ಕಾರ್ಖಾನೆ ಸ್ಥಾಪನೆ ವಿರೋಧಿಸಿ 24ರಂದು ಕೊಪ್ಪಳ ಬಂದ್‌

| Published : Feb 16 2025, 01:47 AM IST

ಕಾರ್ಖಾನೆ ಸ್ಥಾಪನೆ ವಿರೋಧಿಸಿ 24ರಂದು ಕೊಪ್ಪಳ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಎಂಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಫೆ. 24ರಂದು ಕೊಪ್ಪಳ ಬಂದ್ ಮಾಡಲು ನಿರ್ಧರಿಸಲಾಗಿದೆ.

-ಬಂದ್ ಬೆಂಬಲಿಸಿ ಶಾಲಾ-ಕಾಲೇಜು ಬಂದ್ ಮಾಡಲು ಸಂಘ ನಿರ್ಧಾರ

-ಬಂದ್ ಮಾಡಿ, ಶಾಂತಿಯುತ ಪ್ರತಿಭಟನೆ ಮಾಡಲು ತೀರ್ಮಾನ

-ಈ ಕಾರ್ಖಾನೆ ತಲೆ ಎತ್ತಿದರೇ ನಾವು ಇರಲು ಸಾಧ್ಯವಿಲ್ಲ – ಹಲವರ ಆಕ್ರೋಶ

-ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಎಂಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಫೆ. 24ರಂದು ಕೊಪ್ಪಳ ಬಂದ್ ಮಾಡಲು ನಿರ್ಧರಿಸಲಾಗಿದೆ.

ಶನಿವಾರ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ನಡೆದ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಳಿನಿಂದ ಈ ಕುರಿತು ನಿರ್ಧರಿಸಲಾಯಿತು ಮತ್ತು ನಿರಂತರವಾಗಿ ಹೋರಾಟ ಮಾಡುವುದಕ್ಕೂ ಸಹ ತೀರ್ಮಾನಿಸಲಾಯಿತು.

ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಅನೇಕ ಸಂಘಟನೆಗಳ ಮುಖಂಡರು, ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸಹ ಹೇಳಿದ್ದು ಒಂದೇ, ಎಂಎಸ್‌ಪಿಎಲ್ ಹಾಗೂ ಬಿಎಸ್‌ಪಿಎಲ್ ಕಾರ್ಖಾನೆಯನ್ನು ತೊಲಗಿಸುವವರೆಗೂ ಹೋರಾಟ ಮಾಡೋಣ.

ಫೆ. 24ರಂದು ಕೊಪ್ಪಳ ಬಂದ್‌ನ್ನು ಸ್ವಯ ಪ್ರೇರಣೆಯಿಂದ ಮಾಡಲು ಸೇರಿದ್ದ ಎಲ್ಲರೂ ಸಹ ಒಕ್ಕೊರಳಿನಿಂದ ಹೇಳಿದರು. ಇದೊಂದು ದೇಶವೇ ಗಮನ ಸೆಳೆಯುವಂತಹ ಹೋರಾಟವಾಗಬೇಕು ಎಂದು ತೀರ್ಮಾನಿಸಲಾಯಿತು.

ಬಂದ್ ಗೆ ವೈದ್ಯ ಸಂಘದವರು, ಶಾಲಾ ಶಿಕ್ಷಣ ಸಂಸ್ಥೆಯವರು ಸಹ ಬೆಂಬಲಿಸಿದ್ದು, ಅಂದು ಶಾಲಾ-ಕಾಲೇಜು, ಆಸ್ಪತ್ರೆಯನ್ನು ಬಂದ್ ಮಾಡಿ ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ.

ಹಾಗೆ, ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದರೆ ಎಲ್ಲ ಸಂಘಟನೆಗಳ ಮುಖಂಡರು ಬಂದ್ ಯಶಸ್ವಿ ಮಾಡುವ ಮೂಲಕ ಮುಂದಿನ ಹೋರಾಟ ರೂಪಿಸೋಣ ಎಂದರು.

ಬಂದ್ ಬೆಂಬಲಿಸಿ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳನ್ನು ಸಹ ಆಹ್ವಾನ ಮಾಡಲು ತೀರ್ಮಾನ ಮಾಡಲಾಯಿತು.

ರಾಷ್ಟ್ರೀಯ ಹಸಿರುಪೀಠದ ಮೊರೆ:

ಜನವಸತಿ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಖಾನೆ ಪ್ರಾರಂಭಿಸುವುದಕ್ಕೆ ಅವಕಾಶವೇ ಇಲ್ಲ. ಇದು ಅಕ್ಷಮ್ಯ ಅಪರಾಧವಾಗಿದ್ದು, ಕಾನೂನು ಪ್ರಕಾರ ಇದಕ್ಕೆ ಅವಕಾಶವೇ ಇಲ್ಲ. ಹೀಗಾಗಿ, ಸಮಸ್ತ ದಾಖಲೆಗಳೊಂದಿಗೆ ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗುವುದಕ್ಕೆ ಕಾನೂನು ಸಲಹೆಯನ್ನು ಮತ್ತು ಅದರ ಖರ್ಚು ವೆಚ್ಚವನ್ನು ಸಂಪೂರ್ಣವಾಗಿ ವಕೀಲರ ಸಂಘದ ವತಿಯಿಂದಲೇ ನಿಭಾಯಿಸುವುದಾಗಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಘೋಷಣೆ ಮಾಡಿದ್ದಾರೆ. ಜೊತೆಗೆ ಫೆ. 24ರಂದು ನಡೆಯುವ ಬಂದ್ ಹಾಗೂ ಪ್ರತಿಭಟನೆಯಲ್ಲಿ ವಕೀಲರ ಸಂಘದ ವತಿಯಿಂದ ಭಾಗವಹಿಸುವುದಾಗಿ ಸಭೆಗೆ ಮಾಹಿತಿ ನೀಡಿದರು.

ಅಂದಾನಪ್ಪ ಅಂಗಡಿ, ಶರಣಪ್ಪ ಸಜ್ಜನ, ವೀರೇಶ ಮಹಾಂತಯ್ಯನಮಠ, ಕೆ.ಎಂ. ಸಯ್ಯದ್, ಡಾ. ಬಸವರಾಜ ಕ್ಯಾವಟರ್, ಚಾಮರಾಜ ಸವಡಿ, ರವೀಂದ್ರ ವಿ.ಕೆ., ಹನುಮಂತರಾವ್ ಕೆಂಪಳ್ಳಿ, ಸಂಧ್ಯಾ ಮಾದಿನೂರು, ಪೀರಾಹುಸೇನ ಹೊಸಳ್ಳಿ, ಎಸ್.ಕೆ. ವಕ್ಕಳದ, ಚಂದ್ರು ಕವಲೂರು, ಜ್ಯೋತಿ ಗೊಂಡಬಾಳ, ಮಹಾಲಕ್ಷ್ಮಿ ಕಂದಾರಿ, ಕೀರ್ತಿ ಪಾಟೀಲ್, ಮಂಜುನಾಥ ಹಳ್ಳಿಕೇರಿ, ಮಾರ್ಕಂಡಯ್ಯ ಹಿರೇಮಠ, ಸೇರಿದಂತೆ ಅನೇಕರು ಮಾತನಾಡಿ ಬೆಂಬಲಿಸಿದರು. ಸಂಜಯ ಕೋತ್ಬಾಳ, ಸಿದ್ದಣ್ಣ ನಾಲ್ವಡ, ಅಪ್ಪಣ್ಣ ಪದಕಿ, ಕಿಶೋರಿ ಬೂದನೂರು, ಸೋಮನಗೌಡ ಪಾಟೀಲ್, ಪ್ರಹ್ಲಾದ ಅಗಳಿ, ಗಿರೀಶ ಕಣವಿ, ಬಸವರಾಜ ಬಳ್ಳೊಳ್ಳಿ, ವಿಪಿನ್ ತಾಲೇಡ್, ಈಶಪ್ಪ ಮಾದಿನೂರು, ರಾಜು ಬಾಕಳೆ, ಮಂಜುನಾಥ ಅಂಗಡಿ, ಸುಧಾ ಶೆಟ್ಟರ್, ನಿವೇದಿತಾ ಸಂಕ್ಲಾಪುರ, ಅನುಸೂಯಾ ಮಟ್ಟಿ, ಡಾ. ಶ್ರೀನಿವಾಸ ಹ್ಯಾಟಿ, ಮಮತಾ ಶೆಟ್ಟರ್, ರಮೇಶ ತುಪ್ಪದ, ಹುಲಗಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು. ರಕ್ಷಣಾ ವೇದಿಕೆ ಮುಖಂಡರು, ಕನ್ನಡಪರ ಸಂಘಟನೆಗಳ ಮುಖಂಡರು, ವ್ಯಾಪರಸ್ಥರ ಸಂಘಟನೆಗಳು, ಫೋಟೋ ಗ್ರಾಫರ್ ಸಂಘ, ಮಹಿಳಾ ಸಂಘಟನೆಗಳ, ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಸೋಮನಗೌಡ ವಗರನಾಳ ಪ್ರಾರ್ಥಿಸಿದರು. ಶಿವಕುಮಾರ ಕುಕನೂರು ಸ್ವಾಗತಿಸಿ, ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ದೇಶಪಾಂಡೆ ನಿರೂಪಿಸಿದರು.

ಮನಕಲುಕಿದ ವೀಡಿಯೋ

ಕಾರ್ಖಾನೆಗಳಿಂದಾದ ಗೋಳನ್ನೊಮ್ಮೆ ನೋಡಿ ಎನ್ನುವ ವೀಡಿಯೋ ನೆರೆದಿದ್ದವರ ಮನಕಲುಕಿತು. ಈಗಾಗಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳ ತಾಲೂಕಿನ ಹಿರೇಬಗನಾಳ, ಹಾಲವರ್ತಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅನುಭವಿಸುತ್ತಿರುವ ಯಾತನೆಯನ್ನು ವಿಟಿಯಲ್ಲಿ ನೋಡಿ ಗಾಬರಿಯಾದರು.