ಕೊಂಕಣಿ ಸಂಘಟಕ, ಬಹುಮುಖ ಪ್ರತಿಭೆಯ ಎರಿಕ್‌ ಒಝೇರಿಯೊ ನಿಧನ

| Published : Aug 30 2025, 01:01 AM IST

ಸಾರಾಂಶ

ಕೊಂಕಣಿಯ ಖ್ಯಾತ ಸಂಗೀತಕಾರ, ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ (76) ಶುಕ್ರವಾರ ನಿಧನರಾದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಶ್ರಮಿಸಿದವರಲ್ಲಿ ಪ್ರಮುಖರು, ಕೊಂಕಣಿಯ ಖ್ಯಾತ ಸಂಗೀತಕಾರ, ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ (76) ಶುಕ್ರವಾರ ನಿಧನರಾಗಿದ್ದಾರೆ.

ಎರಿಕ್‌ ಒಝೇರಿಯೊ ಅವರು ಮಾಂಡ್‌ ಸೊಭಾಣ್‌ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ, ದಶಕಗಳಿಂದ ಮಾತೃ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ.

ಜಗತ್ತಿನಾದ್ಯಂತ ಕೊಂಕಣಿ ಭಾಷಿಕರ ಏಕೀಕರಣ, ಕೊಂಕಣಿ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು, ಗುಮಟ್, ಬೈಲಾ ನೃತ್ಯ, ಹಿತ್ತಾಳೆ ಬ್ಯಾಂಡ್‌ನಂತಹ ಕೊಂಕಣಿ ಜಾನಪದ ರೂಪಗಳ ಪುನರುಜ್ಜೀವನ. ಸಿದ್ದಿ, ಕುಡುಬಿ, ಖಾರ್ವಿ ಸಮುದಾಯಗಳ ಕಲ್ಯಾಣ, ಭಾರತದ ಪಶ್ಚಿಮ ಕರಾವಳಿಯಾದ್ಯಂತ ವಿವಿಧ ಉಪಭಾಷೆಗಳ ನಡುವೆ ಸೇತುವೆಯಾಗಿದ್ದ ಎರಿಕ್‌ ಒಝೇರಿಯೊ, ಕಲೆ, ಸಂಸ್ಕೃತಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿದ್ದಾರೆ.

1000ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ, ಜಗತ್ತಿನಾದ್ಯಂತ 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದ್ದಾರೆ.

2005ರಿಂದ 2008ರವರೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ರಾಜ್ಯಾದ್ಯಂತ ಕೊಂಕಣಿ ಕಾರ್ಯಕ್ರಮಗಳನ್ನು ರೂಪಿಸಿ ಗಮನ ಸೆಳೆದರು. ಗಮನಾರ್ಹ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದರು.

ಮಂಗಳೂರಿನಲ್ಲಿ ನಡೆದ ಮೊದಲ ವಿಶ್ವ ಕೊಂಕಣಿ ಸಮಾವೇಶದ ಶಿಲ್ಪಿಗಳಲ್ಲಿ ಒಬ್ಬರು.ಮೃತರು ಪತ್ನಿ ಜಾಯ್ಸ್, ಮಕ್ಕಳಾದ ಡಾ. ರಶ್ಮಿ ಕಿರಣ್ ಮತ್ತು ರಿತೇಶ್ ಕಿರಣ್ ಸೇರಿದಂತೆ ಅಭಿಮಾನಿಗಳು ಅಗಲಿದ್ದಾರೆ. ಅವರ ನಿಧನಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ಸಂತಾಪ ವ್ಯಕ್ತಪಡಿಸಿದ್ದಾರೆ.ನಾಳೆ ಅಂತ್ಯಕ್ರಿಯೆ: ಆಗಸ್ಟ್ 31ರಂದು ಬೆಳಗ್ಗೆ 11.15ಕ್ಕೆ ವೆಲೆನ್ಸಿಯಾದಲ್ಲಿರುವ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಪಾರ್ಥೀವ ಶರೀರವನ್ನು ಮಧ್ಯಾಹ್ನ 1ರಿಂದ ಸಂಜೆ 4.30ರವರೆಗೆ ಕಲಾಂಗಣ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಂಜೆ 4:30ಕ್ಕೆ ಬೋಳೂರು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.