ಸಾರಾಂಶ
ಬಾಲಕಿ ಅಪಹರಿಸಿ, ಅತ್ಯಾಚಾರಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ, ಸತ್ರ ನ್ಯಾಯಾಲಯ, ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ತೀರ್ಪು ಪ್ರಕಟಿಸಿದೆ.
ಕೊಪ್ಪಳ: ಬಾಲಕಿ ಅಪಹರಿಸಿ, ಅತ್ಯಾಚಾರಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ, ಸತ್ರ ನ್ಯಾಯಾಲಯ, ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ತೀರ್ಪು ಪ್ರಕಟಿಸಿದೆ.
ಬಾಲಕಿಯು ದೋಟಿಹಾಳದ ಪಿಯು ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬಿಜಕಲ್ ಗ್ರಾಮದ ಸಂತೋಷ ಗುಳೇದಗುಡ್ಡ ಎಂಬಾರ ಸುಮಾರು 6 ತಿಂಗಳಿನಿಂದ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ, ಮದುವೆಯಾಗುವುದಾಗಿ ಹೇಳುತ್ತಿದ್ದ. ಬಾಲಕಿ ನಿರಾಕರಿಸಿದರೂ ಹಿಂಬಾಲಿಸಿ 2023ರ ಮಾರ್ಚ್ 15ರಂದು ಆಕೆಯನ್ನು ಅಪಹರಿಸಿ ಕುಷ್ಟಗಿಯಿಂದ ಬೆಂಗಳೂರಿಗೆ ಕರೆದೊಯ್ದ. ಅಲ್ಲಿಂದ ಗೋವಾ ರಾಜ್ಯದ ಕಲ್ಲಿಂಗೋಟ ಬೀಚ್‌ನ ಹೊಟೇಲ್‌ವೊಂದರಲ್ಲಿ ರೂಂ ಬಾಡಿಗೆ ಪಡೆದು ಮೂರು ದಿನ ಅತ್ಯಾಚಾರಗೈದಿದ್ದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದ ಕುಷ್ಟಗಿ ಗ್ರಾಮೀಣ ವೃತ್ತದ ಸಿಪಿಐ ನಿಂಗಪ್ಪ ಎನ್.ಆರ್. ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಕುಮಾರ ಡಿ.ಕೆ. ವಾದ-ವಿವಾದ ಆಲಿಸಿದರು. ಆರೋಪಿ ಬಿಜಕಲ್‌ನ ಸಂತೋಷ ಗುಳೇದಗುಡ್ಡ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಜೈಲು ಶಿಕ್ಷೆ, ₹25 ಸಾವಿರ ದಂಡ ಭರಿಸುವಂತೆ ಆದೇಶಿಸಿ ತೀರ್ಪು ಪ್ರಕಟಿಸಿದ್ದಾರೆ.ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.