ಸಾರಾಂಶ
ಭೀಮಣ್ಣ ಗಜಾಪುರ
ಕೂಡ್ಲಿಗಿ: ಅತ್ಯಂತ ಹಳೆಯ ಡಿಪೋಗಳಲ್ಲಿ ಒಂದಾಗಿರುವ ಕೂಡ್ಲಿಗಿ ಡಿಪೋ ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಉತ್ತಮ ಸ್ಥಿತಿಯಲ್ಲಿರುವ ಬಸ್ಸುಗಳು ಇಲ್ಲಿಲ್ಲ, ಐಶಾರಾಮಿ ಬಸ್‌ನ ಸೌಲಭ್ಯವನ್ನೂ ನೀಡಿಲ್ಲ, ಪಕ್ಕದ ಡಿಪೋಗಳಲ್ಲಿ ಸಾಕಷ್ಟು ಐಶಾರಾಮಿ ಬಸ್‌ಗಳಿದ್ದು, ಉತ್ತಮ ಕಲೆಕ್ಷನ್ ಇರುವ ಮಾರ್ಗಗಳಿವೆ ಆದರೆ, ಕೂಡ್ಲಿಗಿ ಡಿಪೋ ನಿರ್ಲಕ್ಷ್ಯ, ಬಸ್‌ಗಳ ಕೊರತೆಗೆ ಪ್ರಯಾಣಿಕರು ನಲುಗಿದ್ದಾರೆ.ಕೋವಿಡ್ ನಂತರ ಬಂದ್ ಆದ ರೂಟ್‌ಗಳನ್ನು ಪುನರ್ ಆರಂಭಿಸಿಲ್ಲ. ಹೊಸ ಮಾರ್ಗಗಳನ್ನು ಕೂಡ ಬಿಟ್ಟಿಲ್ಲ. ಹೀಗಾಗಿ ಪ್ರಯಾಣಿಕರು ಕೂಡ್ಲಿಗಿ ಡಿಪೋವನ್ನು ಪ್ರತಿನಿತ್ಯ ಶಪಿಸುತ್ತಾರೆ. ಇಲ್ಲಿಗೆ ಬರುವ ಅಧಿಕಾರಿಗಳಿಗೂ ತಮ್ಮ ಹಿತಾಸಕ್ತಿಯೇ ಮುಖ್ಯವಾಗಿದೆಯೇ ಹೊರತು ಪ್ರಯಾಣಿಕರು, ಡಿಪೋದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹಾಗಾಗಿಯೇ 2004ರಿಂದ ಇಲ್ಲಿವರೆಗೂ ಕೂಡ್ಲಿಗಿ ಡಿಪೋ ನಷ್ಟದಲ್ಲೇ ಮುಂದುವರಿಯುತ್ತಿದೆ.
1963ರಲ್ಲಿ ಪ್ರಾರಂಭವಾದ ಹಳೇಯ ಡಿಪೋ ಇದು. ಇಲ್ಲಿ ಬಹುತೇಕ ಬಸ್‌ಗಳು ಕಿತ್ತೋಗಿರುವ ಹಳೆ ಡಕೋಟ ಬಸ್‌ಗಳೇ. 8 ಲಕ್ಷ ಕಿ.ಮೀ. ಸಾಗಿದ ಬಸ್ ಗುಜರಿ ಸೇರಬೇಕೆಂಬುದು ಕೆಎಸ್ಸಾರ್ಟಿಸಿಯ ನಿಯಮ ಇದ್ದರೂ ಅದು ಇಲ್ಲಿ ಅನ್ವಯವಿಲ್ಲ ಎಂಬಂತಾಗಿದೆ.ಇತ್ತೀಚೆಗೆ ಪ್ರಾರಂಭವಾದ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಸಂಡೂರು ಡಿಪೋಗಳಲ್ಲಿ ರಾಜಹಂಸ, ಸ್ಲೀಪಿಂಗ್ ಕೋಚ್, ಅಮೋಘವರ್ಷ ಮುಂತಾದ ಐಷಾರಾಮಿ ಬಸ್‌ಗಳಿವೆ. ಇವೆಲ್ಲ ಡಿಪೋಗಳಿಗೆ ಹಿರಿಯಣ್ಣನಂತಿರುವ ಕೂಡ್ಲಿಗಿ ಡಿಪೋದಲ್ಲಿ ಮಾತ್ರ ಇದೂವರೆಗೂ ಒಂದೇ ಒಂದು ಐಶಾರಾಮಿ ಬಸ್‌ನ ಗಾಳಿ ಸೋಕಿಲ್ಲ.
ಕೂಡ್ಲಿಗಿಯಲ್ಲಿ ಡಿಪೋ ಇದ್ದರೂ ಬೆಳಿಗ್ಗೆ 6 ಗಂಟೆ ಒಳಗೆ ಮತ್ತು ಸಂಜೆ 6 ಗಂಟೆ ನಂತರ ಕೊಟ್ಟೂರು, ಬಳ್ಳಾರಿಗೆ ಹೋಗಲು ಬೇರೆ ಡಿಪೋಗಳ ಬಸ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಗಲೆಲ್ಲ ಖಾಲಿ ತಿರುಗುವ ಬಸ್‌ಗಳು ಸಂಜೆಯಾಗುತ್ತಿದ್ದಂತೆ ಮಾಯವಾಗಿಬಿಡುತ್ತವೆ. ಹೀಗೇಕೆ ಎಂದು ಪ್ರಶ್ನಿಸಿದರೆ ಸಂಜೆ ಸ್ಕೂಲ್ ಟ್ರಿಕ್ ಹೋಗಬೇಕೆಂಬ ನೆಪ ಹೇಳುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡರೆ ಇಲ್ಲಿನ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.ಕೂಡ್ಲಿಗಿ ಡಿಪೋದಿಂದ ಹುಬ್ಬಳ್ಳಿ- ಪಣಜಿ- ಮಣಿಪಾಲ- ಧರ್ಮಸ್ಥಳ- ಡೋಣಿಮಲೈ- ಬೆಂಗಳೂರಿಗೆ ಸಾರಿಗೆ ಮಾರ್ಗಗಳಿದ್ದವು. ಈಗ ಈ ಮಾರ್ಗದ ಬಸ್‌ಗಳನ್ನು ಪಕ್ಕದ ಡಿಪೋಗಳಿಗೆ ಹಸ್ತಾಂತರಿಸಲಾಗಿದೆ. ರಾತ್ರಿ 8 ಗಂಟೆಯ ನಂತರ ಕೂಡ್ಲಿಗಿ ಮಣಿಪಾಲ್ ಹಾಗೂ ರಾತ್ರಿ 7 ಗಂಟೆ ಮೇಲೆ ಕೊಟ್ಟೂರು- ಕೂಡ್ಲಿಗಿ- ಬೆಂಗಳೂರು ಬಸ್ ಬಿಟ್ಟರೆ ಉತ್ತಮ ಕಲೆಕ್ಷನ್ ಆಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಕೆ.ಎಸ್.ನಾಗರಾಜ.
ಕೂಡ್ಲಿಗಿ ಡಿಪೋದಲ್ಲಿ ಚಾಲಕ ನಿರ್ವಾಹಕರ ಕೊರತೆ ಇದೆ. ಕೋವಿಡ್ ನಂತರ ಕೆಲವು ಮಾರ್ಗಗಳು ಬೇರೆ ಡಿಪೋಗಳಿಗೆ ಹೋಗಿವೆ. ಈಗ ಸಿಬ್ಬಂದಿ ಕೊರತೆ ನೀಗಿದರೆ ಹಳೆ ರೂಟ್‌ಗಳನ್ನು ಪುನಃ ಕೂಡ್ಲಿಗಿ ಡಿಪೋದಿಂದ ಓಡಿಸುತ್ತೇವೆ ಎನ್ನುತ್ತಾರೆ ಕೂಡ್ಲಿಗಿ ಡಿಪೋ ವ್ಯವಸ್ಥಾಪಕ ಮರಿಲಿಂಗಪ್ಪ.