ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳನ್ನು ಸಹ ಹೋರಾಟಕ್ಕೆ ಅಹ್ವಾನಿಸಲಾಗಿದ್ದು, ನಾನು ಶ್ರೀ ಗವಿಸಿದ್ದನ ಅಪ್ಪಣೆಯಾದಾಗ ಹೋರಾಟಕ್ಕೆ ಬರುತ್ತೇನೆ

ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ವಿಸ್ತರಣೆ ಪರವಾನಗಿ ರದ್ಧು ಮಾಡುವಂತೆ ಆಗ್ರಹಿಸಿ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ವರ್ಷವಾಗಿರುವ ಹಿನ್ನೆಲೆಯಲ್ಲಿ ಫೆ.24 ರಂದು ಕೊಪ್ಪಳ ಮತ್ತು ಭಾಗ್ಯನಗರ ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ.

ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಈಗಾಗಲೇ ಕಳೆದ 116 ದಿನಗಳಿಂದ ಧರಣಿ ಸತ್ಯಾಗ್ರಹ ಕೊಪ್ಪಳ ನಗರಸಭೆ ಎದುರು ನಡೆಸುತ್ತಿದ್ದಾರೆ. ಮೊದಲ ಹೋರಾಟಕ್ಕೆ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹಲವಾರು ಸಂಘಟನೆ, ಜನಪ್ರತಿನಿಧಿ, ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಕೊಪ್ಪಳ,ಭಾಗ್ಯನಗರ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳನ್ನು ಸಹ ಹೋರಾಟಕ್ಕೆ ಅಹ್ವಾನಿಸಲಾಗಿದ್ದು, ನಾನು ಶ್ರೀ ಗವಿಸಿದ್ದನ ಅಪ್ಪಣೆಯಾದಾಗ ಹೋರಾಟಕ್ಕೆ ಬರುತ್ತೇನೆ, ಈಗ ನನ್ನ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.ಅಷ್ಟೇ ಸಾವಿರಾರು ಸಂಖ್ಯೆಯಲ್ಲಿ ಸೇರುವ ಹೋರಾಟಗಾರರಿಗೆ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಗವಿಮಠದಿಂದಲೇ ಮಾಡಿಸುವುದಾಗಿ ಹೇಳಿದ್ದಾರೆ ಎಂದು ಹೋರಾಟಗಾರ ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ.

ಪಕ್ಷಾತೀತ ಹೋರಾಟ:ಕೊಪ್ಪಳ ಬಚಾವೋ ಆಂದೋಲನ ಸಮಿತಿ, ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದರೂ ಪಕ್ಷಾತೀತವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಬಹುತೇಕ ನಾಯಕರು ಬೆಂಬಲ ನೀಡಿದ್ದಾರೆ.

ಶಾಸಕರು, ಸಂಸದರು ಸೇರಿದಂತೆ ಅನೇಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ ನಡೆದಾಗಲೂ ಶಾಸಕರು,ಸಂಸದರು ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಇದರ ಜತೆಗೆ ಕೊಪ್ಪಳ ಮತ್ತು ಭಾಗ್ಯನಗರ ಎಲ್ಲ ಸಮಾಜದ ಸಂಘಟನೆಗಳನ್ನು ಅಹ್ವಾನಿಸಲಾಗಿದ್ದು, ಎಲ್ಲವೂ ಸ್ವಯಂ ಪ್ರೇರಿತವಾಗಿ ಭಾಗವಹಿಸುವ ಸಾಧ್ಯತೆ ಇದೆ.

ಏನಿರುತ್ತೆ : ಹಾಲು,ಪೇಪರ್,ಆಸ್ಪತ್ರೆ,ಪರೀಕ್ಷೆ ಇರುತ್ತವೆ.

ಏನು ಇರಲ್ಲ: ಅಂಗಡಿ, ಮುಂಗಟ್ಟು, ಖಾಸಗಿ ಶಾಲೆ, ಬಸ್ ಸೇವೆ, ಆಟೋ ಸೇವೆ, ಪೆಟ್ರೋಲ್ ಬಂಕ್, ಹೋಟೆಲ್, ಖಾನಾವಳಿ ಇರುವುದಿಲ್ಲ

ಕಳೆದ ವರ್ಷ ಏನಾಗಿತ್ತು

ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಕೊಪ್ಪಳ,ಭಾಗ್ಯನಗರ ಬಂದ್ ಮಾಡಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ದೊಡ್ಡನಗೌಡ ಪಾಟೀಲ್, ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಜಿಲ್ಲೆಯ ಅನೇಕ ಶಾಸಕರು,ಮಾಜಿ ಶಾಸಕರು ಮಾತನಾಡಿದ್ದರು.

ಶಾಸಕರು, ಸಚಿವರು ನೀವು ಈ ಬಿಎಸ್ ಕಾರ್ಖಾನೆಯ ಸ್ಥಾಪನೆ ಆದೇಶ ರದ್ಧು ಮಾಡಿಕೊಂಡೇ ಕೊಪ್ಪಳಕ್ಕೆ ಬರಬೇಕು. ನಾವು ಯಾವ ಹೋರಾಟ ಮಾಡುವುದಿಲ್ಲ ಎಂದು ತಾಕಿತು ಮಾಡಿದ್ದರು. ಅದರಂತೆ ವಾರದಲ್ಲಿಯೇ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಬೆಂಗಳೂರಿಗೆ ತೆರಳಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಟ್ಟು ಹಿಡಿದಿದ್ದರು. ಇದರಿಂದ ಸಿಎಂ ಸಿದ್ದರಾಮಯ್ಯ ತಕ್ಷಣ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಕಾಮಗಾರಿ ಸ್ಥಗಿತ ಮಾಡುವಂತೆ ಮೌಖಿಕ ಆದೇಶ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಿಎಸ್ ಪಿಎಲ್ ಕಾರ್ಖಾನೆಯವರು ತಮ್ಮ ಕಾರ್ಯ ಮಾಡುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಸಚಿವರು, ಶಾಸಕರು ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಜಿಲ್ಲಾಧಿಕಾರಿಗಳ ಮೂಲಕ ತಾತ್ಕಾಲಿಕ ತಡೆಯ ಲಿಖಿತ ಆದೇಶ ಮಾಡಿದ್ದಾರೆ. ಅಂದಿನಿಂದ ಯಾವುದೇ ಬೆಳವಣಿಗೆ ಆಗಿಲ್ಲ.ಆದರೆ, ಕಾರ್ಖಾನೆ ಸ್ಥಾಪನೆ ರದ್ಧು ಮಾಡಿರುವ ಆದೇಶ ಸರ್ಕಾರ ಇದುವರೆಗೂ ಮಾಡಿಲ್ಲ. ಇದನ್ನು ಮಾಡಿ ಎಂದು ಈಗ ಮತ್ತೊಮ್ಮೆ ಬೃಹತ್ ಹೋರಾಟ ಮಾಡಲು ನಿರ್ಧರಿಸಲಾಗಿದೆ.

ಹೋರಾಟದಲ್ಲಿ ಶಾಸಕರು, ಸಂಸದರು, ಗದುಗಿನ ಶ್ರೀತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಕಬೀರನಾನಂದ ಸ್ವಾಮೀಜಿಗಳು, ಪರಿಸರಕ್ಕಾಗಿ ನಾವು ಸಂಘಟನೆಯ ಎ.ಟಿ.ರಾಮಸ್ವಾಮಿ ಭಾಗಿಯಾಗುತ್ತಿದ್ದಾರೆ.

ಬಂದ್ ಗೆ ಪಕ್ಷಾತೀತವಾಗಿ ನಿರೀಕ್ಷೆ ಮೀರಿ ಜನ ಬೆಂಬಲ ದೊರೆತಿದ್ದು, ಬೃಹತ್ ಮೆರವಣಿಗೆ ಮಾಡಲಾಗುತ್ತದೆ.ಕೊಪ್ಪಳ ಮತ್ತು ಭಾಗ್ಯನಗರವೂ ಬಂದ್ ಆಗಲಿದೆ ಎಂದು ಹೋರಾಟಗಾರ ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ.

ಜನಪರ ಮತ್ತು ಜೀವ ಪರ ಹೋರಾಟವಾಗಿದ್ದು, ಬಿಎಸ್ ಪಿಎಲ್ ಕಾರ್ಖಾನೆ ಪ್ರಾರಂಭವಾದರೇ ಕೊಪ್ಪಳ ಸ್ಥಳಾಂತರ ಮಾಡಬೇಕಾಗುತ್ತದೆ. ಸಮಸ್ಯೆ ಅಷ್ಟೊಂದು ಗಂಭೀರವಿದೆ. ಹೀಗಾಗಿ, ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದ್ದೇವೆ ಎಂದು ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.