ಕೊಪ್ಪಳ ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿ ನಮ್ಮೆಲ್ಲರ ಪ್ರಮುಖ ಹೊಣೆಯಾಗಿದೆ. ಕೊಪ್ಪಳ ಮತ್ತು ಭಾಗ್ಯನಗರಕ್ಕೆ ಕಳೆದ 13 ವರ್ಷಗಳಲ್ಲಿ ಅನೇಕ ದೊಡ್ಡ ಯೋಜನೆ ಜಾರಿ ಮಾಡಿಸಿ ಅಭಿವೃದ್ಧಿ ಪಡಿಸಿದ್ದೇವೆ.

ಕೊಪ್ಪಳ: ಕೊಪ್ಪಳ-ಭಾಗ್ಯನಗರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ₹5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಭಾಗ್ಯನಗರ-ಕಿನ್ನಾಳ ಕ್ರಾಸ್ ಬಳಿ ₹5 ಕೋಟಿ ವೆಚ್ಚದಲ್ಲಿ ಅಶೋಕ್ ಸರ್ಕಲ್‌ನ ಐಬಿ ಹತ್ತಿರ ಬರುವ ಅಂಡರ್ ಪಾಸ್ ನಿಂದ ಭಾಗ್ಯನಗರ -ಕಿನ್ನಾಳ ಕ್ರಾಸ್ ವರೆಗಿನ ಎರಡು ಬದಿ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಕೊಪ್ಪಳ ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿ ನಮ್ಮೆಲ್ಲರ ಪ್ರಮುಖ ಹೊಣೆಯಾಗಿದೆ. ಕೊಪ್ಪಳ ಮತ್ತು ಭಾಗ್ಯನಗರಕ್ಕೆ ಕಳೆದ 13 ವರ್ಷಗಳಲ್ಲಿ ಅನೇಕ ದೊಡ್ಡ ಯೋಜನೆ ಜಾರಿ ಮಾಡಿಸಿ ಅಭಿವೃದ್ಧಿ ಪಡಿಸಿದ್ದೇವೆ. ವಿಶೇಷವಾಗಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು ಹಳ್ಳಿಗಳಿಂದ ನಗರಕ್ಕೆ ಸಂಪರ್ಕಿಸುವ ಎಲ್ಲ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದೇವೆ. ಈ ಕೊಪ್ಪಳ -ಭಾಗ್ಯನಗರದ ರಸ್ತೆ ಅಭಿವೃದ್ಧಿ ಹಲವು ವರ್ಷಗಳ ಬೇಡಿಕೆ ಆಗಿತ್ತು ಇಂದು ಈ ರಸ್ತೆಗೆ ₹5 ಕೋಟಿ ಅನುದಾನ ನೀಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದೇನೆ. ನಾಳೆಯಿಂದಲೇ ಗುಣಮಟ್ಟದ ಕೆಲಸದೊಂದಿಗೆ ಕಾಮಗಾರಿ ಪ್ರಾರಂಭ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಕೆಲವು ದಿನಗಳ ಹಿಂದೆ ಕೂಡ ₹5 ಕೋಟಿ ವೆಚ್ಚದಲ್ಲಿ ಕೊಪ್ಪಳ -ಭಾಗ್ಯನಗರ ರೈಲ್ವೇ ಮೇಲ್ಸೇತುವೆಯಿಂದ ಭಾಗ್ಯನಗರ -ಕಿನ್ನಾಳ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದೆ, ಈಗಾಗಲೇ ಆ ರಸ್ತೆಯ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿದೆ ಎಂದರು.

ಅತಿಕ್ರಮಣ ಕಟ್ಟಡ ತೆರವಿಗೆ ಸೂಚನೆ: ಕೆಲ ದಿನಗಳ ಹಿಂದೆ ಕೊಪ್ಪಳದಲ್ಲಿ ಸುರಿದ ಮಳೆಯಿಂದ ಆದ ಹಾನಿ ವೀಕ್ಷಿಸಲು ಹಲವು ವಾರ್ಡ್‌ಗಳಿಗೆ ಭೇಟಿ ನೀಡಿದ್ದೆ ನಗರದ ಹಲವು ಚರಂಡಿಗಳ ಮೇಲೆ ಅನಧಿಕೃತವಾಗಿ ಮೆಟ್ಟಿಲು ನಿರ್ಮಿಸಿರುವುದು ಹಾಗೂ ರಾಜಕಾಲುವೆ ಮುಚ್ಚಿರುವುದು ಕಂಡುಬಂದಿದೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಚರಂಡಿ ಹಾಗೂ ರಾಜಕಾಲುವೆ ಮೇಲಿರುವ ಎಲ್ಲ ರೀತಿಯ ಅತಿಕ್ರಮಣ ತಕ್ಷಣವೇ ತೆರವುಗೊಳಿಸುವಂತೆ ನಗರಸಭೆಯ ಕಮಿಷನರ್ ಹಾಗೂ ಪಪಂ ಮುಖ್ಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಈಗಾಗಲೇ ರಾಜ ಕಾಲುವೆ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳ ಜತೆ ಹಲವು ಬಾರಿ ಚರ್ಚೆ ಮಾಡಿದ್ದೇನೆ. ರಾಜ ಕಾಲುವೆ ನಿರ್ಮಾಣ ಆದಲ್ಲಿ ಮಾತ್ರ ನಗರದ ಚರಂಡಿಗಳಲ್ಲಿ ನೀರು ಸುಗಮವಾಗಿ ಹರಿಯಲಿಕ್ಕೆ ಸಾಧ್ಯ. ಆದ್ದರಿಂದ ಅಧಿಕಾರಿಗಳು ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

ಚರಂಡಿ ಮುಚ್ಚುವುದು ಹಾಗೂ ಅತಿಕ್ರಮಣ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ನಗರ ಸ್ವಚ್ಛವಾಗಿಡಲು ಮತ್ತು ಸುಗಮ ನೀರು ಹರಿವಿಗೆ ಅನುವು ಮಾಡಿಕೊಡಲು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದರು.

ಕೊಪ್ಪಳ-ಭಾಗ್ಯನಗರ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ₹138 ಕೋಟಿ ವೆಚ್ಚದ ಕಾಮಗಾರಿ ಈಗಾಗಲೇ 70% ಮುಗಿದಿದ್ದು, ಇದೇ ವರ್ಷ ಇನ್ನುಳಿದ ಕಾಮಗಾರಿ ಕೂಡ ಮುಗಿಯಲಿದೆ. ಇದರಿಂದ ಕೊಪ್ಪಳ-ಭಾಗ್ಯನಗರ ಪಟ್ಟಣಕ್ಕೆ ದಿನದ 24 ಗಂಟೆ ಕೂಡ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ ಗಡಾದ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಗವಿಸಿದ್ದಪ್ಪ ಕರಡಿ, ತಾಲೂಕು ಗ್ಯಾರಂಟಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ಕತೀಬ್ ಬಾಷು, ಮಾರ್ಕಂಡೆಪ್ಪ ಕಲ್ಲನ್ನವರ್, ಆಜಿಮ್ ಅತ್ತರ್, ಅಜ್ಜಪ್ಪ ಕೊಪ್ಪಳ, ಶಿವರಾಮ್ ಮ್ಯಾಗಳಮನಿ, ಕುರುಗೋಡು ರವಿ, ಗವಿಸಿದ್ದಪ್ಪ ಭಾಗ್ಯನಗರ, ಅಕ್ಬರ್ ಪಲ್ಟಾನ್ ಸೇರಿದಂತೆ ಇತರರಿದ್ದರು.