ಸಾರಾಂಶ
ನಿತ್ಯ ನಾಲ್ಕಾರು ಸಾವು ನಿಶ್ಚಿತ, ರೋಗಿಗಳ ನರಕಯಾತನೆ
ಐಸಿಯು ಬೆಡ್ ಸಿಗದೆ ಸಾವನ್ನಪ್ಪುತ್ತಿರುವ ರೋಗಿಗಳುಐಸಿಯು ಬೆಡ್ ಹೆಚ್ಚಳಕ್ಕೆ ಪತ್ರ ಬರೆದರೂ ಸ್ಪಂದನೆ ಇಲ್ಲ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಮೇ 19ರಂದು ಮೂರು, 20ರಂದು 6, 21ರಂದು 5. ಕೇವಲ ಮೂರು ದಿನದ ಲೆಕ್ಕಾಚಾರದಲ್ಲಿಯೇ ಬರೋಬ್ಬರಿ 14 ರೋಗಿಗಳು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ!
ಅಷ್ಟೇ ಯಾಕೆ ಮೇ ತಿಂಗಳಲ್ಲಿಯೇ ಕೇವಲ 20 ದಿನಗಳಲ್ಲಿ ಬರೋಬ್ಬರಿ 65 ರೋಗಿಗಳು ಸಾವನ್ನಪ್ಪಿದ್ದಾರೆ.ಇದು, ಕೋವಿಡ್ ಕಾಲದ ಲೆಕ್ಕಾಚಾರ ಅಲ್ಲ, ಪ್ರಸಕ್ತ ವರ್ಷದ ಮೇ ತಿಂಗಳ ಲೆಕ್ಕಾಚಾರ. ವಾರ್ಷಿಕ ಲೆಕ್ಕಾಚಾರದಲ್ಲಿ ಪ್ರತಿ ನಿತ್ಯ ನಾಲ್ಕಾರು ರೋಗಿಗಳು ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಾರೆ. ಆದರೆ, ಬೇರೆ ಬೇರೆ ಕಾರಣಗಳನ್ನು ಹೇಳಿ, ಸಾಗುಹಾಕಲಾಗುತ್ತದೆ.
ಹೌದು. ಕೊಪ್ಪಳ ಜಿಲ್ಲಾಸ್ಪತ್ರೆ ಈಗ ಸಾವಿನ ಮನೆಯಾಗಿದೆ. ರೋಗಿಗಳು ನರಕಯಾತನೆ ಅನುಭವಿಸುವಂತೆ ಆಗಿದೆ. ಇದು, ಅಧಿಕೃತ ಲೆಕ್ಕಾಚಾರ. ಚಿಕಿತ್ಸ ಸಿಗದೆ ಬೇರೆ ಆಸ್ಪತ್ರೆಗೆ ಸಾಗಿಸುವವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಇನ್ನು ಆಪರೇಶನ್‌ಗಾಗಿ ಇಲ್ಲಿ ತಿಂಗಳಾನುಗಟ್ಟಲೇ ಕಾಯಬೇಕು. ಆಗುವ ಆಪರೇಶನ್ ಸಹ ಅಂದೇ ಆಗುತ್ತೆ ಅಂತ ಹೇಳಲಾಗಲ್ಲ. ದೊಡ್ಡ ವ್ಯಕ್ತಿಗಳ ಶಿಫಾರಸ್ಸು, ಪ್ರಭಾವ ಇರಬೇಕು. ಇಲ್ಲದಿದ್ದರೆ ರೋಗಿಗಳ ಪಾಡು ದೇವರಿಗೇ ಪ್ರೀತಿ.ಸಾವಿಗೆ ಕಾರಣವೇನು:
ಗಂಭೀರ ಸಮಸ್ಯೆಯಿಂದ ಬಳಲುವ ರೋಗಿಗಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು. ಆದರೆ, ಇಲ್ಲಿರುವುದು ಕೇವಲ 7 ಐಸಿಯು ಬೆಡ್ ಗಳು ಮಾತ್ರ. ಹೀಗಾಗಿ, ಗಂಭೀರ ಕಾಯಿಲೆಯಿಂದ ಬಳಲುವವರನ್ನು ಸಾಮಾನ್ಯ ವಾರ್ಡಿನಲ್ಲಿಯೇ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿಯೇ ಸಾವನ್ನಪ್ಪಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.ಈ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕರು ಸಹ ಹಲವಾರು ಬಾರಿ ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಕಳೆದ ಆರು ತಿಂಗಳಿಂದ ಪತ್ರ ಬರೆಯುತ್ತಲೇ ಇದ್ದಾರೆ. ಆದರೂ ಸಹ ಐಸಿಯು ಬೆಡ್ ಹೆಚ್ಚಳ ಮಾಡುತ್ತಿಲ್ಲ. ಕೊಪ್ಪಳ ಜಿಲ್ಲಾಸ್ಪತ್ರೆ ಈಗ ಕಿಮ್ಸ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ಇಲ್ಲಿ ಬರುವ ರೋಗಿಗಳ ಲೆಕ್ಕಚಾರದಲ್ಲಿ ಕನಿಷ್ಠ 20 ಐಸಿಯು ಬೆಡ್‌ಗಳು ಇರಬೇಕು. ಇರುವುದು ಕೇವಲ ಏಳು ಮಾತ್ರ.
ಹೀಗಾಗಿ, ಐಸಿಯು ಬೆಡ್ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎನ್ನುತ್ತಾರೆ ಆಸ್ಪತ್ರೆಯಲ್ಲಿನ ವೈದ್ಯರು.ಕಳೆದ ಮೂರು ದಿನಗಳಲ್ಲಿ ಬರೋಬ್ಬರಿ 14 ರೋಗಿಗಳು ಪ್ರಾಣ ತೆತ್ತಿದ್ದು, ಇವರಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರೆ ಕನಿಷ್ಠ ಅರ್ಧದಷ್ಟು ರೋಗಿಗಳು ಉಳಿಯುತ್ತಿದ್ದರು. ಇದನ್ನು ನಮ್ಮ ಕಣ್ಣಿಂದ ನೋಡಲು ಆಗುತ್ತಿಲ್ಲ ಎನ್ನುತ್ತಾರೆ ಆಸ್ಪತ್ರೆಯಲ್ಲಿನ ವೈದ್ಯರೊಬ್ಬರು.
ಕೋವಿಡ್‌ನಲ್ಲಿಯೂ ಆಗಿರಲಿಲ್ಲ:ಇಷ್ಟೊಂದು ಸಾವು ಕೋವಿಡ್‌ನಲ್ಲಿಯೂ ಆಗಿರಲಿಲ್ಲ. ಈಗ ಅಷ್ಟೊಂದು ಸಾವುಗಳು ಆಗುತ್ತಿವೆ. ಕೊಪ್ಪಳ ಜಿಲ್ಲಾಸ್ಪತ್ರೆ ರೋಗಿಗಳ ಪಾಲಿನ ನರಕವಾಗಿದೆ. ವೈದ್ಯಕೀಯ ಇಲಾಖೆಯ ಸಚಿವರು ಜಿಲ್ಲಾಸ್ಪತ್ರೆಗೊಮ್ಮೆ ಭೇಟಿ ನೀಡಬೇಕು. ವರ್ಷದುದ್ದಕ್ಕೂ ಆಗಿರುವ ಸಾವಿನ ಲೆಕ್ಕ ಮತ್ತು ಅದಕ್ಕೆ ಕಾರಣವನ್ನು ಪರಿಶೀಲನೆಗೊಳಪಡಿಸಬೇಕು ಎಂದು ಪ್ರಜ್ಞಾವಂತರು ಆಗ್ರಹಿಸುತ್ತಾರೆ.