ಬಲ್ಡೋಟ ಕಾರ್ಖಾನೆ ಸ್ಥಳಾಂತರ, 22 ಗ್ರಾಮಗಳ ಮಾಲಿನ್ಯ ನಿಯಂತ್ರಣ ಹಾಗೂ ಬಸಾಪುರ ಕೆರೆಯನ್ನು ಜನ-ಜಾನುವಾರುಗಳ ನೀರಿನ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಶನಿವಾರ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅ. 31ರಂದು ಕೊಪ್ಪಳ–ಭಾಗ್ಯನಗರದಲ್ಲಿ 24 ಗಂಟೆಗಳ ಬಂದ್ ಆಚರಿಸಲು ನಿರ್ಧರಿಸಲಾಗಿದೆ.
ಕೊಪ್ಪಳ: ಬಲ್ಡೋಟ ಕಾರ್ಖಾನೆ ಸ್ಥಳಾಂತರ, 22 ಗ್ರಾಮಗಳ ಮಾಲಿನ್ಯ ನಿಯಂತ್ರಣ ಹಾಗೂ ಬಸಾಪುರ ಕೆರೆಯನ್ನು ಜನ-ಜಾನುವಾರುಗಳ ನೀರಿನ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಶನಿವಾರ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅ. 31ರಂದು ಕೊಪ್ಪಳ–ಭಾಗ್ಯನಗರದಲ್ಲಿ 24 ಗಂಟೆಗಳ ಬಂದ್ ಆಚರಿಸಲು ನಿರ್ಧರಿಸಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕರೆದಿದ್ದ ಶಾಂತಿ, ಸುವ್ಯವಸ್ಥೆ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಮುಖಂಡರು ಪಾಲ್ಗೊಂಡಿದ್ದರು. ನ. 1ರಂದು ಕನ್ನಡ ರಾಜ್ಯೋತ್ಸವ ಇರುವುದರಿಂದ ಅಂದು ಬಂದ್ ಆಚರಿಸದೆ, ಅ. 31ರಂದು ಮಾತ್ರ 24 ಗಂಟೆಗಳ ಬಂದ್ ನಡೆಸುವ ಪ್ರಸ್ತಾವಕ್ಕೆ ವೇದಿಕೆ ಸಮ್ಮತಿಸಿದೆ. ಈ ಹಿಂದೆ 48 ಗಂಟೆಗಳ ಬಂದ್ ಮಾಡುವುದಾಗಿ ಹೋರಾಟ ಸಮಿತಿ ಘೋಷಣೆ ಮಾಡಿತ್ತು.ಜೀವ ಉಳಿಸಿಕೊಳ್ಳಲು ಹೋರಾಟ ಅಗತ್ಯ: ಕೊಪ್ಪಳ–ಭಾಗ್ಯನಗರದ ಸುಮಾರು 1.5 ಲಕ್ಷ ಜನರು ಹಾಗೂ 22 ಬಾಧಿತ ಗ್ರಾಮಗಳ 50 ಸಾವಿರ ಜನರು ತಮ್ಮ ಜೀವ ಉಳಿಸಿಕೊಳ್ಳಲು ಹೋರಾಟಕ್ಕೆ ಮುಂದಾಗಬೇಕು ಎಂದು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಬಂದ್ ಕುರಿತು ಜಾಗೃತಿ ಮೂಡಿಸುವ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅ. 31ರಂದು ಶ್ರೀಗವಿಮಠದಿಂದ ಸಾರ್ವಜನಿಕ ಮೆರವಣಿಗೆ ಆರಂಭವಾಗಿ, ನಗರಸಭೆ ಎದುರು ಬಹಿರಂಗ ಸಭೆ ನಡೆಯಲಿದೆ. ನಾಗರಿಕರು, ವ್ಯಾಪಾರಸ್ಥರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ವಿವಿಧ ಸಂಘಟನೆಗಳು, ಧಾರ್ಮಿಕ ಮುಖಂಡರು, ಸಮಾಜದ ಪ್ರಮುಖರು, ಆಟೋ ಚಾಲಕರು ಹಾಗೂ ಸಾರಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.354ನೇ ದಿನದ ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ್, ಮಲ್ಲಿಕಾರ್ಜುನ ಬಿ. ಗೋನಾಳ, ಡಿ.ಎಂ. ಬಡಿಗೇರ, ಮಂಜುನಾಥ ಜಿ. ಗೊಂಡಬಾಳ, ಮೂಕಪ್ಪ ಮೇಸ್ತ್ರಿ, ರವಿ ಕಾಂತನವರ, ರಾಜಶೇಖರ ಏಳುಭಾವಿ, ಶಂಭುಲಿಂಗಪ್ಪ ಹರಗೇರಿ ಉಪಸ್ಥಿತರಿದ್ದರು.