ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದ ದೇವರಗಡ್ಡಿ ಗ್ರಾಮದ ಅಧಿದೇವತೆ, ಜಗನ್ಮಾತೆ ಶ್ರೀ ಗದ್ದೆಮ್ಮದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಗದ್ದೆಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಕೊಡೇಕಲ್‌

ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದ ದೇವರಗಡ್ಡಿ ಗ್ರಾಮದ ಅಧಿದೇವತೆ, ಜಗನ್ಮಾತೆ ಶ್ರೀ ಗದ್ದೆಮ್ಮದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಗದ್ದೆಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಒಂದು ವಾರಗಳ ಕಾಲ ವೈಭದಿಂದ ಜರುಗುವ ಗದ್ದೆಮ್ಮದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಉಡಿತುಂಬಿಸಿಕೊಳ್ಳಲು ತನ್ನ ಪಾರುಪತ್ಯದ ಏಳೂರುಗಳಿಗೆ ತೆರಳಿದ್ದ ದೇವತೆ ಶನಿವಾರ ಸಂಜೆ ವೈಭವದ ಮೆರವಣಿಗೆಯ ಮೂಲಕ ತನ್ನ ಮೂಲಸ್ಥಾನವಾದ ದೇವರಗಡ್ಡಿ ಗ್ರಾಮಕ್ಕೆ ಆಗಮಿಸಿ ರಥ ಬೀದಿಯಲ್ಲಿರುವ ತಾಳಿಕಟ್ಟೆ ಎಂಬ ಸ್ಥಳದಲ್ಲಿ ವಿರಾಜಮಾನಳಾಗಿದ್ದಳು, ಶನಿವಾರದಂದು ಅಹೋರಾತ್ರಿ ಭಜನೆ, ಚೌಡಕಿ ಪದಗಳ ಮೂಲಕ ಭಕ್ತರು ದೇವಿಯ ಆರಾಧನೆಯನ್ನು ಮಾಡಿದರು.

ಶ್ರೀಗದ್ದೆಮ್ಮದೇವಿಗೆ ಭಕ್ತರಿಂದ ವಿಶೇಷ ಪೂಜೆಗಳು ವಿವಿಧ ಸೇವೆಗಳು ನೆರವೇರಿದವು. ಭಕ್ತರು ಧೀರ್ಘದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸಿದರು.

ಸಂಜೆ ಊರೊಳಗಿನ ದೇವಸ್ಥಾನದಿಂದ ರಥದ ಕಳಸದ ಮೆರವಣಿಗೆ ವಾದ್ಯಮೇಳಗಳೊಂದಿಗೆ ಸುಮಂಗಲಿಯರು ತಂದ ಕುಂಭ ಕಳಶಗಳ ಮೆರವಣಿಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಬಂದು ಸರಿಯಾಗಿ ಸಂಜೆ ರಥಬೀದಿಯನ್ನು ತಲುಪಿತು. ನಂತರ ಪುಷ್ಪಗಳಿಂದ ಶೃಂಗರಿಸಲಾಗಿದ್ದ ಭವ್ಯರಥದಲ್ಲಿ ದೇವಿಯ ಭಾವಚಿತ್ರವನ್ನು ಇರಿಸಿ ಜೊತೆಗೆ ರಥಕ್ಕೆ ಕಳಸಾರೋಹಣ ನೆರವೇರಿಸಿದ ಬಳಿಕ, ದೇವಸ್ಥಾನದ ಅರ್ಚಕರು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಭಕ್ತರ ಜಯಘೋಷಗಳ ಮಧ್ಯೆ ಸಾಗಿದ ದೇವಿಯ ರಥೋತ್ಸವಕ್ಕೆ ನೆರದಿದ್ದ ಭಕ್ತರು ಭಕ್ತಿಪೂರ್ವಕವಾಗಿ ಬಾಳೆಹಣ್ಣು, ಉತತ್ತಿ, ಮಂಡಾಳು, ತೇರಿಗೆ ಅರ್ಪಿಸಿದರು.

ಎತ್ತರದ ಪ್ರದೇಶ, ಗಿಡ ಮರಗಳು ಮತ್ತು ಮನೆಗಳ ಛಾವಣಿಗಳ ಮೇಲೆ ನಿಂತು ಭಕ್ತರು ರಥೋತ್ಸವ ಕಣ್ಣು ತುಂಬಿಕೊಂಡರು . ಗದ್ದೆಮ್ಮದೇವಿಗೆ ಜಯ ಘೋಷಗಳು ಮುಗಿಲು ಮುಟ್ಟಿದ್ದವು.

ದೇವತೆ ವಿರಾಜಮಾನಳಾಗಿದ್ದ ಕಟ್ಟೆಗೆ ಸಾಗಿದ ರಥ ಪುನಃ ತನ್ನ ಮೂಲಸ್ಥಾನಕ್ಕೆ ಹಿಂದಿರುಗಿತು. ಅಪಾರ ಭಕ್ತರ ಮಧ್ಯೆ ವೈಭವದಿಂದ ಜರುಗಿದ ಕೃಷ್ಣಾ ತೀರ ನಿವಾಸಿನಿಯ ಜಾತ್ರೆಗೆ ಮೇಲಿನಗಡ್ಡಿ, ಹಿರೇಜಾವೂರ, ರಾಂಪೂರ, ಜಂಜಿಗಡ್ಡಿ, ದೂರದರಾಯಚೂರ, ಲಿಂಗಸೂಗುರು, ನಾರಾಯಣಪುರ, ಕೊಡೇಕಲ್, ನಾಗರಾಳ, ಕೊಡಿಹಾಳ, ಹುನಗುಂದ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರ, ಮಹಾರಾಷ್ಟ್ರ ಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಹುಣಸಗಿ ಸಿಪಿಐ ರವಿಕುಮಾರ ಎಸ್.ಎನ್ ನೇತೃತ್ವದಲ್ಲಿ ನಾರಾಯಣಪುರ, ಕೊಡೇಕಲ್ ಪೊಲಿಸ ಠಾಣೆಗಳ ಪಿಎಸ್‌ಐಗಳು ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಒದಗಿಸಿದ್ದರು.