ಕೊಪ್ಪ ಹೋಬಳಿಯ 8 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಈಗಾಗಲೇ 33 ಕೋಟಿ ರು. ವೆಚ್ಚದಲ್ಲಿ ಕಾವೇರಿ ನೀರನ್ನು ಪ್ರತಿ ಮನೆಗಳಿಗೂ ಪೂರೈಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ಕುಡಿಯುವ ನೀರಿಗಾಗಿ ಯಾವುದೇ ಬೋರ್ ವೆಲ್ ಕೊರೆಯುವುದಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಕೊಪ್ಪ ಹೋಬಳಿಯ ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಜೊತೆಗೆ ಕೊನೇ ಭಾಗಕ್ಕೆ ಕೆಆರ್‌ಎಸ್ ಜಲಾಶಯದಿಂದ ನೀರು ಸರಾಗವಾಗಿ ಹರಿಯಲು 100 ಕೋಟಿ ರು. ವೆಚ್ಚದಲ್ಲಿ ನಾಲೆಗಳ ಆಧುನೀಕರಣ ಮಾಡಲಾಗುತ್ತಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಕೊಪ್ಪ ಹೋಬಳಿಯ ಅರಗಿನಮೆಳೆ ಉತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ, ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ಮುಂದಿನ ಒಂದು ವರ್ಷದೊಳಗೆ ಹೋಬಳಿಯ ಪ್ರತಿ ಮನೆಗಳಿಗೂ ಜಲ ಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದರು.

ಕೊಪ್ಪ ಹೋಬಳಿಯ 8 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಈಗಾಗಲೇ 33 ಕೋಟಿ ರು. ವೆಚ್ಚದಲ್ಲಿ ಕಾವೇರಿ ನೀರನ್ನು ಪ್ರತಿ ಮನೆಗಳಿಗೂ ಪೂರೈಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ಕುಡಿಯುವ ನೀರಿಗಾಗಿ ಯಾವುದೇ ಬೋರ್ ವೆಲ್ ಕೊರೆಯುವುದಿಲ್ಲ ಎಂದರು.

ಕಳೆದ 2013-18ನೇ ಸಾಲಿನಲ್ಲಿ ನಾನು ಶಾಸಕನಾಗಿದ್ದ ವೇಳೆ ಶೇ.80 ರಷ್ಟು ರಸ್ತೆಗಳ ಅಭಿವೃದ್ಧಿ ಮಾಡಿದ್ದೆ. ಆದರೆ, ಆ ನಂತರ ಅಧಿಕಾರಕ್ಕೆ ಬಂದ ಶಾಸಕರು ಶೇ.20ರಷ್ಟು ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಿಲ್ಲ‌ ಎಂದು ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ 2 ತಿಂಗಳ ಹಿಂದೆಯಷ್ಟೇ ಹೋಬಳಿ ವ್ಯಾಪ್ತಿ 150 ಕೋಟಿ ರು. ವೆಚ್ಚದಲ್ಲಿ ನೀರಾವರಿ, ರಸ್ತೆ, ವಸತಿ ನಿಲಯಗಳು, ಕುಡಿಯುವ ನೀರು ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ನಾಡ ಕಚೇರಿ ಅಭಿವೃದ್ಧಿ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಎರಡೂವರೇ ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು.

ತಗ್ಗಹಳ್ಳಿ ಗ್ರಾಪಂ ಅಧ್ಯಕ್ಷ ವಿಜಯ್ ಎಸ್.ಗೌಡ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪರ ಕಾರ್ಯಕ್ರಮ ನಡೆಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಡೇರಿ ಕಟ್ಟಡಕ್ಕೆ ಮನ್ಮುಲ್ ನಿರ್ದೇಶಕ ಹರೀಶ್ ಬಾಬು 9.5 ಲಕ್ಷ ರು. ನೀಡಿದ್ದಾರೆ. ಸಾಲದೇ ಇದ್ದರೆ ನಾನು ಸಹ ಅನುದಾನ ಕೊಡುತ್ತೇನೆ ಎಂದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಸಹಕಾರಿಯಾಗಿದೆ. ಶಿಬಿರದಿಂದ ಬಡ ಜನರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಇತ್ತಿಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಮತ್ತು ಕಿಡ್ನಿ ಸಮಸ್ಯೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡ ಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ, ನಗರ ಪ್ರದೇಶದ ಬಡ ಜನರು ಉಚಿತ ಆರೋಗ್ಯ ಆರೋಗ್ಯ ಶಿಬಿರಗಳ ಮೂಲಕವೇ ಚಿಕಿತ್ಸೆಗೆ ಒಳಪಡಿಸಿದಾಗ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿದೆ ಎಂದರು.

ಶಿಬಿರದಲ್ಲಿ ಮೂಳೆ, ಹೃದ್ರೋಗ, ದಂತ, ಮಕ್ಕಳ ತಜ್ಞರು, ಕಿವಿ, ಮೂಗು, ಗಂಟಲು, ಸ್ತ್ರೀರೋಗ, ಕಣ್ಣು, ಚರ್ಮ, ಪ್ರಸೂತಿ ತಜ್ಞರಿಂದ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ವಿಜಯ್ ಎಸ್.ಗೌಡ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಸಿ.ಜೋಗಿಗೌಡ, ತಗ್ಗಹಳ್ಳಿ ಚಂದ್ರು, ಮೂಡ್ಯ ಮಂಜು, ತಾಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು, ಮುಖಂಡರಾದ ಆನಂದ್, ಚಂದ್ರಶೇಖರ್, ಸ್ವಾಮಿ, ಶಂಕರ್, ಸುನೀಲ್, ಮಂಜು, ಶಿವರಾಂ, ಸಿದ್ದೇಗೌಡ, ಮಂಜೇಶ್, ಹೆಗ್ಗಡೆ, ರಾಜಶೇಖರ್ ಮತ್ತಿತರರು ಇದ್ದರು.