ಜಿಲ್ಲೆಯಲ್ಲಿ ಜನಚಳವಳಿಗಳು ರೂಪುಗೊಳ್ಳದಿದ್ದರೆ ಇಂದು ಕೊಪ್ಪಳ ಪ್ರತ್ಯೇಕ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಮೂಲ ಸೌಕರ್ಯ ಹಾಗೂ ಹಕ್ಕುಗಳನ್ನು ಪಡೆದುಕೊಳ್ಳಲು ಚಳವಳಿಗಳು ಅನಿವಾರ್ಯ.
ಕಾರಟಗಿ: ಕೊಪ್ಪಳ ಜಿಲ್ಲೆ ಎಂದೆಂದಿಗೂ ಹೋರಾಟದ ನೆಲವಾಗಿದೆ. ಜಿಲ್ಲೆಯ ಜನರು ರೂಪಿಸಿದ ಹೋರಾಟಗಳು, ಚಳವಳಿಗಳ ಫಲವಾಗಿ ಹಲವು ಹಕ್ಕುಗಳು ಲಭಿಸಿವೆ. ಬಲ್ಡೋಟ ಕಾರ್ಖಾನೆಯ ವಿಸ್ತರಣೆಯಾದರೆ ಕೊಪ್ಪಳದ ನೆಲ ಧೂಳಿನ ಕಣವಾಗಲಿದೆ ಎಂದು ಕೊಪ್ಪಳ ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ ಸದಸ್ಯ ರಮೇಶ ಸಿ. ಬನ್ನಿಕೊಪ್ಪ ಆತಂಕ ವ್ಯಕ್ತಪಡಿಸಿದರು.
ಕಾರಟಗಿ ಪಟ್ಟಣದ ಸಿದ್ದೇಶ್ವರ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾನುವಾರ ನಡೆದ ಸಂಕೀರ್ಣ ಚಿಂತನೆ ಗೋಷ್ಠಿ-2ರಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಜನಚಳವಳಿಗಳು ರೂಪುಗೊಳ್ಳದಿದ್ದರೆ ಇಂದು ಕೊಪ್ಪಳ ಪ್ರತ್ಯೇಕ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಮೂಲಭೂತ ಸೌಕರ್ಯ ಹಾಗೂ ಹಕ್ಕುಗಳನ್ನು ಪಡೆದುಕೊಳ್ಳಲು ಚಳವಳಿಗಳು ಅನಿವಾರ್ಯ. ವಿಮೋಚನಾ ಹೋರಾಟ, ಗೋಕಾಕ ವರದಿ ಜಾರಿ ಹೋರಾಟ, ಜಿಲ್ಲೆಯ ರಚನೆಗಾಗಿ ನಡೆದ ಹೋರಾಟ ಹಾಗೂ ಬಲ್ಡೋಟ ವಿರೋಧಿ ಚಳವಳಿಗಳನ್ನು ಮರೆಯಬಾರದು. ಈ ನೆಲದ ಜಲ, ಸಂಪನ್ಮೂಲ ಮತ್ತು ಜನರ ಹಿತಾಸಕ್ತಿ ಕಾಪಾಡುವಲ್ಲಿ ಜನಚಳವಳಿಗಳು ಪ್ರಮುಖ ಪಾತ್ರ ವಹಿಸಿವೆ. ಶೋಷಣೆ ಮತ್ತು ಅವಕಾಶ ವಂಚನೆಗೆ ಜಾತಿ, ಧರ್ಮದ ಭೇದವಿಲ್ಲ. ಶೋಷಣೆಯ ವಿರುದ್ಧ ಧ್ವನಿ ಎತ್ತುವುದೇ ಜನಚಳವಳಿಗಳ ಆಶಯ ಎಂದರು.
ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ರಮೇಶ ಗಬ್ಬೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಹಾಗೂ ಶ್ರಮಿಕ ವರ್ಗಕ್ಕೆ ಅನ್ಯಾಯವಾದಾಗ ಅದನ್ನು ಖಂಡಿಸುವ ಗುಣ ಈ ನೆಲಕ್ಕಿದೆ. ಕೊಪ್ಪಳ ಜಿಲ್ಲೆ ಹೋರಾಟದ ಪರಂಪರೆ ಹೊಂದಿದೆ ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಎಲ್ಲರೂ ಕನ್ನಡ ಭಾಷೆಯನ್ನು ಬಳಸಬೇಕು. ನಮ್ಮಲ್ಲಿ ಮಮ್ಮಿ, ಡ್ಯಾಡಿ ಸಂಸ್ಕೃತಿ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಮಹಿಳೆ ಮತ್ತು ಸಮಕಾಲೀನ ಸಮಸ್ಯೆಗಳ ಕುರಿತು ಮಾತನಾಡಿದ ಡಾ. ಶಿಲ್ಪಾ ದಿವಟರ್, ಮಹಿಳಾ ಮೀಸಲಾತಿಯನ್ನು ಕನಿಷ್ಠ 10ರಿಂದ 20 ವರ್ಷಗಳ ಅವಧಿಗೆ ಜಾರಿಗೊಳಿಸಬೇಕು. ಮಹಿಳೆಯರ ಕುರಿತು ಸಮಾಜದ ಮನಸ್ಥಿತಿ ಬದಲಾಗಬೇಕು ಎಂದು ಆಶಿಸಿದರು.ವಚನ ಮತ್ತು ದಲಿತ ಸಾಹಿತ್ಯದ ಜೀವಪರ ಚಿಂತನೆಗಳ ಕುರಿತು ಶರಣಪ್ಪ ಹುಂಡಿ ಮಾತನಾಡಿದರು.