ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಕುರುಬರ ಸಂಘದ ಕಾರ್ಯಕಾರಿ ಸಮಿತಿ ೯೦ ದಿನದೊಳಗೆ ಕರೆದು ಸಮಿತಿ ರಚಿಸಲು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಮಾಜಿ ಅಧ್ಯಕ್ಷನಾದ ನನಗೆ ನೋಟಿಸ್ ಜಾರಿ ಮಾಡಿದ್ದಾರೆ. ಅದರ ಪ್ರಕಾರ ನೂತನ ಸಮಿತಿ ರಚನೆಗೆ ಸಭೆ ೧೫-೨೦ ದಿನದೊಳಗೆ ಕರೆದು ನೂತನ ಸಮಿತಿ ರಚಿಸಲಾಗುವುದು ಎಂದು ಕುರುಬರ ಸಂಘದ ಮುಖಂಡ ಜಯರಾಮ್ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೦೨೪ರ ನ.೩೦ರಂದು ಅಂದಿನ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ೫ ವರ್ಷದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನೀಡಿದ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ೨೦೨೪ರ ಡಿ.೧೫ರಂದು ಕರೆದಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಮಾಜಿ ಸಚಿವ ವರ್ತೂರು ಪ್ರಕಾಶ ಸಮ್ಮುಖದಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಸದಸ್ಯತ್ವದ ಜವಾಬ್ದಾರಿ ವಹಿಸಿದ್ದರು. ಇದನ್ನು ನಡವಳಿಕೆ ಪುಸ್ತಕದಲ್ಲಿ ದಾಖಲು ಮಾಡಿದ್ದರು. ಇದನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದರಿಂದ ನಿಮ್ಮ ಮುಂದೆ ದಾಖಲೆ ಪ್ರದರ್ಶಿಸಲು ಸಾಧ್ಯವಾಯಿತು ಎಂದರು. ತಂಬಳ್ಳಿ ಮುನಿಯಪ್ಪ ಉಪಬಂಧಕರ ಕಚೇರಿಯಲ್ಲಿ ನಡವಳಿ ಪುಸ್ತಕ ಹಾಗೂ ಇತರೆ ದಾಖಲೆಗಳನ್ನು ಒಪ್ಪಿಸುವಾಗ ನಡವಳಿ ಪುಸ್ತಕದಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಮಿತಿಯ ೨೧ ಮಂದಿ ಸದಸ್ಯರು ಸಹಿ ಮಾಡಿದ್ದ ಹಾಳೆಯನ್ನು ಹರಿದು ಹಾಕಿ ನೀಡಿದ್ದಾರೆ. ಸಹಕಾರ ಸಂಘಗಳ ಬೈಲಾ ಪ್ರಕಾರ ಕಾರ್ಯಕಾರಿ ಸಮಿತಿಯ ಸಭೆ ಕರೆಯುವ ಅಧಿಕಾರ ಅಧ್ಯಕ್ಷರಿಗೆ ಮಾತ್ರ ಇದೆ ಎಂದರು.ಆದರೆ ಮಾಜಿ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ನನ್ನನ್ನು ಹಂಗಾಮಿ ಅಧ್ಯಕ್ಷನೆಂದು ಬಿಂಬಿಸಿ ತಾವೇ ಮಾಜಿ ಅಧಿಕೃತ ಅಧ್ಯಕ್ಷನೆಂದು ಘೋಷಿಸಿಕೊಂಡು ಕಾರ್ಯಕಾರಿ ಸಮಿತಿಯ ೧೦ ಮಂದಿ ಸದಸ್ಯರನ್ನು ಕೈಬಿಟ್ಟು ಸಂಘದ ಸಭೆ ಕರೆದು ಸಂಘವನ್ನು ರಚಿಸಲು ಮುಂದಾಗಿದ್ದ ಸಂದರ್ಭದಲ್ಲಿ ಅಧಿಕೃತವಾಗಿ ಅಧ್ಯಕ್ಷನಾಗಿ ಸಭೆ ಕರೆಯುವ ಅಧಿಕಾರ ತಮಗೆ ಮಾತ್ರ ಇತ್ತು. ಹಾಗಾಗಿ ತಂಬಳ್ಳಿ ಮುನಿಯಪ್ಪರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದೆ ಎಂದು ಪ್ರತಿಪಾದಿಸಿದರು.ತಂಬಳ್ಳಿ ಮುನಿಯಪ್ಪ ಮೊದಲು ೩ ವರ್ಷ ನಂತರದಲ್ಲಿ ೫ ವರ್ಷ ಸೇರಿದಂತೆ ೮ ವರ್ಷದ ಆಡಳಿತಾವಧಿಯಲ್ಲಿ ೬ ಕೋಟಿ ರು. ಅಭಿವೃದ್ಧಿ ಮಾಡಿದ್ದಾರೆ ಎಂದು ನಗರಸಭಾ ಮಾಜಿ ಸದಸ್ಯ ಸೋಮಶೇಖರ್ ತಿಳಿಸಿದ್ದಾರೆ, ಆದರೆ ಏನೇನು ಮಾಡಿದ್ದಾರೆಂದು ತಿಳಿಸಿಲ್ಲ ದಯವಿಟ್ಟು ೬ ಕೋಟಿ ರು. ಅಭಿವೃದ್ಧಿಯ ವಿಚಾರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.ನಾನು ಸದಸ್ಯನೇ ಅಲ್ಲ ಎಂದಿದ್ದಾರೆ. ಸೋಮಶೇಖರ್ ಕಳೆದ ೨೦೦೬ ರಿಂದ ೨೦೧೯ ವರೆಗೆ ಎಲ್ಲಿದ್ದರೆಂದು ಹೇಳಿ ಎಂದ ಅವರು, ತಾವು ಅಧಿಕೃತ ಸದಸ್ಯನಾಗಿರುವೇ ಎಂದು ಸದಸ್ಯತ್ವದ ರಸೀದಿ ಹಾಗೂ ಸಂಘದ ಪುಸ್ತಕದಲ್ಲಿ ತಂಬಳ್ಳಿ ಮುನಿಯಪ್ಪನ ನಂತರದಲ್ಲಿಯೇ ನನ್ನ ಸದಸ್ಯತ್ವ ದಾಖಲಾಗಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಜಿ.ಎಫ್ ರಾಮೇಗೌಡ, ಶ್ರೀನಿವಾಸಪುರ ನಾರಾಯಪ್ಪ, ನಾಗರಾಜ್, ಮಲ್ಲಿಕಾರ್ಜುನ್, ಜಂಬಪುರ ವೆಂಕಟೇಶ್, ಸರಸ್ಪತಮ್ಮ, ಮುಖಂಡರಾದ ಅಂಚೆ ಅಶ್ವಥ್, ಕೆ.ಎಸ್.ಆರ್.ಟಿ.ಸಿ. ನಾರಾಯಣಸ್ವಾಮಿ, ಕೈಲಾಸ್, ನಾಗಭೂಷಣ್, ಮುಖೇಶ್ ಇದ್ದರು.