ಕೊಂಡ ಕೃಷ್ಣಮೂರ್ತಿ ಅವರ ಸೇವೆ ಇತರರಿಗೆ ಮಾದರಿ

| Published : Sep 10 2024, 01:31 AM IST

ಸಾರಾಂಶ

ರಾಯಚೂರು ನಗರದ ಖಾಸಗಿ ಹಬ್‌ನ ಸಭಾಂಗಣದಲ್ಲಿ ಆರ್ಯವೈಶ್ಯ ಸಮಾಜ, ಶ್ರೀನಗರೇಶ್ವರ ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ಹಿರಿಯ ಮುಖಂಡ ಕೊಂಡ ಕೃಷ್ಣಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಆರ್ಯವೈಶ್ಯ ಸಮಾಜದ ಪ್ರಮುಖ ವ್ಯಕ್ತಿ ಕೊಂಡ ಕೃಷ್ಣಮೂರ್ತಿ ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್‌.ಬೋಸರಾಜು ಹೇಳಿದರು.

ಸ್ಥಳೀಯ ಹಬ್‌ನ ಸಭಾಂಗಣದಲ್ಲಿ ಆರ್ಯವೈಶ್ಯ ಸಮಾಜ, ಶ್ರೀನಗರೇಶ್ವರ ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಬಹುಮುಖ ಪ್ರತಿಭೆಯಾಗಿದ್ದ ಕೊಂಡ ಕೃಷ್ಣಮೂರ್ತಿ ಅವರು ಆರ್ಯವೈಶ್ಯ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಹೇಳಿದರು.

ಉದ್ಯಮಿಯಾಗಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ, ಪರಿಸರ ಪ್ರೇಮಿಯಾಗಿ ಹಲವಾರು ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ಉದ್ಯಮಿಯಾಗಿರದೇ ರೈತಪರ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಶಿಕ್ಷಣ ಸಂಸ್ಥೆ ಆರಂಭಿಸಿ ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ಇಷ್ಟೇ ಅಲ್ಲದೇ ಅಪಾರ ಪರಿಸರ ಕಾಳಜಿಯನ್ನು ಹೊಂದಿದ್ದ ಅವರು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದಾರೆ ಇಂತಹ ವ್ಯಕ್ತಿಯ ಅಗಲಿಕೆ ಅವರ ಕುಟುಂಬಕ್ಕಷ್ಟೇ ಅಲ್ಲ ಆರ್ಯವೈಶ್ಯ ಜೊತೆಗೆ ಇತರೆ ಸಮಾಜಕ್ಕೆ ತೀರದ ನಷ್ಟವಾಗಿದೆ ಎಂದರು.

ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ಬದುಕು ಹೇಗಿರಬೇಕು, ಬದುಕಿದ್ದರೆ ಹೇಗೆ ಬದುಕಬೇಕು ಎಂಬುವುದನ್ನು ಕೊಂಡ ಕೃಷ್ಣಮೂರ್ತಿ ಅವರು ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.

ಸಮಾರಂಭದಲ್ಲಿ ಮಾಜಿ ಎಂಎಲ್‌ಸಿ ಎನ್.ಶಂಕ್ರಪ್ಪ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆಯ ರಾಜಯೋಗಿನಿ ಸ್ಮಿತಾ ಅಕ್ಕ, ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮುಖಂಡರಾದ ಗಾಣಧಾಳು ಲಕ್ಷ್ಮೀಪತಿ, ಸಿ.ವಿ.ಪಾಟೀಲ್, ವೆಂಕಟಾಪೂರು ಷಣ್ಮುಖಪ್ಪ, ಪಲುಗುಲ ನಾಗರಾಜ ಮಾತನಾಡಿದರು.

ಈ ವೇಳೆ ಆರ್ಯವೈಶ್ಯ ಸೇವಾ ಸಂಘದ ಅಧ್ಯಕ್ಷ ಎಂ.ಆರ್.ನರಸಯ್ಯ, ಕರ್ನಾಟಕ ಆರ್ಯವೈಶ್ಯ ಮಹಾಸಭ ಹಿರಿಯ ಉಪಾಧ್ಯಕ್ಷ ಕುಂಟ್ನಾಳ ವೆಂಕಟೇಶ, ಆರ್‌ಡಿಎ ಮಾಜಿ ಅಧ್ಯಕ್ಷ ಬಿ.ಗೋವಿಂದ, ಮಹಾಸಭ ಕಲಬುರಗಿ ವಿಭಾಗದ ಉಪಾಧ್ಯಕ್ಷ ಆರ್.ಮುತ್ತುರಾಜ ಶೆಟ್ಟಿ, ಹರವಿ ನಾಗನಗೌಡ ಸೇರಿ ಸಮಾಜದ ಪ್ರಮುಖರು, ಮುಖಂಡರು, ಕುಟುಂಬಸ್ಥರು ಪಾಲ್ಗೊಂಡಿದ್ದರು.