ಕೊಡೇಕಲ್‌: ಶುದ್ಧ ಕುಡಿಯುವ ನೀರಿನ ಘಟಕ ಆರಂಭ

| Published : May 20 2024, 01:35 AM IST

ಸಾರಾಂಶ

, ಕೃಷ್ಣಾ ಕಾಲುವೆಯಿಂದ ಹಿಲ್‌ ಟಾಪ್ ಕಾಲೋನಿಯಲ್ಲಿ ನೀರು ಶುದ್ಧೀಕರಣ ಘಟಕಕ್ಕೆ (ಡಬ್ಲ್ಯಟಿಪಿ) ನೀರು ಧುಮ್ಮುಕ್ಕುತ್ತಿದ್ದಂತೆ ನೆರೆದಿದ್ದ ಜನತೆಯ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಕೆಂಭಾವಿ ಪಟ್ಟಣ ಜನತೆಯ ಬಹು ದಿನಗ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ಭಾನುವಾರ ಪ್ರಾರಂಭಗೊಂಡಿದ್ದು, ಕೃಷ್ಣಾ ಕಾಲುವೆಯಿಂದ ಹಿಲ್‌ ಟಾಪ್ ಕಾಲೋನಿಯಲ್ಲಿ ನೀರು ಶುದ್ಧೀಕರಣ ಘಟಕಕ್ಕೆ (ಡಬ್ಲ್ಯಟಿಪಿ) ನೀರು ಧುಮ್ಮುಕ್ಕುತ್ತಿದ್ದಂತೆ ನೆರೆದಿದ್ದ ಜನತೆಯ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಸುಮಾರು 4.32 ಕೋಟಿ ರು.ಗಳು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಮೂರು ತಿಂಗಳಿನಿಂದ ಗ್ರಹಣ ಹಿಡಿದು ನಿಧಾನಗತಿಯಲ್ಲಿ ಸಾಗುತ್ತಿತ್ತು. ಬೇಸಿಗೆ ಪ್ರಾರಂಭವಾಗಿ ನಿಮಿತ್ತ ನೀರೊದಗಿಸುವ ಬಾವಿ ಬತ್ತಿ ಹೋಗಿದ್ದು, ನೀರಿನ ಬವಣೆ ನೀಗಿಸಲು ಕಾಲುವೆಯಿಂದ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರೊದಗಿಸಲು ಜನತೆಯಿಂದ ಒತ್ತಾಯವು ಕೇಳಿ ಬಂದಿತ್ತು.

ಕೆಂಭಾವಿ ಪಟ್ಟಣ ಜನತೆಯ ಬಹು ದಿನಗಳ ಬೇಡಿಕೆಯಾದ ಕೃಷ್ಣಾ ಕಾಲುವೆಯಿಂದ ನೀರು ಕುಡಿಯುವ ಯೋಗ ಈಗ ಕೂಡಿ ಬಂದಿದ್ದು, ಇನ್ನೆರಡು ದಿನಗಳಲ್ಲಿ ಘಟಕ ಶುದ್ಧಗೊಳಿಸಿ ಯುಕೆಪಿ ಕ್ಯಾಂಪ್ ನಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗೆ ಇದರಿಂದ ನೀರು ಒದಗಿಸಲಾಗುವುದು. ಅದರ ಮೂಲಕ ನಿತ್ಯ ಜನತೆಗೆ ನೀರು ಬಿಡುವ ಪ್ರಕ್ರಿಯೆ ಪ್ರಾರಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶುಕ್ರವಾರದಿಂದ ಎಲ್ಲ ಕೆಲಸ ಪೂರ್ಣಗೊಂಡು ಶನಿವಾರ ಯಂತ್ರ ಪ್ರಾರಂಭಗೊಳ್ಳುತ್ತಿದ್ದಂತೆ ಹಲವು ತಾಂತ್ರಿಕ ತೊಂದರೆಗಳು ಎದುರಾದವು. ತಂತ್ರಜ್ಞರು ಹಲವು ರೀತಿಯಿಂದ ಪ್ರಯತ್ನಪಟ್ಟರೂ ಫಲ ನೀಡಲಿಲ್ಲ. ಭಾನುವಾರ ಮತ್ತೆ ಬೆಂಬತ್ತಿದ ತಾಂತ್ರಿಕ ವರ್ಗ ಶತಾಯಗತಾಯು ಪ್ರಯತ್ನಿಸಿ ಕೊನೆಗೂ ಕಾಲುವೆಯಿಂದ ಶುದ್ಧೀರಣ ಘಟಕಕ್ಕೆ ನೀರು ತರುವಲ್ಲಿ ಯಶಸ್ವಿಯಾದರು.