ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪ
ಪಟ್ಟಣದ ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಇದ್ದೀನಬ್ಬ ಒತ್ತಾಯಿಸಿದರು.ಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಸಭಾಂಗಣದಲ್ಲಿ ಅಧ್ಯಕ್ಷೆ ಗಾಯತ್ರಿ ವಸಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಗುಂಡಿಬಿದ್ದ ರಸ್ತೆ ದುರಸ್ತಿ ಕೂಡಲೇ ಕೈಗೆತ್ತಿಕೊಳ್ಳಬೇಕು. ಆಡಳಿತಾಧಿಕಾರಿಗಳ ಅವಧಿಯಲ್ಲಿ ನಡೆದ ಸಭೆ ಮತ್ತು ಅಭಿವೃದ್ಧಿ ಕಾಮಗಾರಿ ಪಟ್ಟಿ ಸಭೆಯಲ್ಲಿ ಮಂಡಿಸಬೇಕೆಂದು ಆಗ್ರಹಿಸಿದರು.
ಪಟ್ಟಣದ ಅಭಿವೃದ್ಧಿಗೆ ಅನುದಾನ ಕ್ರೋಡೀಕರಿಸಬೇಕಾದ ಅಗತ್ಯವಿದ್ದು, ಚುನಾಯಿತ 11 ಮಂದಿ ಸದಸ್ಯರು ಮತ್ತು ನಾಮನಿರ್ದೇಶಿತ 3 ಜನ ಸದಸ್ಯರು ಸೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಎಂ.ಎಲ್.ಸಿ. ಎಂ.ಕೆ.ಪ್ರಾಣೇಶ್ ಬಳಿ ಪಕ್ಷಾತೀತವಾಗಿ ನಿಯೋಗ ತೆರಳೋಣವೆಂದು ಸಲಹೆ ಮಾಡಿದರು. ಇದ್ದೀನಬ್ಬ ಮಾತಿಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.ಕಾಂಗ್ರೆಸ್ ಸದಸ್ಯ ವಿಜಯ್ ಕುಮಾರ್ ಮಾತನಾಡಿ, ಎಸ್.ಎಫ್.ಸಿ. ಯೋಜನೆ ಕುರಿತು ಈ ಹಿಂದೆ ಹಲವಾರು ಸಭೆಗಳು ನಡೆದಿದ್ದು, ಯಾವುದೇ ಫಲಾನುಭವಿಗಳಿಗೆ ಸೌಲಭ್ಯ ನೀಡಿಲ್ಲ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಪಂಗಡಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ ನೀಡಿಲ್ಲ. ಪ್ರತಿ ತುರ್ತು ಸಭೆಯಲ್ಲೂ ಈ ಬಗ್ಗೆ ನಿರ್ಣಯ ತೆಗೆದುಕೊಂಡರೂ ಸೌಲಭ್ಯ ಹಂಚಿಕೆಯಾಗದೆ ಇದಕ್ಕೆ ಸಂಬಂಧಿಸಿದ ಕಡತಗಳು ಕಪಾಟು ಸೇರುತ್ತವೆ. ಈ ಬಗ್ಗೆ ಈ ಹಿಂದೆ ನಡೆದ ನಿರ್ಣಯ ಮತ್ತು ವಿವರಗಳನ್ನು ಮಂಡಿಸಿದ ನಂತರ 2024-25ನೇ ಸಾಲಿನ ಎಸ್.ಎಫ್.ಸಿ. ಶೇ.5ರ ಯೋಜನೆ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಮುಂದಿನ 7 ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ವಿವರ ನೀಡುತ್ತೇವೆಂದು ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದರು.ಬಸ್‌ನಿಲ್ದಾಣ ಸಮೀಪದ 19 ಮಳಿಗೆ ದುರಸ್ತಿಗೊಳ್ಳದೆ ಖಾಲಿ ಉಳಿದಿದ್ದು, ಪ.ಪಂ.ಗೆ ಕೋಟ್ಯಂತರ ರು. ನಷ್ಟವುಂಟಾಗಿದೆ. ಕೂಡಲೇ ಅದನ್ನು ದುರಸ್ತಿಗೊಳಿಸಬೇಕೆಂದು ಸದಸ್ಯರು ಒತ್ತಾಯಿಸಿದರು.
ಪಪಂ ಯಲ್ಲಿ ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಕಮಿಷನ್ ವ್ಯವಹಾರಕ್ಕೆ ನಮ್ಮ ಸಹಕಾರವಿಲ್ಲ ಎಂದು ಸದಸ್ಯ ಶ್ರೀನಿವಾಸ್ ಶೆಟ್ಟಿ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ.ಪಂ. ಸದಸ್ಯ ರಶೀದ್ ಪ.ಪಂ. ಸಿಬ್ಬಂದಿ 30,000 ರು. ಕಾಮಗಾರಿ ಬಿಲ್‌ಗೆ 15,000 ದಷ್ಟು ಕಮಿಷನ್ ಕೇಳುತ್ತಾರೆಂಬ ಆರೋಪವಿದೆ ಎಂದಾಗ ಕಮಿಷನ್ ಕೇಳಿದ್ದಾರೆಂದು ತಿಳಿಸಿದರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆಂದು ಮುಖ್ಯಾಧಿಕಾರಿ ಚಂದ್ರಕಾಂತ್ ಹೇಳಿದರು. ಜಿಲ್ಲಾಧಿಕಾರಿಗಳಿಗೆ ನೀವು ಪತ್ರ ಬರೆಯಬೇಕಾಗಿಲ್ಲ ನಾವೇ ಬರೆಯುತ್ತೇವೆಂದು ಸದಸ್ಯರು ತಿಳಿಸಿದರು.ಸಭೆಯಲ್ಲಿ ಸದಸ್ಯರಾದ ರೇಖಾ ಪ್ರಕಾಶ್, ಸುಜಾತ, ಹೇಮಾವತಿ, ಮೈತ್ರಾ ಗಣೇಶ್, ನಾಮನಿರ್ದೇಶಿತ ಸದಸ್ಯರಾದ ಸೈಯದ್ ಮೊಹಮ್ಮದ್ ಗೌಸ್, ಕೆ.ಸಂದೇಶ್, ಸುಮಾ ಮುಂತಾದವರು ಇದ್ದರು.-