ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ, ಹಾರ್ವರ್ಡ್ ವಿದ್ವಾಂಸ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ವಿಚಾರಣೆ ಸೋಮವಾರ ಹೈಕೋರ್ಟ್‌ನಲ್ಲಿ ನಡೆಯಿತು.ಕರ್ನಾಟಕ ರಾಜ್ಯ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನಿಲಯ್ ವಿಪಿನ್ ಚಂದ್ರ ಅಂಜಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ ರಿಟ್ ಅರ್ಜಿಯ ವಿಚಾರಣೆ ನಡೆಸಿತು.
ಡಾ.ಸುಬ್ರಮಣಿಯನ್ ಸ್ವಾಮಿ ಅವರ ಕಾನೂನು ಸಹಾಯಕರಾದ ಹೈಕೋರ್ಟ್ ವಕೀಲ ಕಿರಣ್ ನಾರಾಯಣ್, ಸುಪ್ರೀಂಕೋರ್ಟ್ ವಕೀಲ ಸತ್ಯ ಸಬರವಾಲ್ ಹಾಗೂ ವಿಶೇಷ್ ಕನೋಡಿಯ ಭಾಗಿಯಾಗಿದ್ದರು.ಸಿಎನ್‌ಸಿಯ ಬೇಡಿಕೆಗೆ ಆಕ್ಷೇಪ ಸಲ್ಲಿಸಿದ ಪ್ರತಿವಾದಿಗಳ ಅಹವಾಲನ್ನು ಕೂಡ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಅರ್ಜಿದಾರ ಸಂಖ್ಯೆ-2 ಆಗಿದ್ದಾರೆ. ಕೇಂದ್ರ ಕಾನೂನು ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ ಮತ್ತು ಕರ್ನಾಟಕ ರಾಜ್ಯವನ್ನು ಪ್ರತಿವಾದಿ ಸಂಖ್ಯೆ ಕ್ರಮವಾಗಿ 1, 2 ಮತ್ತು 3 ಎಂದು ಉಲ್ಲೇಖಿಸಲಾಗಿದೆ.
ವಿಚಾರಣೆ ನಂತರ ಮಾತನಾಡಿದ ಎನ್.ಯು.ನಾಚಪ್ಪ, ಕಾನೂನು ಹೋರಾಟದಿಂದ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ನ್ಯಾಯ ಸಿಗಲಿದ್ದು, ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಪಡೆಯುವ ವಿಶ್ವಾಸವಿದೆ ಎಂದರು.ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ, ವಿರಾಟ್ ಹಿಂದೂಸ್ತಾನ್ ಸಂಘಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಶ್ರೇಯಾ ನಾಚಪ್ಪ, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಬೇಪಡಿಯಂಡ ದಿನು, ನಂದೇಟಿರ ರವಿ, ಪಳಂಗಂಡ ಸುಬಣ್ಣ, ಚಂಗಣಮಕ್ಕಡ ವಿನು, ವಿಎಚ್‌ಎಸ್ ಸದಸ್ಯರಾದ ಶಶಿಕುಮಾರ್, ನಟರಾಜ್, ರವಿಶಂಕರ್, ವಕೀಲ ಶ್ರೀಕಾಂತ ಶರ್ಮ ಹಾಗೂ ಮಹೇಶ್ ಇದ್ದರು.