ಕಡಿಯತ್ ನಾಡು-ಬೆಪ್ಪುನಾಡು ದ್ವಿಸಂಧಿ ಕಡಂಗದಲ್ಲಿ ಬುಧವಾರ ನಡೆದ 9ನೇ ಕೊಡವ ಜನಜಾಗೃತಿ ಸಾರ್ವಜನಿಕ ಸಂಪರ್ಕ ಮಾನವ ಸರಪಳಿ ಕಾರ್ಯಕ್ರಮ

ಮಡಿಕೇರಿ: ಕೊಡವರ ವಿಶಿಷ್ಟ ಜನಾಂಗೀಯ ಗುರುತು, ಪಾರಂಪರಿಕ ಮಾತೃಭೂಮಿ, ಭಾಷೆ, ಸಂಸ್ಕೃತಿ, ಭೂಮಿ ಹಾಗೂ ರಾಜಕೀಯ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನಾತ್ಮಕ ಪರಿಹಾರ ಒದಗಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದರು.ಕಡಿಯತ್ ನಾಡು-ಬೆಪ್ಪುನಾಡು ದ್ವಿಸಂಧಿ ಕಡಂಗದಲ್ಲಿ ಬುಧವಾರ ನಡೆದ 9ನೇ ಕೊಡವ ಜನಜಾಗೃತಿ ಸಾರ್ವಜನಿಕ ಸಂಪರ್ಕ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕೊಡವರ ಸಮಸ್ಯೆಗಳನ್ನು ಸ್ಥೂಲ ಮಟ್ಟದ ವಿಶ್ಲೇಷಣೆಯ ಬದಲಾಗಿ ಸೂಕ್ಷ್ಮ ಮಟ್ಟದ ವಿಶ್ಲೇಷಣೆಯ ಮೂಲಕ ಪರಿಗಣಿಸಬೇಕು. ಅಲ್ಪಸಂಖ್ಯಾತ, ಸೂಕ್ಷ್ಮ ಹಾಗೂ ಆದಿಮಸಂಜಾತ ಕೊಡವರ ವಿಶಿಷ್ಟ ಜನಾಂಗೀಯ ಹಿನ್ನೆಲೆ, ಇತಿಹಾಸ ಮತ್ತು ಸಂಕಷ್ಟಗಳನ್ನು ಪ್ರತ್ಯೇಕವಾಗಿ ಗುರುತಿಸಿದಾಗ ಮಾತ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನ್ಯಾಯಯುತ ಪರಿಹಾರ ದೊರೆಯಲು ಸಾಧ್ಯ ಎಂದರು.

1956ರಲ್ಲಿ ಕೊಡಗು ಸಿ-ವರ್ಗದ ರಾಜ್ಯದ ಸ್ಥಾನಮಾನ ಕಳೆದುಕೊಂಡು ಕರ್ನಾಟಕದಲ್ಲಿ ವಿಲೀನಗೊಂಡಿದ್ದು, 1941ರ ನಂತರ ಜನಗಣತಿಯಲ್ಲಿ ಕೊಡವರ ಪ್ರತ್ಯೇಕ ಜನಾಂಗೀಯ ಗುರುತು ಕಳೆದುಹೋಗಿದೆ. ಇದರಿಂದ ಕೊಡವರು ಜನಗಣತಿ ಗುರುತು, ಪಾರಂಪರಿಕ ಮಾತೃಭೂಮಿ ಮತ್ತು ವಂಶಪಾರಂಪರಿಕ ಆಸ್ತಿಗಳ ನಷ್ಟ ಸೇರಿದಂತೆ ತ್ರಿವಳಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಡವರು ಜಾತಿ ಅಥವಾ ಧರ್ಮವಲ್ಲ, ಅವರಿಗೆ ಜಾತಿ, ಉಪಜಾತಿ ಹಾಗೂ ಒಳಪಂಗಡಗಳಿಲ್ಲ ಎಂದು ಪ್ರತಿಪಾದಿಸಿದರು.

ಕೊಡವ ಲ್ಯಾಂಡ್‌ ಗೆ ಮಾನ್ಯತೆ ಬೇಕು: ಸಂವಿಧಾನದ 244, 371ನೇ ವಿಧಿಗಳು ಹಾಗೂ ಐದನೇ ಮತ್ತು ಆರನೇ ಅನುಸೂಚಿಗಳ ಆಶಯದಡಿ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ವ್ಯವಸ್ಥೆ ಕಲ್ಪಿಸಬೇಕು. ಡಾರ್ಜಿಲಿಂಗ್ ಗೋರ್ಖಾಲ್ಯಾಂಡ್, ಲಡಾಖ್ ಹಾಗೂ ಈಶಾನ್ಯ ಭಾರತದ ಸ್ವಾಯತ್ತ ಮಂಡಳಿಗಳ ಮಾದರಿಯಲ್ಲಿ ಕೊಡವರ ಪಾರಂಪರಿಕ ಮಾತೃಭೂಮಿಗೆ ವಿಶೇಷ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

2027ರ ರಾಷ್ಟ್ರೀಯ ಜನಗಣತಿ ಹಾಗೂ ಜಾತಿ ಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಪ್ರತ್ಯೇಕವಾಗಿ ದಾಖಲಿಸಬೇಕು. ಕೊಡವರ ಆಧ್ಯಾತ್ಮಿಕ ನೆಲೆಗಳಾದ ಮಂದ್, ದೇವಬನ, ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಕೊಡವ ಸಾಂಸ್ಕೃತಿಕ ತಾಣಗಳಿಗೆ ವಿಶೇಷ ಮಾನ್ಯತೆ ನೀಡಬೇಕು ಎಂದರು.ಭೂಪರಿವರ್ತನೆ ಬೇಡ: ಕೊಡವ ಪ್ರದೇಶದಲ್ಲಿ ಭೂ ಪರಿವರ್ತನೆ, ಬೃಹತ್ ರೆಸಾರ್ಟ್‌ಗಳು, ಟೌನ್‌ಶಿಪ್‌ಗಳು ಹಾಗೂ ಲೇಔಟ್‌ಗಳ ನಿರ್ಮಾಣದಿಂದ ಪರಿಸರ, ಕೃಷಿಭೂಮಿ, ಕಾಫಿ ತೋಟಗಳು ಮತ್ತು ಕಾವೇರಿ ನದಿಯ ಜಲಮೂಲಗಳಿಗೆ ಹಾನಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೊಡಗಿನ ನೈಸರ್ಗಿಕ ಸಂಪನ್ಮೂಲಗಳು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸಲು ವಾಣಿಜ್ಯ ಉದ್ದೇಶದ ಭೂ ಪರಿವರ್ತನೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಮಾನವ ಸರಪಳಿಯಲ್ಲಿ ಪಾಲ್ಗೊಂಡ ಕೊಡವರು ಗುರು-ಕಾರೋಣ, ಸೂರ್ಯ-ಚಂದ್ರ, ಭೂಮಿ ತಾಯಿ, ವನದೇವಿ, ಕಾವೇರಿ ಜಲದೇವತೆ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ ಸಿಎನ್ಸಿ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಗೀತೆ ಜನಗಣಮನ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕುಲ್ಲಚಂಡ ಸರೋಜ, ಚೆರಿಯಂಡ ಪೂಜಾ, ಕೋಡಿರ ವಿನೋದ್ ನಾಣಯ್ಯ, ಬೇಪಡಿಯಂಡ ದಿನು, ಪಟ್ರಪಂಡ ರಮೇಶ್ ಬೋಪಯ್ಯ, ಬೇಪಡಿಯಂಡ ಬಿದ್ದಪ್ಪ, ಬಲ್ಲಚಂಡ ಸುನಿಲ್ ಬಿದ್ದಪ್ಪ, ಬಲ್ಲಟಿಕಾಳಂಡ ರಾಯ್ ಮಂದಣ್ಣ, ಮಾತಂಡ ಕಂಬು ಉತ್ತಯ್ಯ, ನೆರ್ಪಂಡ ಜಿಮ್ಮಿ ಚೆಂಗಪ್ಪ, ಮುಕ್ಕಾಟಿರ ತಮ್ಮಯ್ಯ, ನೆರ್ಪಂಡ ತಿಮ್ಮಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ ಮತ್ತಿತರರು ಪಾಲ್ಗೊಂಡಿದ್ದರು.