್ಯ ಹಾಗೂ ಪ್ರಮುಖರು,

ಈ ವರ್ಷ 24ನೇ ಹಾಕಿ ಹಬ್ಬವನ್ನು ಕುಂಡ್ಯೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಸ್ಥಳೀಯ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024 ರ ಅಂತಿಮ ಪಂದ್ಯಾಟವನ್ನು ಸುಮಾರು 50 ಸಾವಿರ ಕ್ರೀಡಾಭಿಮಾನಿಗಳು ವೀಕ್ಷಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಭಾರತೀಯ ಹಾಕಿಯ ತೊಟ್ಟಿಲು ಎಂದೇ ಪರಿಗಣಿಸಲ್ಪಟ್ಟಿರುವ ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆ ಹೊಂದಿದೆ. 50ಕ್ಕೂ ಹೆಚ್ಚು ಕೊಡವ ಅಂತಾರಾಷ್ಟ್ರೀಯ ಹಾಕಿ ಆಟಗಾರರು ಹಾಕಿ ಕ್ರೀಡೆಯ ಪರಂಪರೆಗೆ ಕೊಡುಗೆ ನೀಡಿದ್ದಾರೆ. ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸಹೋದರ ಕಾಶಿಯವರಿಂದ ಕೊಡವ ಹಾಕಿ ಉತ್ಸವ ಆರಂಭವಾಯಿತು. 1997 ರಲ್ಲಿ ಕರಡದಲ್ಲಿ ಪಾಂಡಂಡ ಕುಟುಂಬ ಮೊದಲ ಬಾರಿಗೆ ಆಯೋಜಿಸಿದ್ದ ಹಾಕಿಹಬ್ಬದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು ಎಂದು ವಿವರಿಸಿದರು.

ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 360 ತಂಡಗಳ ನೋಂದಣಿಯೊಂದಿಗೆ ಹೊಸ ದಾಖಲೆ ಸೃಷ್ಟಿಸುವ ಮೂಲಕ ಪ್ರತಿಷ್ಠಿತ ಕಪ್ ಗಾಗಿ ಸೆಣಸಾಡುತ್ತಿರುವುದು ವಿಶೇಷ. ಕುಂಡ್ಯೋಳಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಹಾಕಿ ಹಬ್ಬ ಆಯೋಜಿಸುವ ಮೂಲಕ ಸಮುದಾಯದ ಬಾಂಧವ್ಯ ಬೆಳೆಸುವ ಮತ್ತು ಕೊಡವ ಪರಂಪರೆ ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಉದ್ಘಾಟನಾ ಪಂದ್ಯ: ಮಾ.30ರಂದು ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಕೂರ್ಗ್ 11 ತಂಡದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆಡುವ ಸಾಧ್ಯತೆಗಳಿದೆ. ಇದಕ್ಕೂ ಮೊದಲು ಸಾಯಿ ಮಡಿಕೇರಿ ಮತ್ತು ಸಾಯಿ ಪೊನ್ನಂಪೇಟೆ ಬಾಲಕಿಯರ ತಂಡಗಳ ನಡುವೆ ಪಂದ್ಯಾಟ ಆಯೋಜಿಸಲಾಗಿದೆ. ಕೊಡವ ಹಾಕಿ ಅಕಾಡೆಮಿ ಕಳೆದ ವರ್ಷದಿಂದ ಒಂದು ಕೆ.ಜಿ. ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಿದೆ. ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ‘ಮ್ಯಾನ್ ಆಫ್ ದಿ ಫೆಸ್ಟಿವಲ್’ ಆಟಗಾರನಿಗೆ ‘ಏತರ್’ ಸ್ಕೂಟರ್ ಸಂಸ್ಥೆ ಎಲೆಕ್ಟ್ರಿಕ್ ಸ್ಕೂಟರ್ ನ್ನು ಬಹುಮಾನವಾಗಿ ನೀಡಲಿದೆ. ಬೆಂಗಳೂರಿನ ಪ್ರತಿಷ್ಠಿತ ಆರ್.ವಿ ವಿಶ್ವ ವಿದ್ಯಾನಿಲಯ ಹಾಕಿ ಪಂದ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಕಿ ತಂಡವನ್ನು ರಚನೆ ಮಾಡಲು ಮುಂದಾಗಿದೆ. ಕೊಡವ ಹಾಕಿ ಅಕಾಡೆಮಿ ಶಿಫಾರಸ್ ಮಾಡುವ ಹಾಕಿಪಟುವಿಗೆ ಕಾಲೇಜ್ ನಲ್ಲಿ ಓದಲು ಅವಕಾಶ ಮತ್ತು ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ ಎಂದು ಪ್ರಮುಖರು ತಿಳಿಸಿದರು.

ಲಕ್ಷ ರು .ಬಹುಮಾನ: ಕುಂಡ್ಯೋಳಂಡ ಹಾಕಿ ಹಬ್ಬದ ವಿಜೇತ ತಂಡಕ್ಕೆ 4 ಲಕ್ಷ ರು., ದ್ವಿತೀಯ 3 ಲಕ್ಷ ರು., ತೃತೀಯ 2 ಲಕ್ಷ ರು. ಮತ್ತು ನಾಲ್ಕನೇ ಸ್ಥಾನದ ತಂಡಕ್ಕೆ 1 ಲಕ್ಷ ರು. ನಗದು ಮಾತ್ರವಲ್ಲದೆ ಬಹುಮಾನಗಳನ್ನು ನೀಡಲಾಗುವುದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಕಿ ಹಬ್ಬ ಉದ್ಘಾಟಿಸಲಿದ್ದಾರೆ. ಖ್ಯಾತ ಬರಹಗಾರ ಕಂಬೀರಂಡ ಕಾವೇರಿ ಪೊನ್ನಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ದಿನೇಶ್ ಕಾರ್ಯಪ್ಪ ಹೇಳಿದರು.

2 ಕೋಟಿ ವೆಚ್ಚ: ಖಜಾಂಚಿ ಕುಂಡ್ಯೋಳಂಡ ವಿಶು ಪೂವಯ್ಯ ಮಾತನಾಡಿ, ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ 2 ಕೋಟಿ ರು. ಖರ್ಚಾಗುತ್ತಿದ್ದು, ಕುಂಡ್ಯೋಳಂಡ ಕುಟುಂಬಸ್ಥರಿಂದ 30 ಲಕ್ಷ ರು. ಸಂಗ್ರಹಿಸಲಾಗಿದೆ. ಕಳೆದ ವರ್ಷದ ಹಾಕಿ ಹಬ್ಬಕ್ಕೆ ಸರ್ಕಾರ 1 ಕೋಟಿ ರು. ನೀಡಿತ್ತು, ಈ ಬಾರಿ ಸರ್ಕಾರದ ಅನುದಾನ ಶೀಘ್ರ ದೊರೆತರೆ ಉತ್ತಮ ಎಂದರು.ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ, ಕುಂಡ್ಯೋಳಂಡ ಅತ್ಯಂತ ಚಿಕ್ಕ ಕುಟುಂಬವಾದರೂ ಹಾಕಿ ಹಬ್ಬದ ಯಶಸ್ಸಿಗಾಗಿ ಅದ್ದೂರಿಯ ಸಿದ್ಧತೆ ಮಾಡಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ತಯಾರಿ ನಡೆದಿತ್ತು ಎಂದು ತಿಳಿಸಿದರು.

ಮುಂದಿನ ವರ್ಷ ಮುದ್ದಂಡ ಹಾಕಿ ಹಬ್ಬ: ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಹಾಕಿ ಅಕಾಡೆಮಿಯು 2025 ರಲ್ಲಿ 25ನೇ ಆವೃತ್ತಿಯ ಕೊಡವ ಕುಟುಂಬಗಳ ನಡುವಿನ ಹಾಕಿಹಬ್ಬ ನಡೆಸಲು ಮುದ್ದಂಡ ಕುಟುಂಸ್ಥರಿಗೆ ಅವಕಾಶ ನೀಡಿದೆ. ಈ ಹಾಕಿಹಬ್ಬ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಇದ್ದರು.