ಕೊಪ್ಪ ತಗ್ಗಿದ ಮಳೆಯ ಅಬ್ಬರ, ಮುಂದುವರೆದ ಹಾನಿ

| Published : Jul 21 2024, 01:23 AM IST

ಸಾರಾಂಶ

ಕೊಪ್ಪ ಸುತ್ತಮುತ್ತ ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆಯ ಅಬ್ಬರ ಕಡಿಮೆಯಾಗಿದ್ದು ಪುಷ್ಯ ಮಳೆ ಆರಂಭದಲ್ಲಿಯೇ ನಿಧಾನಗತಿಯಲ್ಲಿದ್ದರೂ ಮಳೆ ಹಾನಿ ಮುಂದುವರಿದಿದೆ.

ಮೂರು ದಿನಗಳಿಂದ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ।

ಕನ್ನಡಪ್ರಭ ವಾರ್ತೆ, ಕೊಪ್ಪ

ಕೊಪ್ಪ ಸುತ್ತಮುತ್ತ ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆಯ ಅಬ್ಬರ ಕಡಿಮೆಯಾಗಿದ್ದು ಪುಷ್ಯ ಮಳೆ ಆರಂಭದಲ್ಲಿಯೇ ನಿಧಾನಗತಿಯಲ್ಲಿದ್ದರೂ ಮಳೆ ಹಾನಿ ಮುಂದುವರಿದಿದೆ. ಶಾನುವಳ್ಳಿ ಗ್ರಾಪಂನ ಅಶೋಕ್ ಕರುವಾನೆ ಎನ್ನುವವರ ಮನೆಯ ಸಮೀಪ ಧರೆ ಕುಸಿಯುತ್ತಿದ್ದು ಮನೆಯಿಂದ ಕೇವಲ ೫ ಅಡಿ ಗಳಷ್ಟು ದೂರದವರೆಗೂ ಧರೆ ಕುಸಿದಿದೆ. ಇಂತಹ ಕುಸಿತ ಮುಂದುವರೆಯುವ ಸಾಧ್ಯತೆಯು ಹೆಚ್ಚಿದೆ. ಇನ್ನು ಸ್ವಲ್ಪ ಭಾಗ ಧರೆ ಕುಸಿತ ಕಂಡಲ್ಲಿ ಧರೆಯೊಂದಿಗೆ ಮನೆಯೂ ಸಂಪೂರ್ಣವಾಗಿ ಕುಸಿಯುವ ಆತಂಕ ಎದುರಾಗಿದೆ. ಬಸ್ರಿಕಟ್ಟೆ ಸಮೀಪ ಮೇಗೂರಿನ ವಾಲ್ಮೀಕಿ ಆಶ್ರಮ ವಸತಿ ಶಾಲೆ ಗೋಡೆ ಬಿರುಕು ಬಿಟ್ಟಿದ್ದು ಹಾನಿಯಾಗುವ ಸಂಭವವಿದೆ. ಕೊಪ್ಪ ಉದಯನಗರದ ಸರ್ಪುನ್ನಿಸಾರವರ ಮನೆ ಬಿರುಕು ಬಿಟ್ಟಿದ್ದು ಪೂರ್ತಿ ಜರಿಯುವ ಹಂತದಲ್ಲಿದೆ. ನರಸೀಪುರ ಗ್ರಾಮ, ನಿಲುಗುಳಿ ವಾಸಿ ಶಾಂತಮ್ಮ ದುಗ್ಗಪ್ಪ ನಾಯಕರವರ ಮನೆ ಮಳೆಯಿಂದ ಹಾನಿಯಾಗಿದೆ.

ಕೊಪ್ಪ ಕುಂಬ್ರಿ ಹುಬ್ಬುವಿನ, ಅಬ್ಬಿಗದ್ದೆ, ಅಂದಗಾರು, ಬಿಂತ್ರವಳ್ಳಿ ಗಡಿಕಲ್ಲು ವ್ಯಾಪ್ತಿಗಳಲ್ಲಿ ವಿದ್ಯುತ್ ಲೈನ್ ಮೇಲೆ ಮರಗಳು ಬಿದ್ದಿದ್ದು ಕಳೆದ ಮೂರು ದಿನಗಳಿಂದಲೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಶಾಲಾ ಮಕ್ಕಳು ಚಿಮಣಿ ದೀಪದ ಬೆಳಕಿನಲ್ಲಿ ಓದುವ ಪರಿಸ್ಥಿತಿ ಎದುರಾಗಿದೆ.

ಕೊಪ್ಪ ಮೆಸ್ಕಾಂ ವ್ಯಾಪ್ತಿಯಲ್ಲಿ ನೇಕ ಕಡೆ ವಿದ್ಯುತ್ ಪರಿವರ್ತಕಗಳು ರಸ್ತೆ ಬದಿಯಲ್ಲಿಯೇ ಕೈಗೆಟುಕುವಂತಿದೆ. ಈಗಾಗಲೇ ತುಂಡಾಗಿ ಬಿದ್ದ ವಿದ್ಯುತ್ ಲೈನ್ ಸ್ಪರ್ಶದಿಂದ ಅನೇಕ ಕಡೆ ವಿದ್ಯುತ್ ಅವಘಡ ಉಂಟಾಗಿದ್ದು ಸಿದ್ಧರಮಠದಲ್ಲಿ ತುಂಡಾಗಿ ಬಿದ್ದ ವೈರ್‌ನಿಂದ ವಿದ್ಯುತ್ ಹರಿದು 3 ದನಗಳು ಅಸುನೀಗಿದ್ದವು. ಕಳೆದ 2-3 ದಿನಗಳ ಹಿಂದೆ ಕೊಪ್ಪ ಪಟ್ಟಣದ ಕೆಳಗಿನಪೇಟೆಯ ಶಂಕರ್ ಮಿಲ್ ಬಳಿ ವಿದ್ಯುತ್ ಪರಿವರ್ತಕದಿಂದ ಹೊರಹೊಮ್ಮಿದ ವಿದ್ಯುತ್ ಸ್ಪರ್ಶದಿಂದ 3 ದನಗಳು ಸಾವನ್ನಪ್ಪಿದೆ. ಇನ್ನು ಅನೇಕ ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳು ಅಪಾಯದ ಅಂಚಿನಲ್ಲಿವೆ. ಶಾಲಾ ಮಕ್ಕಳು, ಸಾರ್ವಜನಿಕರು, ಓಡಾಡುವ ಸ್ಥಳದಲ್ಲೆ ವಿದ್ಯುತ್ ಪರಿವರ್ತಕಗಳಿದ್ದು ಇದರ ಸಮೀಪ ಹೋದಲ್ಲಿ ವಿದ್ಯುತ್ ಸ್ಪರ್ಶವಾಗುವ ಸಾಧ್ಯತೆಗಳಿವೆ. ಅವಘಡಗಳಿಗೂ ಮುನ್ನ ಮೆಸ್ಕಾಂನವರು ಎಚ್ಚೆತ್ತು ಪರಿವರ್ತಕಗಳನ್ನು ಬೇರೆಡೆಗೆ ಬದಲಾಯಿಸುವುದು ಅಥವಾ ಅವಘಡಗಳಾಗದಂತೆ ವಿದ್ಯುತ್ ಪರಿವರ್ತಕಗಳ ಸುತ್ತ ರಕ್ಷಣಾ ಬೇಲಿ ನಿರ್ಮಿಸುವ ಮೂಲಕ ಅವಘಡಗಳು ಸಂಭವಿಸದಂತೆ ಕ್ರಮ ವಹಿಸಬೇಕು. - ಶಫಿ ಅಹಮ್ಮದ್, ಅಧ್ಯಕ್ಷರು, ಅಲ್ ಮುಸ್ತ ಆನ್ ಟ್ರಸ್ಟ್, ಕೊಪ್ಪ