ಸಾರಾಂಶ
ಶುಕ್ರವಾರ ಸರ್ದಾರ್ ಮೈದಾನಕ್ಕೆ ಭೇಟಿ ನೀಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಂಬಿಗರ ಚೌಡಯ್ಯ ಜಯಂತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಬೆಂಬಲ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಫೆ.೪ರಂದು ನಡೆಯಲಿರುವ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಹಾಗೂ ಬೃಹತ್ ಜನಜಾಗೃತಿ ಸಮಾವೇಶದ ಸಿದ್ದತೆಗಳು ಭರದಿಂದ ಸಾಗಿವೆ. ಬೆಳಗಾವಿ ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ್ ಕುರುಂದವಾಡೆ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು ಬೃಹತ್ ವೇದಿಕೆ ಸಿದ್ಧವಾಗುತ್ತಿದೆ.ಶುಕ್ರವಾರ ಸರ್ದಾರ್ ಮೈದಾನಕ್ಕೆ ಭೇಟಿ ನೀಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಂಬಿಗರ ಚೌಡಯ್ಯ ಜಯಂತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಬೆಂಬಲ ಸೂಚಿಸಿದರು.
ಸಿದ್ದತೆಗಳನ್ನು ಪರಿಶೀಲನೆ ಮಾಡಿ ಸಂತಸ ವ್ಯಕ್ತಪಡಿಸಿದ ಶ್ರೀಗಳು ಶುಭ ಹಾರೈಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಕಿತ್ತೂರು ರಾಣಿ ಚೆನ್ನಮ್ಮನವರ 195ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿರುವ ಜ್ಯೋತಿ ಯಾತ್ರೆಯನ್ನು ನಗರದಲ್ಲಿ ಸ್ವಾಗತಿಸಿದ್ದು ಸಂತಸ ಒಂದೆಡೆಯಾದರೆ, ೧೨ನೇ ಶತಮಾನದ ಅನುಭವ ಮಂಟಪದಲ್ಲಿ ನಿಜಶರಣರಾಗಿದ್ದ ಶ್ರೀ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತಿ ಆಚರಣೆಗೆ ಬೆಳಗಾವಿ ನಗರ ನವವಧುವಿನಂತೆ ಸಿಂಗಾರಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.ಹಿರಿಯ ಪತ್ರಕರ್ತ ಹಾಗೂ ಗಂಗಾಮತಸ್ಥರ ಸಮಾಜ ಸಂಘದ ಅಧ್ಯಕ್ಷ ದಿಲೀಪ್ ಕುರುಂದವಾಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶದ ಮೂಲಕ ಎಸ್.ಟಿ ಮೀಸಲಾತಿಗೆ ಹಕ್ಕೊತ್ತಾಯ ಮಂಡಿಸುವುದರೊಂದಿಗೆ ಮೀಸಲಾತಿಗೆ ಒತ್ತಾಯಿಸಲಿದ್ದಾರೆ.
ಹಲವಾರು ವರ್ಷಗಳ ಈ ಹೋರಾಟಕ್ಕೆ ಫಲ ಸಿಗಬೇಕು. ಕೋಳಿ ಬೆಸ್ತ್ ಸಮಾಜಕ್ಕೆ ಎಸ್.ಟಿ ಮೀಸಲಾತಿ ಸಿಗಬೇಕು ಎಂಬುದು ನನ್ನ ಅನಿಸಿಕೆ. ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿ ಇರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಧಿವೇಶನದಲ್ಲಿ ಮಾತನಾಡುವಾಗ ಕೋಳಿ ಸಮಾಜಕ್ಕೂ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ಕೋಳಿ ಸಮಾಜವಾಗಲಿ, ಪಂಚಮಸಾಲಿ ಸಮಾಜವಾಗಲಿ ಎಲ್ಲರಿಗೂ ಮೀಸಲಾತಿ ಸಿಗಬೇಕು. ಎಲ್ಲ ಸಾಮಾಜಗಳಿಗೂ ಸಾಮಾಜಿಕ ನ್ಯಾಯ ಸಿಗಲಿ. ಸರ್ಕಾರ ಕಣ್ಣು ತೆರೆಯಲಿ ಎಂದು ಹೇಳಿದರು.ಈ ವೇಳೆ ಸಿದ್ದುಗೌಡ ಸುಣಗಾರ, ಅಮರೇಶ ಕಾಮನಕೇರಿ, ರಾಮಚಂದ್ರ ಸುಣಗಾರ, ಸಿದ್ದರಾಮ ಕಲ್ಲಹಳ್ಳಿ, ಕಿಶೋರ್ ಶಿರಗೆ ಮತ್ತಿತರರು ಇದ್ದರು.