ಕೊಡ್ಲಿಪೇಟೆ: ಶ್ರೀ ಮಂಜುನಾಥ ಸ್ವಾಮಿ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮ

| Published : Dec 28 2024, 01:02 AM IST

ಕೊಡ್ಲಿಪೇಟೆ: ಶ್ರೀ ಮಂಜುನಾಥ ಸ್ವಾಮಿ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಶಾಲಾ ಆವರಣದಲ್ಲಿರುವ ಕಿರಿಕೊಡ್ಲಿ ಮಠದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಪೂಜ್ಯರಾದ ಲಿಂಗೈಕ್ಯ ಶ್ರೀ ಗುರುಸಿದ್ದ ಸ್ವಾಮಿ ಅವರ ಸಂಸ್ಮರಣೆ, ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಶಾಲಾ ಆವರಣದಲ್ಲಿರುವ ಕಿರಿಕೊಡ್ಲಿ ಮಠದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಪೂಜ್ಯರಾದ ಲಿಂಗೈಕ್ಯ ಶ್ರೀ ಗುರುಸಿದ್ದ ಸ್ವಾಮಿ ಅವರ ಸಂಸ್ಮರಣೆ, ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಲೋಕಕಲ್ಯಾಣಾರ್ಥವಾಗಿ ರುದ್ರಾಭಿಷೇಕ, ಗಣಪತಿ ಹೋಮ, ರುದ್ರ ಹೋಮ, ಸಹಸ್ರ ಬಿಲ್ವಾರ್ಚನ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿತು.ಕಿರಿಕೊಡ್ಲಿ ಮಠದ ಮಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ಹಲವು ಮಠಾಧೀಶರು ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.ಶುಕ್ರವಾರ ಬೆಳಗ್ಗೆ ಗಂಗಾ ಪೂಜೆ ಹಾಗೂ ಗಣಪತಿ ಪೂಜೆಯೊಂದಿಗೆ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಮಠಾಧಿಪತಿಗಳು ಸೇರಿದಂತೆ ಕೊಡ್ಲಿಪೇಟೆ ಮತ್ತು ಸುತ್ತಮುತ್ತಲಿನ ಭಕ್ತರು ಹಾಗೂ ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗಗಳಿಂದ ಹೆಚ್ಚಿನ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಕಿರಿಕೊಡ್ಲಿಮಠದ ಶ್ರೀ ಕ್ಷೇತ್ರ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿಯವರ ಸಮ್ಮುಖದಲ್ಲಿ ವೇದ ಬ್ರಹ್ಮ ಸೋಮಶೇಖರ ಶಾಸ್ತ್ರಿಗಳು, ಶಂಕರಯ್ಯ ಶಾಸ್ತ್ರಿಗಳು, ಮೃತ್ಯುಂಜಯ ಶಾಸ್ತ್ರಿಗಳು, ಮೋಹನ ಮೂರ್ತಿ ಶಾಸ್ತ್ರಿಗಳು, ರಮೇಶ ಶಾಸ್ತ್ರಿಗಳು ಮತ್ತು ಸಂಗಡಿಗರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ವಿರಾಜಪೇಟೆ ಅರಮೇರಿ-ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹಾಸನ ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಕೆಸವತ್ತೂರು ಮಠಾಧೀಶ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಮನೆಹಳ್ಳಿ ಮಠಾಧೀಶ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಡಲೆ ಮಠಾಧೀಶ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮುದ್ದಿನ ಕಟ್ಟೆ ಮಠಾಧೀಶ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠಾಧೀಶ ಶ್ರೀಜಯದೇವ ಸ್ವಾಮೀಜಿ, ಶಿರಗನಹಳ್ಳಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಬಸವಪಟ್ಟಣ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ದೇವರಿಗೆ ವಿವಿಧ ಧಾರ್ಮಿಕ ಪೂಜೆಗಳೊಂದಿಗೆ ಧಾನ್ಯಗಳನ್ನು ಇಟ್ಟು ಪೂಜಿಸಲಾಯಿತು. ಹೋಮ ಹವನಗಳನ್ನು ನೆರವೇರಿಸಲಾಯಿತು. ಈ ಸಂದರ್ಭ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಇದಕ್ಕೂ ಮುನ್ನ ದೇಶದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮಠದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.