ಕೊಡವ ಲ್ಯಾಂಡ್ ವಿಚಾರಣೆ : ಕೇಂದ್ರ ಗೃಹ ಇಲಾಖೆಗೆ ದಂಡ ವಿಧಿಸಿದ ಕೋರ್ಟ್
KannadaprabhaNewsNetwork | Published : Oct 06 2023, 01:20 AM IST
ಕೊಡವ ಲ್ಯಾಂಡ್ ವಿಚಾರಣೆ : ಕೇಂದ್ರ ಗೃಹ ಇಲಾಖೆಗೆ ದಂಡ ವಿಧಿಸಿದ ಕೋರ್ಟ್
ಸಾರಾಂಶ
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಮುಖ ಬೇಡಿಕೆಯಾದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ ಕುರಿತು ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಕ್ಷೇಪಣೆ ಸಲ್ಲಿಸಲು ವಿಳಂಬ ಧೋರಣೆ ತೋರುತ್ತಿರುವ ಕೇಂದ್ರ ಗೃಹ ಇಲಾಖೆಗೆ ರು.5 ಸಾವಿರ ದಂಡ ವಿಧಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಮುಖ ಬೇಡಿಕೆಯಾದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ ಕುರಿತು ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಕ್ಷೇಪಣೆ ಸಲ್ಲಿಸಲು ವಿಳಂಬ ಧೋರಣೆ ತೋರುತ್ತಿರುವ ಕೇಂದ್ರ ಗೃಹ ಇಲಾಖೆಗೆ ರು.5 ಸಾವಿರ ದಂಡ ವಿಧಿಸಿದೆ. ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಸಮ್ಮುಖದಲ್ಲಿ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ವಕೀಲ ಕೀರನ್ ನಾರಾಯಣ್ ವಾದ ಮಂಡಿಸಿದರು. ನ್ಯಾಯಾಲಯದ ಮುಂದೆ ಹಲವು ಬಾರಿ ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರತಿವಾದಿಗಳಲ್ಲಿ ಒಂದಾದ ಕೇಂದ್ರವು ಅರ್ಜಿಗೆ ಆಕ್ಷೇಪಿಸಲು ಹೆಚ್ಚಿನ ಸಮಯ ಬಯಸಿ ಹಲವು ಬಾರಿ ವಿಚಾರಣೆ ಮುಂದೂಡುವಂತೆ ಮಾಡಿದ ಕಾರಣ ದಂಡ ವಿಧಿಸಲಾಗಿದೆ. ಮುಂದಿನ ವಿಚಾರಣೆಯನ್ನು ನ.29 ಕ್ಕೆ ಮುಂದೂಡಿದ್ದು, ಆಕ್ಷೇಪಣೆ ಸಲ್ಲಿಸುವಂತೆಯೂ ಅದೇಶಿಸಿದೆ. ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಕಾನೂನು ಇಲಾಖೆ ಹಾಗೂ ಗೃಹ ಇಲಾಖೆ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿವೆ. ಕೊಡವ ಭೂ ರಾಜಕೀಯ ಸ್ವಾಯತ್ತತೆ ಸಂಬಂಧ ಆಯೋಗ ರಚಿಸುವಂತೆ ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣ್ಯನ್ ಸ್ವಾಮಿ ಮೂಲಕ ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ವಿರಾಟ್ ಹಿಂದೂಸ್ಥಾನ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಶ್ರೇಯಾ ನಾಚಪ್ಪ, ಅರೆಯಡ ಗಿರೀಶ್, ಕಿರಿಯಮಾಡ ಶೆರಿನ್, ಬೇಪಡಿಯಂಡ ಬಿದ್ದಪ್ಪ, ಅಪ್ಪಾರಂಡ ಪೂವಣ್ಣ, ವಿಎಚ್‌ಎಸ್ ರಾಜ್ಯಾಧ್ಯಕ್ಷ ನಿಕುಂಜ್ ಶಾ, ಸದಸ್ಯರಾದ ನಟರಾಜ್, ರವಿಶಂಕರ್, ವಕೀಲರಾದ ಪಾರ್ಥ್, ಶ್ರೀಕಂಠ ಶರ್ಮಾ, ಮಂಜುನಾಥ್ ಹಾಜರಿದ್ದು, ಡಾ.ಸುಬ್ರಮಣ್ಯನ್ ಸ್ವಾಮಿ ಅವರೊಂದಿಗೆ ಸಮಾಲೋಚಿಸಿದರು.