ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಈ ಕಾರಣದಿಂದ ಕ್ರೀಡೆ ಪರಸ್ಪರ ಮನಸ್ಸುಗಳನ್ನು ಬೆಸೆಯುತ್ತದೆ. ಅದರಿಂದ ಕ್ರೀಡೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳಿಗಿಂತ ಭಾಗವಹಿಸುವಿಕೆ ಅತಿ ಮುಖ್ಯ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅಜ್ಜೀಕುಟ್ಟೀರ ಎಸ್. ನರೇನ್ ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಮನೆತನಗಳ ನಡುವಿನ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ‘ಹೈ ಪ್ಲೈಯರ್ಸ್ ಕಪ್-2024’ನ್ನು ಶುಕ್ರವಾರ ವಿಧ್ಯುಕ್ತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿಗೆ ಕೊಡಗಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟಗಳು ಹೆಚ್ಚು ಆಯೋಜನೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಸೂಕ್ತ ಅವಕಾಶಗಳ ಕೊರತೆ ಎದುರಿಸುತ್ತಿದ್ದ ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದರು.
ಹಾಕಿ ಕೂರ್ಗ್ ಸಂಸ್ಥೆ ಅಧ್ಯಕ್ಷ ಪಳಂಗಂಡ ಲವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಾಕಿ ಕ್ರೀಡಾಕೂಟಗಳು ನಿರಂತರವಾಗಿ ನಡೆಯುತ್ತಿರುವುದು ಆಶಾದಾಯಕ. ಆದರೆ ಶಾಲಾ ವಿದ್ಯಾರ್ಥಿಗಳ ತಂಡಗಳಿಗಾಗಿ ಹಾಕಿ ಕ್ರೀಡಾಕೂಟ ಕೊಡಗಿನಲ್ಲಿ ಹೆಚ್ಚಾಗಿ ನಡೆಯುತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಾಕಿ ಕರ್ನಾಟಕದ ಮಹಾಸಭೆಯಲ್ಲೂ ಗಂಭೀರ ಚರ್ಚೆ ನಡೆದಿದೆ. ಅದರಿಂದ ಮುಂದೆ ಹಾಕಿ ಕೂರ್ಗ್ ಸಂಸ್ಥೆ ಶಾಲಾ ತಂಡಗಳಿಗಾಗಿ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲು ಮುಂದಾಗಲಿದೆ ಎಂದರು.ಕೊಡಗಿನ ಕ್ರೀಡಾ ಸಂಘಟನೆಗಳು ಕೂಡ ಶಾಲಾ ತಂಡಗಳಿಗಾಗಿ ಹಾಕಿ ಪಂದ್ಯಾವಳಿಗಳನ್ನು ನಡೆಸಲು ವಿಶೇಷ ಒತ್ತು ನೀಡಬೇಕು ಎಂದು ಕರೆ ನೀಡಿದರು.
ವಿ. ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಂಜಿತಂಡ ಗಿಣಿ ಮೊಣ್ಣಪ್ಪ ಮಾತನಾಡಿ, ಸ್ಥಳೀಯ ಶಾಲೆಯ ಮೈದಾನವನ್ನು ಹೈ ಪ್ಲೈಯರ್ಸ್ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದು, ಇದು ಇಡೀ ಜಿಲ್ಲೆಯಲ್ಲಿ ಮಾದರಿ ಹಾಕಿ ಮೈದಾನವಾಗಿ ರೂಪುಗೊಂಡಿದೆ. ವಿ. ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರಸಕ್ತ ಸಾಲಿನಲ್ಲಿ ಆದರ್ಶ ಶಿಕ್ಷಣ ಸಂಸ್ಥೆ ಎಂಬ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ತಂಡದ ಮಾಜಿ ಹಾಕಿ ಆಟಗಾರ್ತಿ ಕಂಬಿರಂಡ ಶಾರದಾ ಅಯ್ಯಪ್ಪ, ವಿ.ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಸಿ. ಗೀತಾಂಜಲಿ ಮೊದಲಾದವರು ಮಾತನಾಡಿದರು.
ಬಾಟಾ ಇಂಡಿಯಾದ ಮಾಜಿ ಉಪಾಧ್ಯಕ್ಷ ಚೇಮಿರ ಸನ್ನು ಪೊನ್ನಪ್ಪ ಇದ್ದರು. ಇದಕ್ಕೂ ಮೊದಲು ಹೈ ಪ್ಲೈಯರ್ಸ್ ಕಪ್-2024ರ ವಿಜೇತರಿಗೆ ನೀಡಲಾಗುವ ಆಕರ್ಷಕ ಟ್ರೋಫಿಗಳನ್ನು ಅನಾವರಣಗೊಳಿಸಲಾಯಿತು.ಅಜ್ಜೀಕುಟ್ಟೀರ ಎಸ್. ನರೇನ್ ಕಾರ್ಯಪ್ಪ ಮೈದಾನದಲ್ಲಿ ಆಟಗಾರರನ್ನು ಪರಿಚಯಿಸಿಕೊಂಡು ಹಾಕಿ ಸ್ಟಿಕ್ಕಿನಿಂದ ಚೆಂಡನ್ನು ತಳ್ಳುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿ ಉದ್ಘಾಟಿಸಲು ಅತಿಥಿಗಳನ್ನು ಸಾಂಪ್ರದಾಯಿಕ ಎರವರ ಚೀನಿದುಡಿ ವಾದ್ಯದೊಂದಿಗೆ ಮೈದಾನಕ್ಕೆ ಕರೆದುಕೊಂಡು ಬರಲಾಯಿತು.
ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಸ್ವಾಗತಿಸಿದರು. ವೀಕ್ಷಕ ವಿವರಣೆಗಾರರಾದ ವಿನೋದ್ ನಿರೂಪಿಸಿದರು. ಅಮ್ಮಣಿಚಂಡ ರೋಹಿತ್ ವಂದಿಸಿದರು.