ಯುಜಿಡಿ ಒಳಚರಂಡಿ ಕಾಮಗಾರಿ ಲೋಪ: ಲೋಕಾಯುಕ್ತರಿಂದ ಡಿಸಿ ಶಿಲ್ಪಾನಾಗ್‌ಗೆ ನೋಟಿಸ್‌

| Published : Aug 26 2024, 01:37 AM IST

ಯುಜಿಡಿ ಒಳಚರಂಡಿ ಕಾಮಗಾರಿ ಲೋಪ: ಲೋಕಾಯುಕ್ತರಿಂದ ಡಿಸಿ ಶಿಲ್ಪಾನಾಗ್‌ಗೆ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಯುಜಿಡಿ (ಒಳಚರಣಡಿ) ಕಾಮಗಾರಿ ಸಂಪೂರ್ಣವಾಗಿಲ್ಲವಾದರೂ ಕೊಳ್ಳೇಗಾಲ ನಗರಸಭೆ ಅದನ್ನು ಹಸ್ತಾಂತರಿಸಿಕೊಂಡು ಕರ್ತವ್ಯಲೋಪ ಆರೋಪದ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಇಲಾಖೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಒಳಗೊಂಡಂತೆ 16 ಜನರಿಗೆ ನೋಟಿಸ್ ಜಾರಿಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಲೋಕಾಯುಕ್ತ ಕ್ರಮ । ಕಾಮಗಾರಿ ಸಂಪೂರ್ಣವಾಗಿಲ್ಲದಿದ್ದರೂ ಕೊಳ್ಳೇಗಾಲ ನಗರಸಭೆಯಿಂದ ಹಸ್ತಾಂತರ ಆರೋಪ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಯುಜಿಡಿ (ಒಳಚರಣಡಿ) ಕಾಮಗಾರಿ ಸಂಪೂರ್ಣವಾಗಿಲ್ಲವಾದರೂ ಕೊಳ್ಳೇಗಾಲ ನಗರಸಭೆ ಅದನ್ನು ಹಸ್ತಾಂತರಿಸಿಕೊಂಡು ಕರ್ತವ್ಯಲೋಪ ಆರೋಪದ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಇಲಾಖೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಒಳಗೊಂಡಂತೆ 16 ಜನರಿಗೆ ನೋಟಿಸ್ ಜಾರಿಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರಸಭೆ ಆರೋಪ ಖಂಡಿಸಿ ನಗರಸಭಾ ಸದಸ್ಯರಾದ ಜಯಮೇರಿ ಅವರು ಲೋಕಾಯುಕ್ತಕ್ಕೆ ಇತ್ತೀಚಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಕ್ರಮ ಕೈಗೊಂಡಿದೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಒಳಚರಂಡಿ ಮಂಡಳಿಯಿಂದ 97.11.ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇದನ್ನು ನಗರಸಭೆಗೆ ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿತ್ತು.

ಇಲ್ಲಿನ ಕಾಮಗಾರಿ ಲೋಪ ಕುರಿತು ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆ ಇದನ್ನು ಮನಗಂಡ ನಗರಸಭೆ ಬಿಎಸ್ಪಿ ಸದಸ್ಯೆ ಜಯಮೇರಿ ಅವರು ಜೂ.5 ರಂದು ಲೋಕಾಯುಕ್ತಕ್ಕೆ ಐವರು ಅಧಿಕಾರಿಗಳು, ನಗರಸಭೆ ಮಾಜಿ ಅಧ್ಯಕ್ಷರು, ಸದಸ್ಯರು, ಗುತ್ತಿಗೆದಾರರು ಸೇರಿದಂತೆ 15 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಈ‌ ಹಿನ್ನೆಲೆ, ಲೋಕಾಯುಕ್ತರ ನಿರ್ದೇಶನದಂತೆ ತನಿಖೆ ನಡೆಸುವ ಸಂಬಂಧ ಲೋಕಾಯುಕ್ತ ಅಪರ ನಿಬಂಧಕರು, ಬಿಡಬ್ಲ್ಯುಎಸ್‌ಎಸ್‌ಬಿ ಚಾಮರಾಜನನಗರದ ಇಇಎಸ್ ಉಮೇಶ್, ಚಾಮರಾಜನಗರ ಡಿಯುಡಿಸಿಯ ಹಿಂದಿನ ಯೋಜನಾ ನಿರ್ದೇಶಕರಾಗಿದ್ದ ಕೆ.ಸುರೇಶ್, ಕೊಳ್ಳೇಗಾಲ ನಗರಸಭೆಯ ಹಿಂದಿನ ಪ್ರಭಾರ ಎಇಇ ಸಿ.ಎಂ.ನಟರಾಜು, ಕಂದಾಯ ವಿಭಾಗದ ಹಿಂದಿನ ಎಇಇ ಗಂಗಾಧರ್, ಯುಜಿಡಿ ಕಾಮಗಾರಿ ಗುತ್ತಿಗೆದಾರ ಮೈಸೂರಿನ ರಾಮೇಗೌಡ, ಹಿಂದಿನ ಪೌರಾಯುಕ್ತ ಎಸ್.ನಂಜುಂಡಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಸೇರಿದಂತೆ ಹಲವರಿಗೆ ವಿಚಾರಣಾ ನೋಟಿಸ್ ಕಳುಹಿಸಲಾಗಿದೆ.

ಸೆ.25ರೊಳಗೆ ಪ್ರಕರಣದ ಕುರಿತು ಸೂಕ್ತ ಮಾಹಿತಿ ನೀಡುವಂತೆ (ದಾಖಲೆ ಸಮೇತ) ಸೂಚಿಸಲಾಗಿದೆ. ಅಲ್ಲದೆ ಜಯಮೇರಿ ನೀಡಿದ ದೂರಿನನ್ವಯ ಜಿಲ್ಲಾಧಿಕಾರಿಗಳನ್ನು ಸಹ ವಿಚಾರಣೆ ನಡೆಸುವಂತೆ ನೋಟಿಸ್ ನೀಡಿರುವುದು ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ.

ಕಡತ ನಾಪತ್ತೆ, ಜಿಲ್ಲಾಡಳಿತ ಮೌನ:

ಈ ಪ್ರಕರಣದಲ್ಲಿ ಹಿಂದಿನ ಅಧಿಕಾರಿ ಗೀತಾ ಹುಡೇದ್ ಅವರು ಸುದೀರ್ಘ ವಿಚಾರಣೆ ನಡೆಸಿದ್ದರು. ಈ ವೇಳೆ ನಗರಸಭೆ ಯುಜಿಡಿ ಕಾಮಗಾರಿ ಹಸ್ತಾಂತರ ಮಾಡಿಕೊಂಡ ಕುರಿತ ಅನೇಕ ಕಡತಗಳು ಮಾಯವಾಗಿದ್ದವು. ನಗರಸಭೆಯಲ್ಲಿ ಕಡತ ಮಾಯವಾದ ಕುರಿತ ವರದಿಯನ್ನು ಗೀತಾ ಹುಡೇದ್ ಅವರು ಸಲ್ಲಿಸಿದ್ದರು.

ಕಳೆದ ಒಂದು ವರ್ಷದ ಹಿಂದೆ ಹಿರಿಯ ಅಧಿಕಾರಿಯೇ ಕಡತ ನಾಪತ್ತೆ ಪ್ರಕರಣದ ಕುರಿತು ವರದಿ ನೀಡಿದ್ದರೂ ಸಹ ಜಿಲ್ಲಾಡಳಿತಕ ಅಗತ್ಯ ಕ್ರಮಕೈಗೊಳ್ಳದ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿತ್ತು.