ಕೋಲ್ಕತಾ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ

| Published : Aug 18 2024, 01:47 AM IST

ಸಾರಾಂಶ

ಸಿಂಧನೂರಿನಲ್ಲಿ ಐಎಂಎ ನೆತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಐಎಂಎ ಮಾಜಿ ಅಧ್ಯಕ್ಷ ಡಾ.ಕೆ.ಶಿವರಾಜ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕೊಲ್ಕತಾದ ಕೆಆರ್ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯನಿರತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ಆ.9ರಂದು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯನ್ನು ಸಮಗ್ರ ತನಿಖೆ ನಡೆಸಿ, ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಘಟಕ ಶನಿವಾರ ಮಹಾತ್ಮಗಾಂಧಿ ವೃತ್ತ ಹಾಗೂ ಮಿನಿ ವಿಧಾನಸೌಧ ಕಚೇರಿಯ ಮುಂದೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೃಹತ್ ಪ್ರತಿಭಟನೆ ನಡೆಸಿತು.

ಕೊಲ್ಕತಾ ಹೈಕೋರ್ಟ್ ನಡೆಸಿದ ತನಿಖೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳು ಸಾಕ್ಷಿ ನಾಶಗೊಳಿಸುವ ಸಾಧ್ಯತೆಗಳನ್ನು ಊಹಿಸಿದ್ದಾರೆ. ಆ.15 ರಂದು ದೊಡ್ಡ ಗುಂಪು ಆಸ್ಪತ್ರೆಯ ಆವರಣ ಪ್ರವೇಶಿಸಿ ದಾಂಧಲೆ ಎಬ್ಬಿಸಿ, ಅಪರಾಧಿ ಓಡಾಡಿದ ಸ್ಥಳಗಳಲ್ಲಿ ಸಾಕ್ಷಿ ನಾಶಪಡಿಸಿದ್ದು ಕಂಡು ಬಂದಿದೆ. ಪ್ರತಿಭಟನೆ ನಡೆಸಿದ ಕಿರಿಯ ವೈದ್ಯಾಧಿಕಾರಿಗಳ ಮೇಲೂ ದಾಳಿ ಮಾಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಾ.ಕೆ.ಶಿವರಾಜ ಆರೋಪಿಸಿದರು.

ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮೃತ ವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಂತಹ ಘಟನೆ ಮರುಳಿಸದಂತೆ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ವರ್ಗದವರು ಇದ್ದರು.