ಕೋಲಾರ ಅವಿಭಜಿತ ಜಿಲ್ಲೆಗೆ ‘ಎತ್ತಿನಹೊಳೆ’ ಅನುಮಾನ

| Published : Sep 07 2024, 01:30 AM IST

ಸಾರಾಂಶ

ಹಾಸನ, ಚಿಕ್ಕಮಗಳೂರು, ತುಮಕೂರಿಗೆ ಎತ್ತಿನಹೊಳೆ ಯೋಜನೆಯನ್ನು ಸೀಮಿತ ಮಾಡುವ ಉದ್ದೇಶ ಇದ್ದಂತೆ ಕಾಣುತ್ತಿದೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಮರೆಯಬೇಡಿ ಎಂದು ಹೇಳುವ ಪರಿಸ್ಥಿತಿ ಬರಲಿದೆ.

ಕನ್ನಡಪ್ರಭ ವಾರ್ತೆ ಕೋಲಾರಎತ್ತಿನಹೊಳೆ ಯೋಜನೆಯನ್ನು ತರಾತುರಿಯಲ್ಲಿ ಸರ್ಕಾರ ಉದ್ಘಾಟಿಸುವುದು ನೋಡಿದರೆ ಕೋಲಾರ-ಚಿಕ್ಕಬಳ್ಳಾಪುರಕ್ಕೆ ಯೋಜನೆಯ ನೀರು ಬರುವ ವಿಶ್ವಾಸವಿಲ್ಲ ಎಂದು ಸಂಸದ ಎಂ.ಮಲ್ಲೇಶ್‌ಬಾಬು ಅಭಿಪ್ರಾಯಪಟ್ಟರು.ತಾಲೂಕಿನ ಕುಂಬಾರಹಳ್ಳಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರು.

ಜನರ ದಾರಿತಪ್ಪಿಸುವ ಯತ್ನ

ರಾಜ್ಯದ್ದಲಿ ಅಭಿವೃದ್ಧಿ ಕೆಲಸಗಳು ಅಗುತ್ತಿಲ್ಲ ಎಂದು ವಿರೋಧ ಪಕ್ಷಗಳ ಟೀಕಿಸುತ್ತಿವೆ. ಈ ಆರೋಪದಿಂದ ತಪ್ಪಿಸಿಕೊಳ್ಳಲು ಹಾಗೂ ಸರ್ಕಾರದ ವೈಫಲ್ಯಗಳನ್ನು ಮರೆಮಾಚಿ ಜನರನ್ನು ದಿಕ್ಕುತಪ್ಪಿಸಲು ಸರ್ಕಾರ ಇನ್ನೂ ಕಾಮಗಾರಿ ಮುಗಿಯದ ಯೋಜನೆಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿದೆ ಎಂದು ಟೀಕಿಸಿದರು.ಜಿಲ್ಲೆಯಲ್ಲಿ ಕಾಮಗಾರಿ ನಡೆದಿಲ್ಲ

ಹಾಸನ, ಚಿಕ್ಕಮಗಳೂರು, ತುಮಕೂರಿಗೆ ಎತ್ತಿನಹೊಳೆ ಯೋಜನೆಯನ್ನು ಸೀಮಿತ ಮಾಡುವ ಉದ್ದೇಶ ಇದ್ದಂತೆ ಕಾಣುತ್ತಿದೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಮರೆಯಬೇಡಿ ಎಂದು ಹೇಳುವ ಪರಿಸ್ಥಿತಿ ಬರಲಿದೆ. ಎತ್ತಿನಹೊಳೆ ಯೋಜನೆ ಮಾಡಿದ್ದೆ ಬರಪೀಡಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗಾಗಿ, ಆದರೆ ಕೋಲಾರ ಚಿಕ್ಕಬಳ್ಳಾಪುರ ಎತ್ತಿನಹೊಳೆ ಯೋಜನೆ ಸಂಬಂಧಪಟ್ಟ ಕೆಲಸ ಕಾರ್ಯಗಳು ನಡೆದಿಲ್ಲ ಎಂದು ಹೇಳಿದರು.

ಕೃಷ್ಣಾ ನೀರಿಗೆ ಆಂಧ್ರ ವಿರೋಧ

ಪಾರ್ಲಿಮೆಂಟ್‌ನಲ್ಲಿ ಕೃಷ್ಣನದಿ ನೀರು ಕೋಲಾರಕ್ಕೆ ಒದಗಿಸುವಂತೆ ಮಾಡಿದ ಮನವಿಗೆ ಆಂಧ್ರ ಸಂಸದರು ವಿರೋಧ ವ್ಯಕ್ತಪಡಿಸಿದರು. ಜಿಲ್ಲೆಯ ಪಕ್ಕದಲ್ಲಿ ಹಾದುಹೋಗಿರುವ ಕೃಷ್ಣನದಿ ಕೋಲಾರಕ್ಕೆ ತರಲು ಸಾಕಷ್ಟು ವಿರೋಧಾಬಾಸಗಳು ಇರುವ ವೇಳೆ, ಎತ್ತಿನಹೊಳೆ ಯೋಜನೆ ಕೋಲಾರ ಜಿಲ್ಲೆಗೆ ಬರುತ್ತದೆಯೇ ಎಂಬ ಆತಂಕ ಉಂಟಾಗಿದೆ ಎಂದರು.