‘ಕಾಂಗತ ಮೂಡ್’ ಕೊಡವ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

| Published : Mar 05 2025, 12:32 AM IST

‘ಕಾಂಗತ ಮೂಡ್’ ಕೊಡವ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್‌ ಕಾರ್ಯಪ್ಪ ಅವರ ಕಾಂಗತ ಮೂಡ್‌ ಕೊಡವ ಚಲನಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಶಸ್ತಿ ವಿಜೇತ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ‘ಕಾಂಗತ ಮೂಡ್ (ದಿ ಶ್ಯಾಡೋ)’ ಕೊಡವ ಚಲನಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ ‘ಕಾಂಗತ ಮೂಡ್’ ೧೬ನೇ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾಗಿದೆ. ಬೆಂಗಳೂರಿನ ರಾಜಾಜಿನಗರದ ಒರೆಯನ್ ಮಾಲ್ ನಲ್ಲಿ ಮಾರ್ಚ್ ೧ ರಿಂದ ೮ರ ವರೆಗೆ ನಡೆಯುತ್ತಿರುವ ಚಲನಚಿತ್ರೋತ್ಸವದಲ್ಲಿ ಕಾಂಗತ ಮೂಡ್ ಎರಡು ಪ್ರದರ್ಶನ ಕಾಣಲಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಶ್ವಾದ್ಯಂತದಿಂದ ೮೦೦ಕ್ಕೂ ಅಧಿಕ ಚಿತ್ರಗಳು ಬಂದಿದ್ದು, ೨೦೦ ಚಿತ್ರಗಳು ಆಯ್ಕೆಯಾಗಿವೆ. ಇವುಗಳಲ್ಲಿ ಕಾಂಗತ ಮೂಡ್ (ದಿ ಶ್ಯಾಡೋ) ಕೂಡ ಸೇರಿರುವುದು ಹೆಮ್ಮೆ ಎನಿಸಿದೆ ಎಂದು ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಚಿತ್ರಕ್ಕೆ ಪ್ರಕಾಶ್ ಕಾರ್ಯಪ್ಪ ಅವರ ಪತ್ನಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಸಹ ನಿರ್ಮಾಪಕಿಯಾಗಿದ್ದು, ಚಿತ್ರದ ಕಥೆ, ನಿರ್ಮಾಣ, ನಿರ್ದೇಶನದ ಜವಾಬ್ದಾರಿಯನ್ನು ಪ್ರಕಾಶ್ ಕಾರ್ಯಪ್ಪ ನಿರ್ವಹಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಚೆಡಿಯಂಡ ಸಂತೋಷ್ ಮೇದಪ್ಪ ಹಾಗೂ ಅಪ್ಪಂಡೇರಂಡ ತೇಜು ಪೊನ್ನಪ್ಪ, ಅತಿಥಿ ಪಾತ್ರದಲ್ಲಿ ಅನಂತಶಯನ, ಗುಮ್ಮಟ್ಟಿರ ಕಿಶು ಉತ್ತಪ್ಪ, ಬೊಳ್ಳಜಿರ ಬಿ. ಅಯ್ಯಪ್ಪ, ಅಜ್ಜಮಕ್ಕಡ ವಿನು ಕುಶಾಲಪ್ಪ ನಟಿಸಿದ್ದಾರೆ. ಉಳಿದಂತೆ ಅಮ್ಮಾಟಂಡ ದೇವಯ್ಯ, ವಿಂದ್ಯ ದೇವಯ್ಯ, ತಂಬುಕುತ್ತೀರಾ ಚರಣ್, ಸಿದ್ದಂಡ ಶಂಭು, ದೇವಂಡಿರ ಲೋಕೇಶ್, ಮಡೆಯಂಡ ಸೂರಜ್, ಮಡೆಯಂಡ ಪ್ರೀನಾ ನಟಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಗಾರ್ಗಿ ಕಾರೆಹಕ್ಲು, ಪ್ರದೀಪ್ ಆರ್ಯನ್, ಈರಮಂಡ ಹರಿಣಿ ವಿಜಯ್, ಚೋಕಂಡ ದಿನು ನಂಜಪ್ಪ, ಟಿ.ಮುತ್ತುರಾಜು, ಯದುನಂದನ್, ನೀಲ್ ನಾಗರಾಜ್, ನಿಖಿಲ್ ಕಾರ್ಯಪ್ಪ, ರಿಕ್ತಿ ನಿರಂಜನ್, ಈರಮಂಡ ವಿಜಯ್ ಉತ್ತಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ, ಮೇಘರಾಜ್, ಕೊಚ್ಚೆರ ನರೇನ್ ಬಿದ್ದಪ್ಪ ಸೇರಿದಂತೆ ಮುಂತಾದವರು ಕಾರ್ಯನಿರ್ವಹಿಸಿದ್ದಾರೆ.