ಕೈಗಾರಿಕಾ ಮಾಲಿನ್ಯ ನಿಯಂತ್ರಣ, ಜನರ ಆರೋಗ್ಯ ರಕ್ಷಣೆ ಹಾಗೂ ಬಲ್ದೋಟ ಕೈಗಾರಿಕಾ ವಿಸ್ತರಣೆ ವಿರೋಧಿಸಿ ಅ. 31ರಂದು ಕೊಪ್ಪಳ ಮತ್ತು ಭಾಗ್ಯನಗರರ ಬಂದ್‌ಗೆ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಕೊಪ್ಪಳ: ಕೈಗಾರಿಕಾ ಮಾಲಿನ್ಯ ನಿಯಂತ್ರಣ, ಜನರ ಆರೋಗ್ಯ ರಕ್ಷಣೆ ಹಾಗೂ ಬಲ್ದೋಟ ಕೈಗಾರಿಕಾ ವಿಸ್ತರಣೆ ವಿರೋಧಿಸಿ ಅ. 31ರಂದು ಕೊಪ್ಪಳ ಮತ್ತು ಭಾಗ್ಯನಗರರ ಬಂದ್‌ಗೆ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ವಿವಿಧ ಮಠಾಧೀಶರು, ರೈತ, ಕಾರ್ಮಿಕ, ವ್ಯಾಪಾರ, ಕನ್ನಡಪರ ಹಾಗೂ ಸಾಮಾಜಿಕ ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಿವೆ. ಶಾಲಾ-ಕಾಲೇಜುಗಳ ಸಂಸ್ಥೆಗಳು ಕೂಡ ಬೆಂಬಲ ಸೂಚಿಸಿದ್ದು, ಹಲವು ಸ್ವಾಮೀಜಿಗಳು, ಜನಪ್ರತಿನಿಧಿಗಳು, ಸಾಹಿತಿಗಳು ಮತ್ತು ಪರಿಸರ ಹೋರಾಟಗಾರರು ಜನಾಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಠಾಧೀಶರು, ಗಣ್ಯರ ಸಾಥ್: ಹೋರಾಟಕ್ಕೆ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಬೆಂಬಲ ಸೂಚಿಸಿದ್ದಾರೆ. ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ವಿವಿಧ ರೈತ ಸಂಘಟನೆಗಳ ಮುಖಂಡರು, ಸಾಹಿತಿಗಳು, ಪರಿಸರ ಹೋರಾಟಗಾರರು, ವ್ಯಾಪಾರಸ್ಥರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಜಿಲ್ಲೆಯ 22 ಬಾಧಿತ ಗ್ರಾಮಗಳ ನಾಗರಿಕರು, ಯುವಕರು, ಮಹಿಳೆಯರು, ರೈತರು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಂದ್‌ಗೆ ಸ್ವಯಂಪ್ರೇರಿತವಾಗಿ ಬೆಂಬಲ ನೀಡುವಂತೆ ವರ್ತಕರು, ವ್ಯಾಪಾರಸ್ಥರು, ಸಾರಿಗೆ ವಲಯದವರು ಹಾಗೂ ಸಾರ್ವಜನಿಕರಲ್ಲಿ ಸಂಘಟಕರು ಮನವಿ ಮಾಡಿದ್ದಾರೆ.

ಗವಿಮಠದಿಂದ ಜನಾಂದೋಲನ: ಹೋರಾಟದಲ್ಲಿ ಭಾಗವಹಿಸುವವರಿಗೆ ಬೆಳಗ್ಗೆ 7.30ರಿಂದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಉಪಾಹಾರದ ಬಳಿಕ ಮಠದಿಂದ ಮೆರವಣಿಗೆ ಆರಂಭಿಸಿ, ಬೃಹತ್ ಜನಾಂದೋಲನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಲ್ದೋಟ ಕೈಗಾರಿಕಾ ವಿಸ್ತರಣೆಯನ್ನು ತಡೆಹಿಡಿಯಬೇಕು. ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡಬಾರದು. ಜಿಲ್ಲೆಯ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯ ನಿಯಂತ್ರಿಸಬೇಕು. 22 ಬಾಧಿತ ಗ್ರಾಮಗಳ ಜನರ ಆರೋಗ್ಯದ ಕುರಿತು ಸ್ವತಂತ್ರ ಸಮೀಕ್ಷೆ ನಡೆಸಬೇಕು. ಹೊಸ ಕೈಗಾರಿಕೆಗಳ ವಿಸ್ತರಣೆಗೆ ಮುನ್ನ ಸಮಗ್ರ ಪರಿಸರ ಮತ್ತು ಆರೋಗ್ಯ ಅಧ್ಯಯನ ನಡೆಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.

ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧವಲ್ಲ. ಕೊಪ್ಪಳದ ಭವಿಷ್ಯ, ಮಕ್ಕಳ ಆರೋಗ್ಯ, ಶುದ್ಧ ಗಾಳಿ, ನೀರು ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ನಡೆಯುತ್ತಿದೆ ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.

''ಬಲ್ದೋಟ ತೊಲಗಿಸಿ, ಕೊಪ್ಪಳ ಉಳಿಸಿ'', ''ಮಾಲಿನ್ಯ ಮುಕ್ತ ಕೊಪ್ಪಳ, ಆರೋಗ್ಯವಂತ ಕೊಪ್ಪಳ'' ಎಂಬ ಘೋಷಣೆಗಳೊಂದಿಗೆ ನಡೆಯುತ್ತಿರುವ ಈ ಜನಾಂದೋಲನ ಸರ್ಕಾರದ ಗಮನ ಸೆಳೆಯುವ ನಿರೀಕ್ಷೆಯಿದೆ. ಕೈಗಾರಿಕಾ ಅಭಿವೃದ್ಧಿಯ ಜತೆಗೆ ಪರಿಸರ ಮತ್ತು ಜನರ ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂಬುದು ಹೋರಾಟದ ಆಶಯವಾಗಿದೆ.

ಬಂದ್‌ನಲ್ಲಿ ಭಾಗವಹಿಸುವ ಸ್ವಾಮೀಜಿಗಳು: ಹೋರಾಟ ಸಮಿತಿ ಕರೆ ನೀಡಿರುವ ಬಂದ್‌ನಲ್ಲಿ ಗದಗ-ಡಂಬಳ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಶ್ರೀ ಕೋರೇಶ್ವರ ಮಹಾಸ್ವಾಮಿಗಳು, ಶ್ರೀ ಗುರುಲಿಂಗತೇಶ್ವರ ಸ್ವಾಮಿಗಳು, ಅಟವಂಡಿದ ಶ್ರೀ ಪ.ಬ. ಮರುಳಸಿದ್ಧಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ.

ಜನಪ್ರತಿನಿಧಿಗಳು ಭಾಗವಹಿಸುವರೇ?: ಕಾರ್ಖಾನೆಗಳ ವಿರುದ್ಧ ಹಮ್ಮಿಕೊಂಡಿರುವ ಹೋರಾಟದಲ್ಲಿ ಜನಪ್ರತಿನಿಧಿಗಳು ಯಾರ್ಯಾರು ಭಾಗವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಧರಣಿ ಸ್ಥಳಕ್ಕೆ ಬಂದು ಬೆಂಬಲಿಸಿ ಹೋದವರಾದರೂ ಬರುತ್ತಾರೆಯೇ ಎನ್ನುವುದು ಸದ್ಯದ ಕುತೂಹಲ.

ವ್ಯಾಪಕ ಬೆಂಬಲ: ಕೊಪ್ಪಳ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಕಾರ್ಖಾನೆಗಳ ವಿರುದ್ಧ ಜನಾಂದೋಲನ ರೂಪಿತವಾಗುತ್ತಿದೆ. ಜನಪ್ರತಿನಿಧಿಗಳನ್ನು ಅಹ್ವಾನಿಸಿದ್ದು, ಅವರು ಸಹ ಭಾಗವಹಿಸುವರು ಎಂದು ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.