ತಂತ್ರಜ್ಞಾನ ಶೋಧ ಮಾಡುವವರು ನಮ್ಮೊಂದಿಗೆ ಬರಬೇಕು, ಆಗ ನಾವು ಸತ್ಯದ ದರ್ಶನ ಮಾಡಿಸುತ್ತೇವೆ
ಕೊಪ್ಪಳ: ದೇಶದ ಶುದ್ಧ ಗಾಳಿ ಇರುವ ನಗರಗಳಲ್ಲಿ ಕೊಪ್ಪಳ ಮೂರನೇ ನಗರ ಎನ್ನುವುದು ದೊಡ್ಡ ಹಾಸ್ಯಾಸ್ಪದ. ನಾನು ಹಿರೇಬಗನಾಳ ಮುಂತಾದ ಬಾಧಿತ ಹಳ್ಳಿಯ ಶಾಲಾ ಮಕ್ಕಳು, ರೈತರನ್ನು ಖುದ್ದಾಗಿ ಗ್ರಾಮ ಭೇಟಿ ಮಾಡಿ ಮಾತನಾಡಿಸಿದೆ. ಅವರು ಬದುಕುವ ಜಾಗ ಧೂಳಿನ ಕೊಂಪೆಯಂತಿದೆ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಹಾಗೂ ಅರಕಲಗೂಡು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದ್ದಾರೆ.
ಬಿಎಸ್‌ಪಿಎಲ್‌ಸ್ಥಾಪನೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕಾಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯ 50ನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.ತಂತ್ರಜ್ಞಾನ ಶೋಧ ಮಾಡುವವರು ನಮ್ಮೊಂದಿಗೆ ಬರಬೇಕು, ಆಗ ನಾವು ಸತ್ಯದ ದರ್ಶನ ಮಾಡಿಸುತ್ತೇವೆ. ಕೊಪ್ಪಳ ಸುತ್ತಮುತ್ತ 202 ಕಾರ್ಖಾನೆಗಳು ಯಾಕೆ ಬಂದಿವೆ ಎಂದರೆ ತುಂಗಭದ್ರಾ ಜಲ ಮೂಲವಿದೆ. ಅದನ್ನು ಕಬಳಿಸಲು ಬಂದಿವೆ ಅಷ್ಟೇ. ಗಾಳಿಯಲ್ಲಿ ಮಾಲಿನ್ಯ ತುಂಬುತ್ತಿವೆ. ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಪ್ರಗತಿ ಮತ್ತು ಪ್ರಕೃತಿ ಕೂಡಿ ಹೋಗಬೇಕು. ಬಸಾಪುರ ಕೆರೆ ಜನ ಜಾನುವಾರಗಳಿಗೆ ಮುಕ್ತಗೊಳಿಸಬೇಕು. ನಾವು ಮಾನವ ಹಕ್ಕು ಆಯೋಗ ಮುಂತಾದ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿ ನಿಮಗೆ ನ್ಯಾಯ ಸಿಗುವವರೆಗೆ ಹೋರಾಡುತ್ತೇವೆ. ನಮ್ಮಲ್ಲಿ ಶಕ್ತಿ ಇದ್ದರೆ ಯಾರಾದರೂ ಮಾತು ಕೇಳುತ್ತಾರೆ. ಜನರ ಕೂಗು ಸರ್ಕಾರ ಕೇಳಬೇಕು. ಎಂಜಲು ಕಾಸಿಗೆ ಕೈ ಒಡ್ದುತ್ತಿದ್ದಾರೆ. ಅನ್ನದಾತನ ಅಹವಾಲು ಸರ್ಕಾರ ಕೇಳಬೇಕು. ಜನರ ಕಣ್ಣೀರು ಒರೆಸುವ ಕಾರ್ಯ ಯಾವುದೇ ಧರ್ಮ ಕಾರ್ಯಕ್ಕಿಂತ ಮೇಲು. ಹಣ ದೊಡ್ಡದೋ, ಜನ ಶಕ್ತಿ ದೊಡ್ಡದೋ, ಒಳ್ಳೆಯದು ದೊಡ್ಡದೋ ಕೆಟ್ಟದ್ದು ದೊಡ್ಡದೋ ತೀರ್ಮಾನವಾಗಬೇಕು ಎಂದರು.
ಕಪ್ಪತಗುಡ್ಡದ ನಂದಿವೇರಿಮಠದ ಶ್ರೀಶಿವಕುಮಾರ ಸ್ವಾಮಿಗಳು ಮಾತನಾಡಿ, ಗದುಗಿನ ಜನರ ಸಂಘಟಿತ ಪ್ರಯತ್ನದಿಂದ ಕಪ್ಪತಗುಡ್ಡ ಉಳಿದಿದೆ. ಗಣಿಗಾರಿಕೆ ಬಿಡಿ ಸೈನೇಡ್ ಕೊಡಿ ಎಂದು ಘೋಷಣೆ ಹೋರಾಟ ಮಾಡಿ ಗೆದ್ದಿದ್ದೇವೆ, ತೋಂಟದಾರ್ಯ ಸ್ವಾಮಿಗಳು ಉಪವಾಸ ಮಾಡಲು ಸಿದ್ಧರಾದಾಗ ಕಪ್ಪತ್ತಗುಡ್ಡ ಉಳಿಯಿತು. ಅನೇಕ ಸ್ವಾಮಿಗಳು ಕೂಡಿ ಕೊಪ್ಪಳದ ಬಾಧಿತ ಹಳ್ಳಿಗಳಲ್ಲಿ ಶೀಘ್ರ ಪಾದಯಾತ್ರೆ ಮಾಡುತ್ತೇವೆ. ಪರಿಸರ ವಾದಿಗಳು, ಮಾಜಿ ನ್ಯಾಯಾಧೀಶರನ್ನು ಜತೆಗೆ ಸೇರಿಸಿಕೊಳ್ಳೋಣ. ಕೊಪ್ಪಳದ ಜನರು ಜಾಗೃತರಾದರೆ ಹೋರಾಟದಲ್ಲಿ ಗೆಲವು ಸಾಧ್ಯ. ಕೊಪ್ಪಳದ ಜನ ಬದುಕಬೇಕಾದರೆ ಎದ್ದು ನಿಲ್ಲಬೇಕು ಎಂದರು.ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪ್ಯಾರಾ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಡಾ.ದೊಡ್ಡಬಸಪ್ಪ ಪಾಟೀಲ್, ಡಾ. ಮಂಜುನಾಥ್ ಸಜ್ಜನ್, ಸಾಹಿತಿ ಮಾಲಾ ಬಡಿಗೇರ, ಮಹಿಳಾ ಮಂಡಳದ ಸೌಮ್ಯ ನಾಲವಾಡ, ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರು ಮಲ್ಲಿಕಾರ್ಜುನ ಬಿ. ಗೋನಾಳ, ರಮೇಶ್ ತುಪ್ಪದ, ಮಂಜುನಾಥ ಜಿ. ಗೊಂಡಬಾಳ, ಶಿವಕುಮಾರ ಕುಕನೂರು, ವಕೀಲರಾದ ರಾಜು ಬಾಕಳೆ, ಮಹಾಂತೆಶ ಕೊತಬಾಳ ಮಾತನಾಡಿದರು.
ವೇದಿಕೆಯಲ್ಲಿ ಹೇಮಂತಕುಮಾರ, ಸಿ.ವಿ. ಜಡಿಯವರ, ಸಾಹಿತಿ ಎ.ಎಂ. ಮದರಿ, ಜ್ಯೋತಿ ಎಂ. ಗೊಂಡಬಾಳ, ಶ್ವೇತಾ ಅಕ್ಕಿ, ಪ್ರಜಾಶಕ್ತಿ ಸಂಘಟನೆಯ ಬಸವರಾಜ ಎಸ್.,ಪ್ರದೀಪ್ ಧರ್ಮಾಯತ್, ಎಸ್.ಬಿ. ರಾಜೂರು, ಸಾವಿತ್ರಿ ಮುಜುಮದಾರ್, ನಿವೃತ್ತ ಕಾನಿಇಂಬಿಕೆ ಪಟ್ಟಣಶೆಟ್ಟಿ, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜ್ಯ ರೈತ ಸಂಘದ ಭೀಮಸೇನ ಕಲಕೇರಿ, ನಜೀರಸಾಬ್ ಮೂಲಿಮನಿ, ಶಿವಪ್ಪ ದೇವರಮನಿ, ಚನ್ನವೀರಯ್ಯ ಹಿರೇಮಠ ಕುಣಿಕೇರಿ, ಶರಣು ಪಾಟೀಲ್, ಮಂಗಳೇಶ ರಾಠೋಡ್, ಗವಿಸಿದ್ದಪ್ಪ ಹುಲಿಗಿ, ಮಹೇಶ್ ವದ್ನಾಳ ಹಿರೇಬಗನಾಳ, ಗವಿಸಿದ್ದಪ್ಪ ಪುಟಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.