ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರವನ್ನು ಅಭಿವೃದ್ದಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ದೆಸೆಯಲ್ಲಿ ಇನ್ಪೋಸಿಸ್ ಸಂಸ್ಥೆ ೨೦ ಕೋಟಿ ರು.ಗಳ ವೆಚ್ಚದಲ್ಲಿ ಕೋಲಾರಮ್ಮ ಕೆರೆ ಅಭಿವೃದ್ದಿಪಡಿಸಲು ಸಿ.ಎಸ್.ಆರ್. ಅನುದಾನದಲ್ಲಿ ಮಂಜೂರು ಮಾಡಲಾಗಿತ್ತು. ಆದರೆ ಆರಂಭದ ಹಂತದಲ್ಲಿಯೇ ಕಳಪೆ ಕಾಮಗಾರಿಯಿಂದಾಗಿ ಕೆರೆ ಕಟ್ಟೆ ಒಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಗರಸಭಾ ಸದಸ್ಯ ಮುರಳಿಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಆದಿದೇವತೆ ಕೋಲಾರಮ್ಮ ದೇವಾಲಯದ ಮುಂಭಾಗದ ಕೋಲಾರಮ್ಮ ಕೆರೆಗೆ ಭೇಟಿ ನೀಡಿದ ಅವರು ಮಾತನಾಡಿ, ಉದ್ಘಾಟನೆಗೆ ಮೊದಲೇ ಕೆರೆಯ ಕಟ್ಟೆಗಳು ಕುಸಿದು ಬಿದ್ದಿವೆ. ಗುಂಡಿಗಳು ನಿರ್ಮಾಣವಾಗಿವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಳಪೆ ಕಾಮಗಾರಿಗಳ ಬಣ್ಣ ಬಯಲಾಗಿದೆ ಎಂದರು.ಕೋಲಾರಮ್ಮ ಕೆರೆ ಜಾಗ ಒತ್ತುವರಿ
ಕೆರೆಯ ನೂರಾರು ಎಕೆರೆಯ ಜಾಗ ಹಾಗೂ ಸುತ್ತಮುತ್ತಲಿನ ಕಾಲುವೆಯ ಜಾಗ ಹಲವಾರು ಪಟ್ಟ ಭದ್ರ ಹಿತಾಸಕ್ತರು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಬಡಾವಣೆಗಳನ್ನೇ ನಿರ್ಮಿಸಿ ಕೊಂಡಿದ್ದಾರೆ. ಹಲವಾರು ಮಂದಿ ಅನೇಕ ಸಂಸ್ಥೆಗಳನ್ನು ಹುಟ್ಟು ಹಾಕಿಕೊಂಡಿದ್ದಾರೆ. ಸ್ಮಶಾನಗಳ ನೆಪದಲ್ಲಿ ಹತ್ತಾರು ಎಕರೆ ಕಬಳಿಸಿ ಕಾಂಪೌಂಡ್ ನಿರ್ಮಿಸಿ ಇಂದು ವಾಣಿಜ್ಯದ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೋಲಾರಮ್ಮ ಕೆರೆ ಅಭಿವೃದ್ದಿಪಡಿಸಿ ಪ್ರವಾಸಿ ತಾಣವಾಗಿ ಮಾಡುವ ಯೋಜನೆ ಇನ್ಪೋಸಿಸ್ ಸಂಸ್ಥೆ ರೂಪಿಸಿ ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತಕ್ಕೆ ಸಿ.ಎಸ್.ಆರ್. ಫಂಡ್‌ನಿಂದ ೨೦ ಕೋಟಿ ರು.ಗಳನ್ನು ಮಂಜೂರು ಮಾಡಿತ್ತು. ಆದರೆ ಈ ಯೋಜನೆ ಪಾರದರ್ಶಕವಾಗಿ ಅನುಷ್ಠನಕ್ಕೆ ತಾರದೆ ಗುಪ್ತವಾಗಿರಿಸಿಕೊಂಡು ಅಭಿವೃದ್ದಿ ಕಾರ್ಯಗಳಿಗೆ ಟೆಂಡರ್ ಕರೆಯದೆ ನೇರವಾಗಿ ಹೊರಗಿನವರಿಗೆ ಗುತ್ತಿಗೆ ನೀಡಲಾಗಿದೆ.ಇನ್ಫೋಸಿಸ್ ಹಣ ದುರ್ಬಳಕೆ
ಕೆರೆಯಲ್ಲಿ ಸಮರ್ಪಕವಾಗಿ ಹೂಳು ಎತ್ತಿ ಯಾವುದೇ ಕಟ್ಟೆಗಳನ್ನು ನಿರ್ಮಿಸದಿದ್ದರೆ ಇಂದು ಕೆರೆಯಲ್ಲಿ ಮಳೆನೀರು ಸಂಗ್ರಹವಾಗುತ್ತಿತ್ತು. ಆದರೆ ಸಿ.ಎಸ್.ಆರ್. ಹಣ ಲಪಟಾಯಿಸಲು ಅವೈಜ್ಞಾನಿಕ ಯೋಜನೆಗಳಿಂದಾಗಿ ೨೦ ಕೋಟಿ ಹಣ ದುರ್ಬಳಿಸಿ ಕೊಂಡಿದ್ದಾರೆ. ಇದರ ಜೂತೆಗೆ ನೀರು ಸಂಗ್ರಹವಾಗಲು ಇದ್ದ ಅವಕಾಶವು ತಪ್ಪಿ ಹೋಗಿದೆ ಎಂದರು.ಕೆರೆಯ ಸುತ್ತ ಸಾರ್ವಜನಿಕರ ವಾಯು ವಿಹಾರಕ್ಕೆ ವಾಕಿಂಗ್ ಪಾಥ್ ಮಾಡಲಾಗಿದೆ. ಕೆರೆಯಲ್ಲಿ ದೋಣಿ ವಿಹಾರಕ್ಕೆ ಸ್ವಲ್ಪ ಭಾಗ ಮೀಸಲಿಸಿ ಪ್ರತ್ಯೇಕವಾದ ಕಟ್ಟೆಯ ಸೇತುವೆ ಮಾಡಲಾಗಿದೆ. ನಂತರದಲ್ಲಿ ಗಾಂಧಿನಗರದ ಅಂಚಿನಲ್ಲಿರುವ ಕೆರೆಯ ಜಾಗದಲ್ಲಿ ಮಕ್ಕಳ ಉದ್ಯಾನವನ ನಿರ್ಮಿಸಲು ಮಕ್ಕಳ ಆಟದ ಪರಿಕರಗಳನ್ನು ಅಳವಡಿಸಲಾಗಿದೆ. ಕೆರೆಯ ಒಳ ಭಾಗದಲ್ಲೂ ಸಾರ್ವಜನಿಕರ ಸಂಚಾರಕ್ಕೆ ಮಾಡಲಾಗಿರುವ ಪಾದಚಾರಿ ರಸ್ತೆಗಳನ್ನು ವಾಕಿಂಕ್ ಪಾಥ್ ಮಾದರಿಯಲ್ಲಿ ಮಾಡಲಾಗಿದೆ. ಇವುಗಳ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಸಾರ್ವಜನಿಕರು ಬಳಸುತ್ತಿದ್ದಾರೆ.