ಸಾರಾಂಶ
ತೊಟ್ಟಂ ಚರ್ಚಿನ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಕೆಥೊಲಿಕ್ ವಿದ್ಯಾರ್ಥಿ ಸಂಚಾಲನ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವೈಸಿಎಸ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕೊಂಕಣಿ ಸಂಸ್ಕೃತಿ ನಮ್ಮ ಪೂರ್ವಜರು ನಮಗೆ ನೀಡಿದ ವಿಶೇಷ ಆಸ್ತಿಯಾಗಿದೆ. ಯುವಜನರು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುವುದರೊಂದಿಗೆ ಪೋಷಿಸುವ ಕೆಲಸ ಮಾಡಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಗುರುವಾರ ತೊಟ್ಟಂ ಚರ್ಚಿನ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಕೆಥೊಲಿಕ್ ವಿದ್ಯಾರ್ಥಿ ಸಂಚಾಲನ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವೈಸಿಎಸ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೊಂಕಣಿ ಸಂಸ್ಕೃತಿಯನ್ನು ಪ್ರತಿಯೊಬ್ಬರು ಕಲಿಯವುದರೊಂದಿಗೆ ಅದನ್ನು ಉಳಿಸಿ ಬೆಳೆಸುವ ವಿಶೇಷ ಜವಾಬ್ದಾರಿಯಿದ್ದು, ಅದನ್ನು ಮುಂದಿನ ಜನಾಂಗಕ್ಕೂ ಹಸ್ತಾಂತರಿಸುವ ಕೆಲಸ ಯುವಜನರಿಂದ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗದೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಚರ್ಚುಗಳಿಂದ ಆಗಮಿಸಿದ ಶಿಬಿರಾರ್ಥಿಗಳಿಗೆ ಧರ್ಮಾಧ್ಯಕ್ಷರು ಪ್ರಮಾಣ ಪತ್ರವನ್ನು ವಿತರಿಸಿದರು.ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಲು ಸಹಕಾರ ನೀಡಿದ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಂ.ಡೆನಿಸ್ ಡೆಸಾ, ಐಸಿವೈಎಂ ಮತ್ತು ವೈಸಿಎಸ್ ಸಂಘಟನೆಯ ಸದಸ್ಯರನ್ನು ಧರ್ಮಪ್ರಾಂತ್ಯದ ಯುವ ಆಯೋಗದ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕೊಂಕಣ್ ಮೈನಾ ಮೀನಾ ರೆಬಿಂಬಸ್, ಯುವ ಆಯೋಗದ ನಿರ್ದೇಶಕ ವಂ.ಸ್ಟೀಫನ್ ಫರ್ನಾಂಡಿಸ್, ವೈಸಿಎಸ್ ಸಚೇತಕರಾದ ಲವೀನಾ ಆರೋಝಾ, ಕವಿತಾ ಸುನೀತಾ ಡಿಸೋಜ, ತೊಟ್ಟಂ ಪಾಲನಾ ಸಮಿತಿಯ ಬ್ಲೆಸಿಲ್ಲಾ ಕ್ರಾಸ್ತಾ ವನಿತಾ ಫೆರ್ನಾಂಡಿಸ್, ವೈಸಿಎಸ್ ಕೇಂದ್ರಿಯ ಅಧ್ಯಕ್ಷ ಜೊಶ್ವಾ, ಪ್ರೀಶಲ್ ಡಿಮೆಲ್ಲೊ ಉಪಸ್ಥಿತರಿದ್ದರು.;Resize=(128,128))
;Resize=(128,128))