ಉಸ್ತುವಾರಿ ಸಚಿವ ಬೈರತಿ ಸುರೇಶ್ ರಿಂದ ಜಿಲ್ಲೆ ನಿರ್ಲಕ್ಷ್ಯ

| Published : Aug 08 2024, 01:38 AM IST

ಉಸ್ತುವಾರಿ ಸಚಿವ ಬೈರತಿ ಸುರೇಶ್ ರಿಂದ ಜಿಲ್ಲೆ ನಿರ್ಲಕ್ಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆಯಾಗಿರುವ ಎಪಿಎಂಸಿ ಮಾರುಕಟ್ಟೆಗೆ ಜಾಗದ ಸಮಸ್ಯೆ ಬಗೆಹರಿಸುವ ಕುರಿತು ಸಭೆ, ಸಮಾರಂಭಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆಯೇ ಹೊರತು, ಅದನ್ನು ಶಾಶ್ವತವಾಗಿ ನಿವಾರಿಸುವ ಗೋಜಿಗೆ ಹೋಗಿಲ್ಲ. ಸಚಿವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮಾತ್ರ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಎರಡೆರಡು ದಿನಕ್ಕೆ ಜಿಲ್ಲೆಗೆ ಆಗಮಿಸುತ್ತಾರೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಒತ್ತುನೀಡುವ ಭರವಸೆಯು ಭರವಸೆಯಾಗಿಯೇ ಉಳಿಯುವುದು ಬಿಟ್ಟರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯ ಅಭಿವೃದ್ಧಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಬೈರತಿ ಸುರೇಶ್‌ರನ್ನು ನೇಮಿಸಿದ್ದಾರಷ್ಟೇ. ಆದರೆ ಸಚಿವರಿಗೆ ಕೋಲಾರ ಜಿಲ್ಲೆಯ ಅಭಿವೃದ್ಧಿಗಿಂತಲೂ ಬೆಂಗಳೂರಿಗಷ್ಟೇ ಸೀಮಿತವಾಗಿರುವುದು ಬಿಟ್ಟರೆ ಜಿಲ್ಲೆಯ ಅಭಿವೃದ್ಧಿಗೆ ಮಾನ್ಯತೆ ನೀಡಿಲ್ಲವೆಂಬುದು ಜಿಲ್ಲೆಯ ಸಾರ್ವಜನಿಕರ ಆರೋಪವಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಆಯ್ಕೆಯಾದ ಬೈರತಿ ಸುರೇಶ್‌ರನ್ನು ಕೋಲಾರ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಹೆಸರಿಗಷ್ಟೇ ನೇಮಕ ಮಾಡಿತು, ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬೈರತಿ ಸುರೇಶ್ ಇದುವರೆಗೂ ೨ ಬಾರಿ ಕೆಡಿಪಿ ಸಭೆಯನ್ನು ನಡೆಸಿದರೇ ಹೊರತು, ಕಳೆದ ನಾಲ್ಕೈದು ತಿಂಗಳಿನಿಂದಲೂ ಒಂದೇ ಒಂದು ಕೆಡಿಪಿ ಸಭೆ ನಡೆಸದೇ ಇರುವುದು ಸಚಿವ ಬೈರತಿ ಸುರೇಶ್ ಅವರ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ.

ಕಳೆದ ೩- ೪ ದಿನಗಳ ಹಿಂದಷ್ಟೇ ಬಂಗಾರಪೇಟೆ ತಾಲೂಕಿನಲ್ಲಿ ನಿರಂತರವಾಗಿ ಆನೆ ದಾಳಿಯಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶ ಮಾಡಿವೆ, ಇತ್ತೀಚೆಗೆ ಬಂಗಾರಪೇಟೆ ತಾಲೂಕಿನ ಛತಗುಟ್ಟಹಳ್ಳಿ ರಾಧಾಬಾಯಿ ಕುರಿಗಳನ್ನು ಮೇಯಿಸುತ್ತಿದ್ದಾಗ ಆಕೆಯ ಮೇಲೆ ಆನೆ ದಾಳಿ ಮಾಡಿದ ಸಂದರ್ಭದಲ್ಲಿ ಆಕೆಯು ಸಾವನ್ನಪ್ಪಿದ್ದರೂ ಸಹ ಕನಿಷ್ಠ ಘಟನಾ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬಕ್ಕೆ ಸ್ವಾಂತನ ಹೇಳಲಿಕ್ಕೂ ಬರದ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಎಷ್ಟು ಕಾಳಜಿ ವಹಿಸಬಹುದೆಂಬುದು ಜಿಲ್ಲೆಯ ಜನತೆಯ ಪ್ರಶ್ನೆಯಾಗಿದೆ.

ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ ಹಾಗೂ ಆಗಸ್ಟ್ ೧೫ರಂದು ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಧ್ವಜಾರೋಹಣ ಮಾಡಿ ಸುದ್ದಿಗೋಷ್ಠಿ ನಡೆಸುವುದು ಬಿಟ್ಟರೆ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆ ಶೂನ್ಯವಾಗಿದೆಂಬುದು ಜನಾಭಿಪ್ರಾಯವಾಗಿದೆ, ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ, ಬೆಳೆಯಿಲ್ಲದೆ ರೈತರು ಕಂಗಾಲಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಬಿಂಗಿ(ಎಲೆ ಮುದುರು) ರೋಗದಿಂದ ಟೊಮೆಟೋ ಬೆಳೆ ಹಾಳಾಗಿ ರೈತರು ಕಂಗಲಾಗುತ್ತಿದ್ದಾರೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಹತ್ತು ಹಲವಾರು ಸಮಸ್ಯೆಗಳು ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದರೂ ಸಹ ಕನಿಷ್ಠ ಪಕ್ಷ ತಿಂಗಳಿಗೆ ಒಂದೆರಡು ಬಾರಿ ಜಿಲ್ಲಾ ಪ್ರವಾಸ ಮಾಡಿ ಸಾರ್ವಜನಿಕರ ಹಾಗೂ ಜಿಲ್ಲೆಯ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡದೇ ಇರುವುದು ಸಾರ್ವಜನಿಕರ ಬೇಸರಕ್ಕೆ ಎಡೆ ಮಾಡಿಕೊಟ್ಟಿದೆ.

ಇಡೀ ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆಯಾಗಿರುವ ಎಪಿಎಂಸಿ ಮಾರುಕಟ್ಟೆಗೆ ಜಾಗದ ಸಮಸ್ಯೆ ಬಗೆಹರಿಸುವ ಕುರಿತು ಸಭೆ, ಸಮಾರಂಭಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆಯೇ ಹೊರತು, ಅದನ್ನು ಶಾಶ್ವತವಾಗಿ ನಿವಾರಿಸುವ ಗೋಜಿಗೆ ಹೋಗಿಲ್ಲ. ಸಚಿವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮಾತ್ರ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಎರಡೆರಡು ದಿನಕ್ಕೆ ಜಿಲ್ಲೆಗೆ ಆಗಮಿಸುತ್ತಾರೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಒತ್ತುನೀಡುವ ಭರವಸೆಯು ಭರವಸೆಯಾಗಿಯೇ ಉಳಿಯುವುದು ಬಿಟ್ಟರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.

ಜಿಲ್ಲಾ ಕೇಂದ್ರಕ್ಕೆ ಗಣ್ಯರು ಹಾಗೂ ಸಚಿವರು ಆಗಮಿಸುತ್ತಾರೆಂದರೆ ಆಗ ಮಾತ್ರ ರಸ್ತೆಯ ಹಳ್ಳಕೊಳ್ಳಗಳಿಗೆ ತಾತ್ಕಾಲಿಕವಾಗಿ ಪ್ಯಾಚ್ ಹಾಕುವುದು ಬಿಟ್ಟರೆ ಶಾಶ್ವತವಾಗಿ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ಮಾಡಿಲ್ಲ, ಜೋರಾಗಿ ಮಳೆ ಬಿದ್ದರೆ ಮತ್ತೆ ರಸ್ತೆಗಳು ಹಾಳಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡೆತಡೆಯಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳು ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವುದು ವಿಪರ್ಯಾಸವೇ ಸರಿ.