ಸಾರಾಂಶ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ನೇಮಿಸಿ ಆದೇಶ ಹೊರಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಇದೀಗ ಅಧ್ಯಕ್ಷರನ್ನು ಮಾತ್ರ ನೇಮಿಸಲಾಗಿದ್ದು, ಸದಸ್ಯರನ್ನು ಇನ್ನಷ್ಟೇ ನೇಮಿಸಬೇಕಿದೆ. ಮಹೇಶ್ ನಾಚಯ್ಯ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಕೊಡವ ಭಾಷೆ-ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅಕಾಡೆಮಿ ಮೂಲಕ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಮಹೇಶ್ ಅವರು, ಪದವೀಧರರಾಗಿದ್ದು, ಕಳೆದ 27 ವರ್ಷಗಳಿಂದ ‘ಪೂಮಾಲೆ’ ಕೊಡವ ಭಾಷಾ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೊಡಗು ಜಿಲ್ಲೆಯ ಚೆಂಬೆಬೆಳೆಯೂರು ಗ್ರಾಮದಲ್ಲಿ ಜನಿಸಿದ ಅವರು, ಕಾಲೇಜು ಶಿಕ್ಷಣ ಮುಗಿಸಿಕೊಂಡ ಬಳಿಕ ದೇಶದ ರಾಜಧಾನಿ ನವದೆಹಲಿಯಲ್ಲಿ ಸುಮಾರು 6 ವರ್ಷಗಳ ಕಾಲ ಖಾಸಗಿ ಸಂಸ್ಥೆಯಲ್ಲಿ ದುಡಿದರು. ಆ ವೇಳೆಗಾಗಲೇ ಸ್ವಂತ ಒಡೆತನದ ಪತ್ರಿಕೆಯೊಂದನ್ನು ನಡೆಸುವ ಅಪೇಕ್ಷೆ ಮೇರೆ ಕೊಡವ ಭಾಷೆಯ ಪತ್ರಿಕೆ “ಪೂಮಾಲೆ”ಯನ್ನು ನೋಂದಾವಣೆ ಮಾಡಿಕೊಂಡು ಕೊಡಗಿಗೆ ಬಂದು 1996ರಿಂದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಮೂಲಕ ಹತ್ತು ಹಲವು ಬಗೆಯ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಇವರು ಕೊಡವ ಭಾಷೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ.ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾಗಿರುವ ಮಹೇಶ್, 1996ರಲ್ಲಿ ಕೊಡವ ಭಾಷೆಯ “ಪೂಮಾಲೆ” ಪತ್ರಿಕೆಯನ್ನು ಹೊರತರುವುದರ ಮೂಲಕ ಕೊಡವ ಭಾಷೆ, ಸಾಹಿತ್ಯ, ಕಲೆ-ಜಾನಪದ ಸೇರಿದಂತೆ ನಾಡಿನ ಸರ್ವ ಸಂಪನ್ನತೆಗೆ ಅಕ್ಷರ ಕ್ರಾಂತಿಯ ಮೂಲಕ ದುಡಿದಿದ್ದಾರೆ. ಎಲೆಮರೆ ಕಾಯಿಯಂತೆ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮಹೇಶ್, ಪೂಮಾಲೆ ಪತ್ರಿಕೆಯ ಮೂಲಕ ಗೋಣಿಕೊಪ್ಪ ಕೊಡವ ಸಮಾಜ ಸ್ಥಾಪನೆಗೆ ಮೂಲ ಕಾರಣರಾಗಿದ್ದಾರೆ. ದೆಹಲಿಯಲ್ಲಿ ಮೊಟ್ಟ ಮೊದಲ ಬಾರಿ 2006ರಲ್ಲಿ “ಕೊಡವ ಸಾಂಸ್ಕೃತಿಕ ಮೇಳ”ವನ್ನು ಆಯೋಜಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮಹೇಶ್ ನಾಚಯ್ಯನವರು “ಕೊಡವ ತಕ್ಕ ಪರಿಷತ್” ಮರು ಸ್ಥಾಪಿಸಿ ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ಕೊಡಗಿನ ಹಲವಾರು ಊರು-ನಾಡು. ನಗರಗಳಲ್ಲಿ “ಕೊಡವ ತಕ್ಕ ನಮ್ಮೆ” ಆಯೋಜಿಸಿ ಒಟ್ಟು 41 ಉಪಯುಕ್ತವಾದ ಕೃತಿಗಳನ್ನು ಹೊರತಂದಿದ್ದಾರೆ.ಕೊಡವ ಜಾನಪದ ಗ್ರಂಥ “ಪಟ್ಟೋಲೆ ಪಳಮೆ''''''''ಯನ್ನು ಪ್ರಮೀಳ ನಾಚಯ್ಯ ಅವರು ಕೊಡವ ಭಾಷೆಗೆ ತರ್ಜುಮೆಗೊಳಿಸಿ ದೆಹಲಿ ಕರ್ನಾಟಕ ಸಂಘದಲ್ಲಿ ಬಿಡುಗಡೆಗೊಳಿಸಿದ ಹೆಗ್ಗಳಿಕೆ ಇವರದ್ದು ಹಾಗೂ ಈ ಕೃತಿ ಮೂರು ಬಾರಿ ಮರು ಮುದ್ರಣಗೊಂಡಿದ್ದು ಈವರೆಗೆ ನಾಲ್ಕು ಸಾವಿರ ಪುಸ್ತಕಗಳು ಮಾರಾಟವಾಗಿದೆ.ಕೊಡವ ಭಾಷೆಯ ಬೆಳವಣಿಗೆಯ ಜೊತೆಯಲ್ಲೇ ಭಾಷೆಗೆ ತಮ್ಮದೇ ಆದ ಆಯಾಮವನ್ನು ಕೊಟ್ಟಿರುವ ಮಹೇಶ್ ನಾಚಯ್ಯ, ಕೊಡವ ಭಾಷೆಗೆ ಸುಮಾರು 130 ಹೊಸದಾದ ಸೂಕ್ತ ಪದಗಳನ್ನು ಸೃಷ್ಟಿಸಿ ಸೇರ್ಪಡೆಗೊಳಿಸಿರುವುದೇ ಅಲ್ಲದೆ ಬಳಕೆಯಲ್ಲಿರದ ಪ್ರಾಚೀನ ಕೊಡವ ಪದಗಳನ್ನು ಪೂಮಾಲೆ ಪತ್ರಿಕೆಯ ಮೂಲಕ ಬಳಕೆಗೆ ತಂದು ಪ್ರಸಕ್ತ ಅವೆಲ್ಲವೂ ಕೊಡವ ಭಾಷಾ ನಿಘಂಟಿನಲ್ಲಿ ದಾಖಲಾಗುವಂತೆ ಮಾಡಿರುತ್ತಾರೆ. ಕೊಡವ ಭಾಷೆಯ ಶ್ರೀಮಂತಿಕೆಗೆ ಕಾರಣಕರ್ತರಾಗಿದ್ದಾರೆ. ಕೊಡವ ಭಾಷೆಯ ವ್ಯಾಕರಣಕ್ಕೆ ಯಥೇಚ್ಛ ಒತ್ತು ನೀಡುವುದರ ಮೂಲಕ ಕೊಡವ ಭಾಷೆಯ ಹಿರಿಮೆಯನ್ನು ಎತ್ತಿಹಿಡಿದಿರುತ್ತಾರೆ. ಪೂಮಾಲೆ ಪತ್ರಿಕೆಯು ಇವತ್ತಿನ ತಂತ್ರಜ್ಞಾನದ ಮೂಲಕ ಪ್ರಪಂಚದೆಲ್ಲೆಡೆ ಇರುವ ಕೊಡವ ಭಾಷೆ ಬಲ್ಲವರ ಮಾಧ್ಯಮವಾಗಿದ್ದು ನೂರಾರು ಲೇಖಕರ, ಸಾಹಿತಿಗಳ, ಚಿಂತಕರ ಸೃಷ್ಟಿಗೆ ಕಾರಣರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ ಭಾರತೀಯ ಭಾಷಾ ತರ್ಜುಮೆ ಕಾರ್ಯಾಗಾರದಲ್ಲಿ ಆಂಗ್ಲ ಭಾಷೆಗೆ ಕೊಡವ ಭಾಷಾ ತರ್ಜುಮೆಗಾರರಾಗಿ ಪಾಲ್ಗೊಂಡಿದ್ದಾರೆ. ಭಾರತೀಯ ಭಾಷಾ ಕವಿಗೋಷ್ಠಿಯಲ್ಲಿ ಕೊಡವ ಭಾಷಾ ಕವಿಯಾಗಿ ಸ್ವರಚಿತ ಕವನ ವಾಚಿಸಿರುತ್ತಾರೆ.ಮಡಿಕೇರಿ ಆಕಾಶವಾಣಿಯಲ್ಲಿ ಕೊಡವ ಭಾಷಾ ಸುದ್ದಿ ವಾಚಕರಾಗಿ ಮೂರು ವರ್ಷಗಳ ಸೇವೆ ಮಾಡಿದ್ದಾರೆ.