ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಪೂಜ್ಯ ಡಾ.ವೀರೇಂದ್ರ ಹಗ್ಗಡೆ ಹಮ್ಮಿಕೊಂಡಿರುವ ಕಾರ್ಯಗಳು ಮನುಷ್ಯ ಜೀವನದ ಎಲ್ಲಾ ಸಂದರ್ಭಗಳಲ್ಲೂ ಅವನಿಗೆ ಸಹಕಾರಿಯಾಗುತ್ತದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ವಲಯ ಹಾಗೂ ಕ್ರೀಡಾ ಸಮಿತಿ ಮತ್ತು ಕೊಡ್ಲಿಪೇಟೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮಾಭಿವೃದ್ದಿ ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಜನರಿಗೆ ಪೂರಕವಾಗಿವೆ. ಈ ನಿಟ್ಟಿನಲ್ಲಿ ಫಲಾನುಭವಿಗಳು ಯೋಜನೆಗಳ ಮೂಲಕ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಯಲ್ಲಿ ಶಿಸ್ತು, ಬದ್ದತೆ ಅಳವಡಿಸಿಕೊಂಡು ಸಮಾಜದಲ್ಲಿ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹೈಕೋರ್ಟಿನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಪ್ರಜಾ ಪ್ರಭುತ್ವದ ಆಶಯಗಳನ್ನು ಗ್ರಾಮ ಮಟ್ಟದಲ್ಲಿ ಸಾಕಾರಗೊಳಿಸಿರುವಂತಹ ಕೆಲಸಗಳನ್ನು ಬಹಳ ಶಿಸ್ತುಬದ್ಧವಾಗಿ ಮಾಡುತ್ತಿದ್ದು ಯೋಜನೆಯ ಕಾರ್ಯಕ್ರಮಗಳು ಸಮಾನತೆ ಮತ್ತು ಸಹಬಾಳ್ವೆಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕೊಡ್ಲಿಪೇಟೆ ನಿವಾಸಿ ಉಜಿರೆ ಎಸ್‍ಡಿಎಂ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆ ಎಸ್.ಆರ್.ಅಮೃತ ಹಾಗೂ ಸಮಾಜ ಸೇವಕ ಮತ್ತು ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರನ್ನು ಗೌರವಿಸಲಾಯಿತು. ಸುಜ್ಞಾನ ನಿಧಿ ಶಿಷ್ಯ ವೇತನ, ಮಾಸಾಶನ, ಆರೋಗ್ಯ ರಕ್ಷಾ ಹಾಗೂ ಮೈಕ್ರೋ ಬಜೆಟ್ ಕ್ಲೇಮ್ ಮುಂತಾದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಭಗವಾನ್, ಕೊಡ್ಲಿಪೇಟೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಬಿ.ಕೆ.ಯತೀಶ್, ತಾಲೂಕು ಯೋಜನಾಧಿಕಾರಿ ರೋಹಿತ್, ಕೊಡ್ಲಿಪೇಟೆ ಹೋಬಳಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ನಾಗೇಶ್, ಮಾಜಿ ಸೈನಿಕ ಮನು,, ಪ್ರಮುಖರಾದ ವಸಂತ್, ಮಂಜುಳ ಸುರೇಶ್, ಶಿಲ್ಪಿ ವರಪ್ರಸಾದ್, ದಿವಾಕರ್, ಪಂಕಜ, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ನಾಗರಾಜ್, ಶಾಂತಳ್ಳಿ ವಲಯ ಮೇಲ್ವಿಚಾರಕ ಲಕ್ಷ್ಮಣ್, ಕಚೇರಿಯ ಸಹಾಯಕ ಪ್ರಬಂಧಕ ಜಿತೇಂದ್ರ, ನಗದು ಮೇಲ್ವಿಚಾರಕ ರಾಘವೇಂದ್ರ, ಶನಿವಾರಸಂತೆ ವಲಯ ಸೇವಾ ಪ್ರತಿನಿಧಿ ಶೋಭ, ವಿವಿಧ ಸೇವಾ ಪ್ರತಿನಿಧಿಗಳು ಹಾಜರಿದ್ದರು.
ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗೆ ವಿವಿಧಾ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.