ಕೊಡವರ ಹಕ್ಕೊತ್ತಾಯ ಸಂವಿಧಾನದಡಿ ಸಮರ್ಥನೀಯ: ಬಿ.ಕೆ.ಹರಿಪ್ರಸಾದ್

| Published : Aug 04 2025, 12:30 AM IST

ಕೊಡವರ ಹಕ್ಕೊತ್ತಾಯ ಸಂವಿಧಾನದಡಿ ಸಮರ್ಥನೀಯ: ಬಿ.ಕೆ.ಹರಿಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾದೇಶಿಕ ಸ್ವಾಯತ್ತತೆಗಾಗಿ ಆದಿಮಸಂಜಾತ ಕೊಡವರ ಹಕ್ಕು ಸಂವಿಧಾನದಡಿಯಲ್ಲಿ ಸಮರ್ಥನೀಯವಾಗಿದೆ ಎಂದು ಹರಿಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಾದೇಶಿಕ ಸ್ವಾಯತ್ತತೆಗಾಗಿ ಆದಿಮಸಂಜಾತ ಕೊಡವರ ಹಕ್ಕು ಸಂವಿಧಾನದಡಿಯಲ್ಲಿ ಸಮರ್ಥನೀಯವಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ 30ನೇ ವಾರ್ಷಿಕ ಸಾರ್ವತ್ರಿಕ ಕಕ್ಕಡ-18 ಆಚರಣೆಯಲ್ಲಿ ಅವರು ಮಾತನಾಡಿದರು.

ಸಿಎನ್‌ಸಿ ಸಂಘಟನೆಯು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಮತ್ತು ಎಸ್‌ಟಿ ಟ್ಯಾಗ್‌ಗಾಗಿ ಶ್ರಮಿಸುತ್ತಿದೆ. ಹಕ್ಕೊತ್ತಾಯದ ಕುರಿತು ಜನ ಜಾಗೃತಿ ಮೂಡಿಸಲು ನಿರಂತರ ಆಂದೋಲನಗಳನ್ನು ನಡೆಸುತ್ತಿದೆ ಮತ್ತು ಕೊಡವ ಜಾನಪದ, ಸಾಂಪ್ರದಾಯಿಕ ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುತ್ತಿದೆ. ಎನ್.ಯು.ನಾಚಪ್ಪ ಅವರು ಕೊಡವರ ಪರವಾಗಿ ಶ್ಲಾಘನೀಯ ಕಾರ್ಯ ಮಾಡುತ್ತಿದ್ದು, ಈ ಅದ್ಭುತ ಶಾಂತಿಯುತ ಹೋರಾಟದ ಪ್ರಯಾಣಕ್ಕೆ ಸರ್ವ ಕೊಡವರು ತನುಮನ, ಧನದ ಮೂಲಕ ತಮ್ಮ ಬೆಂಬಲವನ್ನು ಸೂಚಿಸಬೇಕು ಎಂದು ಕರೆ ನೀಡಿದರು.

ಕೊಡವ ಸಮುದಾಯವು ಮುಂಬರುವ 2026-27ರ ರಾಷ್ಟ್ರೀಯ ಜನಸಂಖ್ಯಾ ಗಣತಿಯಲ್ಲಿ ಪ್ರತ್ಯೇಕ ಸಂಹಿತೆ ಮತ್ತು ಕಾಲಂ ಅನ್ನು ಕೋರಬೇಕು. ಇದರಲ್ಲಿ ಜಾತಿ ಎಣಿಕೆಯೂ ಸೇರಿರುತ್ತದೆ, ಕೊಡವರ ಸಮಗ್ರ ಸಬಲೀಕರಣಕ್ಕೆ ಇದು ನಿರ್ಣಾಯಕವಾಗಿದೆ. ಕೊಡವ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಕಾಪಾಡಿಕೊಳ್ಳಲು ಮತ್ತು ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಸಿಎನ್‌ಸಿ ಸತತ ಹೋರಾಟ ನಡೆಸುತ್ತಿದೆ. ಕೊಡವರು ರಾಜಕೀಯವಾಗಿ ಬೆಳೆಯಬೇಕು, ರಾಜಕೀಯ ಬೆಂಬಲಕ್ಕೆ ಪೂರಕವಾಗಿ ಜನಸಂಖ್ಯಾ ಗಣತಿಯಲ್ಲಿ ಕೊಡವರು ಪ್ರತ್ಯೇಕ ಸಂಹಿತೆ ಮತ್ತು ಕಾಲಂ ಹೊಂದಬೇಕು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವರ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿರುವ ಸಿಎನ್‌ಸಿಯ ದೀರ್ಘಕಾಲದ ಬೆಂಬಲಿಗರಾಗಿರುವ ಹರಿಪ್ರಸಾದ್ ಅವರ ಹೇಳಿಕೆಯು ಕೊಡವರ ಕುಂದುಕೊರತೆಗಳು ಮತ್ತು ಆಕಾಂಕ್ಷೆಗಳನ್ನು ಪರಿಹರಿಸಲು ಚುನಾಯಿತ ಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ಬಾಧ್ಯತೆಗಳನ್ನು ಪೂರೈಸುವ ಮಹತ್ವವನ್ನು ಒತ್ತಿಹೇಳುತ್ತಿದೆ. ಅಲ್ಲದೆ ಕೊಡವ ಸಮುದಾಯದ ಭವಿಷ್ಯದ ಸಬಲೀಕರಣ ಮತ್ತು ಮನ್ನಣೆಗಾಗಿ ಜನಗಣತಿಯ ಅವಕಾಶದ ಮಹತ್ವವನ್ನು ಪ್ರತಿಬಿಂಬಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು, ಆರ್ಟಿಕಲ್ 244ನೇ ವಿಧಿ ಮತ್ತು 6 ಮತ್ತು 8ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು, ಕೊಡವ ಬುಡಕಟ್ಟು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು, ಕೊಡವರು, ಅವರ ಪಾರಂಪರಿಕ ಭೂಮಿ, ಭಾಷೆ, ಪರಿಸರ, ಜಲಸಂಪನ್ಮೂಲ, ಜಾನಪದ ಪರಂಪರೆ, ರಾಜಕೀಯ ಅಸ್ಮಿತೆ ಮತ್ತು ಐತಿಹಾಸಿಕ ನಿರಂತರತೆ, ಸಾಂಪ್ರದಾಯಿಕ ಆವಾಸಸ್ಥಾನಗಳನ್ನು ಗುರುತಿಸಬೇಕು ಮತ್ತು ರಾಜ್ಯಾಂಗ ಖಾತ್ರಿ ನೀಡಬೇಕು. ಆದಿಮಸಂಜಾತ ಜನಾಂಗಗಳ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವ ರಾಷ್ಟç ಸಂಸ್ಥೆ ಯುಎನ್‌ಒ ಒಡಂಬಡಿಕೆಯಂತೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಘೋಷಿಸಬೇಕು ಮತ್ತು ಪೋಷಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಕಕ್ಕಡ-18 ಸಂಭ್ರಮ:

ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು ಮತ್ತು ಕಕ್ಕಡ-18ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್ ಗೆ ಪ್ರದಕ್ಷಿಣೆ ಬರಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಮಾಡಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕಕ್ಕಡ-18ರ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.

ಕೊಡವ ಲ್ಯಾಂಡ್ ಪರ ಸೂರ್ಯ-ಚಂದ್ರ ಗುರು-ಕಾರೋಣ, ಜಲ ದೇವತೆ ಕಾವೇರಿ, ವನ ದೇವಿ, ಭೂ ದೇವಿ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಅಲ್ಲದೆ ಸಿಎನ್‌ಸಿ ಯ ಬೇಡಿಕೆಗಳ ಪರ ನಿರ್ಣಯ ಕೈಗೊಳ್ಳಲಾಯಿತು. ರಾಷ್ಟ್ರ ಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

ಕಲಿಯಂಡ ಮೀನಾಕ್ಷಿ, ಅಪ್ಪಚ್ಚಿರ ರೀನಾ, ಪುಲ್ಲೇರ ಸ್ವಾತಿ, ನಂದೇಟಿರ ಕವಿತಾ, ನಂದಿನೆರವಂಡ ರೇಖಾ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಚೊಳಪಂಡ ಜ್ಯೋತಿ, ಪಚ್ಚಾರಂಡ ಶಾಂತಿ, ಐಲಪಂಡ ಪುಷ್ಪ, ಪಟ್ಟಮಾಡ ಲಲಿತಾ, ಮುದ್ದಿಯಡ ಲೀಲಾವತಿ, ತಂಬುಕುತ್ತಿರ ರೇಖಾ, ಬಲ್ಲಡಿಚಂಡ ಬೇಬಿ, ಕಲಿಯಂಡ ಪ್ರಕಾಶ್, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಬಾಚರಣಿಯಂಡ ಚಿಪ್ಪಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.