ಸಾರಾಂಶ
ಚಳ್ಳಕೆರೆ ತಾಲ್ಲೂಕಿನ ಗಡಿಭಾಗದಲ್ಲಿ ಬರುವ ಕೋನಿಗರಹಳ್ಳಿ ಗ್ರಾಮದ ಬಳಿ ವೇದಾವತಿ ನದಿ ಭಾಗದಲ್ಲಿ ನಿರ್ಮಿಸಿರುವ ಒಮ್ಮುಖ ಸಂಚಾರದ ಸೇತುವೆ ಕಳೆದ ಕೆಲವಾರು ವರ್ಷಗಳಿಂದ ಪೂರ್ಣಪ್ರಮಾಣದಲ್ಲಿ ಶಿಥಿಲಗೊಂಡಿದ್ದು, ಪ್ರತಿನಿತ್ಯವೂ ಇಲ್ಲಿ ಓಡಾಡುವ ವಾಹನ ಸವಾರರಿಗೆ ಪ್ರಾಣಭಯ ತಂದೊಡ್ಡಿದೆ.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ೧೧ ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಜನರ ವಿಶ್ವಾಸವನ್ನು ಗಳಿಸಿದ ಶಾಸಕ ಟಿ.ರಘುಮೂರ್ತಿ ಜನರ ಅಭಿರುಚಿಗೆ ತಕ್ಕಹಾಗೆ ಕಾಮಗಾರಿಗಳನ್ನು ಪೂರೈಸಿದ್ದಾರೆ. ಆದರೆ, ತಾಲ್ಲೂಕಿನ ಗಡಿಭಾಗದಲ್ಲಿ ಬರುವ ಕೋನಿಗರಹಳ್ಳಿ ಗ್ರಾಮದ ಬಳಿ ವೇದಾವತಿ ನದಿ ಭಾಗದಲ್ಲಿ ನಿರ್ಮಿಸಿರುವ ಒಮ್ಮುಖ ಸಂಚಾರದ ಸೇತುವೆ ಕಳೆದ ಕೆಲವಾರು ವರ್ಷಗಳಿಂದ ಪೂರ್ಣಪ್ರಮಾಣದಲ್ಲಿ ಶಿಥಿಲಗೊಂಡಿದ್ದು, ಪ್ರತಿನಿತ್ಯವೂ ಇಲ್ಲಿ ಓಡಾಡುವ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಪ್ರಾಣಭಯ ಉಂಟು ಮಾಡಿದ್ದು, ಕೂಡಲೇ ಈ ಸೇತುವೆ ದುರಸ್ಥಿಗೆ ಶಾಸಕರು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಯಲಗಟ್ಟೆ ಗೊಲ್ಲರಹಟ್ಟಿಯಿಂದ ಈ ಸೇತುವೆ ಮೂಲಕ ಕೋನಿಗರಹಳ್ಳಿ, ಟಿ.ಎನ್.ಕೋಟೆ, ಕೋಟೆ ಓಬಳಾಪುರ ಮುಂತಾದ ಗ್ರಾಮಗಳಿಗೆ ಸಂಪರ್ಕ ನೀಡುವ ಸೇತುವೆಯಾಗಿದೆ. ಒಮ್ಮುಖ ಸೇತುವೆ ಯಾದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಬರಬೇಕಾಗಿದೆ. ಕಾರಣ ಸೇತುವೆಯ ಎರಡೂ ಭಾಗದಲ್ಲಿ ತಡೆಗೋಡೆ ಸಂಪೂರ್ಣ ಶಿಥಿಲಗೊಂಡು ಬಿದ್ದುಹೋಗಿದ್ದು, ವಿದ್ಯುತ್ ಕಂಬಗಳೂ ಸಹ ರಸ್ತೆಗೆ ವಾಲಿವೆ. ಆನೇಕ ಸಂದರ್ಭದಲ್ಲಿ ಇಲ್ಲಿ ಓಡಾಡುವ ಸಾರ್ವಜನಿಕರು ಜಾನುವಾರುಗಳು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದರೆ ಪ್ರಾಣಕ್ಕೆ ಅಪಾಯ ಗ್ಯಾರಂಟಿ.
ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿದರೂ ಯಾರೂ ಈ ಬಗ್ಗೆ ಗಮನಹರಿಸಿಲ್ಲವೆಂಬುವುದು ಗ್ರಾಮಸ್ಥರ ಅಳಲು. ಕಳೆದ ವರ್ಷ ಮಳೆಯ ಸಂದರ್ಭದಲ್ಲಿ ಸೇತುವೆ ಮೇಲೆ ಯಿಂದ ನೀರು ಹರಿದ ಪರಿಣಾಮವಾಗಿ ಸೇತುವೆ ಮತ್ತಷ್ಟು ದುರ್ಬಲವಾಗಿದೆ. ಈ ಭಾಗದ ಸಾರ್ವಜನಿಕರ ಹಾಗೂ ಜಾನುವಾರಗಳ ಹಿತರಕ್ಷಣೆಯಿಂದ ಸೇತುವೆ ರಿಪೇರಿ ಹಾಗೂ ವಿದ್ಯುತ್ ಕಂಬಗಳ ಸರಿ ಪಡಿಸುವ ಕಾರ್ಯ ತುರ್ತಾಗಿ ಆಗಬೇಕೆಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.