ಹರಪನಹಳ್ಳಿ: ತಾಲೂಕಿನ ಅರಸೀಕೆರೆಯಲ್ಲಿ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಕೋಲಶಾಂತೇಶ್ವರ ರಥೋತ್ಸವ ಗುರುವಾರ ಸಂಜೆ ವಿವಿಧ ವಾದ್ಯಗಳೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳ ನೇತೃತ್ವ ವಹಿಸಿದ್ದರು. ನಂದಿಕೋಲು, ಡ್ರಮ್ ಸೆಟ್, ಹಲಗೆ, ಕೀಲು ಕುದುರೆ ಇನ್ನೂ ವಿವಿಧ ವಾದ್ಯಗಳು ಹಾಗೂ ತೀರ್ಥಹಳ್ಳಿಯ ವೀರಗಾಸೆ ಕುಣಿತ, ಗದಗ ಜಿಲ್ಲೆಯ ಕಣ್ಣೂರು ಮಹಿಳೆಯರ ಡೊಳ್ಳು ಕುಣಿತ ರಥೋತ್ಸವಕ್ಕೆ ಮೆರುಗು ನೀಡಿದವು.ಕೋಲಶಾಂತೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ರಥದ ಸುತ್ತ ಪ್ರದಕ್ಷಿಣೆ ಹಾಕಿದ ಆನಂತರ ಪಟ ಹಾಗೂ ವಿವಿಧ ಹೂವಿನ ಹಾರಗಳ ಹರಾಜು ನಡೆಯಿತು. ಆನಂತರ ರಥಕ್ಕೆ ಭಕ್ತರು ಚಾಲನೆ ನೀಡಿದರು.
ಅಪಾರ ಭಕ್ತರು ರಥ ಸಾಗುತ್ತಿದ್ದಂತೆ ಬಾಳೆಹಣ್ಣು ಎಸೆದು, ಚಕ್ರಕ್ಕೆ ತೆಂಗಿನಕಾಯಿ ಒಡೆದು ಭಕ್ತಿ ಅರ್ಪಿಸಿದರು. ಬೆಳಗ್ಗೆಯಿಂದಲೇ ಕೋಲಶಾಂತೇಶ್ವರ ಮಠಕ್ಕೆ ಭಕ್ತರು ತುಂಬಿದ ಕೊಡದಿಂದ ನೀರನ್ನು ಹಾಕಿ ಸ್ವಚ್ಛ ಮಾಡುವುದು, ಇಲ್ಲಿನ ಬಂದು ಹರಕೆ, ದೀಡು ನಮಸ್ಕಾರ ಹಾಕುವುದು, ದುಡ್ಡಿನ ಹಾರ, ಹೂವಿನ ಹಾರ, ಗಂಟೆ, ಬೆಳ್ಳಿಯ ಪತ್ರಿ, ಹೂವುಗಳನ್ನು ಸ್ವಾಮಿಗೆ ಕೊಟ್ಟು ತಮ್ಮ ಹರಕೆಗಳನ್ನು ದೇವರಿಗೆ ಒಪ್ಪಿಸಿದರು. ನಂತರ ಸ್ವಾಮಿಯ ಮಠಕ್ಕೆ ಪಾಯಸ, ಹೋಳಿಗೆ, ಅನ್ನವನ್ನು ನೈವೇದ್ಯ ತಂದು ಕೊಟ್ಟರು.ಶುಕ್ರವಾರ ರಾತ್ರಿ ಶೃಂಗರಿಸಿದ ಹೂವಿನ ಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವ ಮೂರ್ತಿಯೂ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಇಡೀ ರಾತ್ರಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು. ಮರುದಿನ ಅಂದರೆ ಶನಿವಾರ ಬೆಳಗ್ಗೆ 8 ಗಂಟೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಗುಡಿ ತುಂಬಿಸಲಾಗುವುದು.ರಥೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ಸಂಗ್ಯಾ-ಬಾಳ್ಯಾ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.
ಶಾತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು, ಮಾಜಿ ಸಂಸದ ವೈ. ದೇವೇಂದ್ರಪ್ಪ, ಎನ್. ಕೊಟ್ರೇಶ್, ಮುಖಂಡರಾದ ವೈ.ಡಿ. ಅಣ್ಣಪ್ಪ, ಪ್ರಶಾಂತ ಪಾಟೀಲ್, ಬಿ. ರಾಮಣ್ಣ, ಅಡ್ಡಿ ಚನ್ನವೀರಪ್ಪ, ಎ.ಎಚ್. ಪಂಪಣ್ಣ, ಎಚ್. ನಾಗರಾಜಪ್ಪ, ಜಿ.ವಿ. ವೆಂಕಟೇಶ್ ಶೆಟ್ರು, ಎನ್.ಎಂ. ವೃಷಭೇಂದ್ರಯ್ಯ, ಕೆ.ಎಂ. ವಿಶ್ವನಾಥಯ್ಯ, ಪೂಜಾರ್ ಮರಿಯಪ್ಪ, ನೆಲಗೊಂಡನಹಳ್ಳಿ ಭರತ್, ಐ. ಸಲಾಂ ಸಾಹೇಬ್, ಎಸ್. ಆನಂದಪ್ಪ, ಕೆ. ಮಹಾಂತೇಶ್, ಶಾಂತಕುಮಾರ್, ನವೀನ್ ಪಾಲ್ಗೊಂಡಿದ್ದರು.