ಕೊಪ್ಪಳ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಬಳಕೆಯಾಗದೆ ಅವಧಿ ಮೀರಿದ ಔಷಧಗಳನ್ನು ಕ್ವಿಂಟಾಲ್‌ಗಟ್ಟಲೆ ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ, ಆಂತರಿಕ ತನಿಖೆಗೆ ಮುಂದಾಗಿದೆ.

ಕೊಪ್ಪಳ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಬಳಕೆಯಾಗದೆ ಅವಧಿ ಮೀರಿದ ಔಷಧಗಳನ್ನು ಕ್ವಿಂಟಾಲ್‌ಗಟ್ಟಲೆ ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ, ಆಂತರಿಕ ತನಿಖೆಗೆ ಮುಂದಾಗಿದೆ.

ಈಗಾಗಲೇ ಸುಮಾರು 10 ಕ್ವಿಂಟಲ್ ಔಷಧಗಳನ್ನು ವಿಲೇವಾರಿ ಮಾಡಲಾಗಿದ್ದು, ಉಗ್ರಾಣದಲ್ಲಿರುವ 2ರಿಂದ 3 ಟನ್ ಔಷಧಗಳನ್ನು ಜಪ್ತಿ ಮಾಡಿ ಸಮಗ್ರ ತನಿಖೆ ನಡೆಸಲು ಕಿಮ್ಸ್ ನಿರ್ದೇಶಕ ಡಾ. ಅಂಬ್ರೇಶ ಸಮಿತಿ ರಚಿಸಿ ಆದೇಶಿಸಿದ್ದಾರೆ.

ಆಸ್ಪತ್ರೆಯ ಮುಖ್ಯಸ್ಥರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಔಷಧ ಉಗ್ರಾಣದ ನಿರ್ವಹಣಾಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಪ್ರತ್ಯೇಕವಾಗಿ ವೈದ್ಯರನ್ನೊಳಗೊಂಡ ತಂಡವನ್ನೂ ರಚಿಸಿ ತನಿಖೆಗೆ ಆದೇಶಿಸಲಾಗಿದೆ.

ನಾಲ್ಕು ವರ್ಷಗಳ ಖರೀದಿ, ಬಳಕೆ ಪರಿಶೀಲನೆ: ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಪ್ರಮಾಣದ ಔಷಧಗಳು ಅವಧಿ ಮೀರಿವೆ, ಇದಕ್ಕೆ ಯಾರು ಹೊಣೆ ಎಂಬುದನ್ನು ಸಮಿತಿ ಪರಿಶೀಲಿಸಲಿದೆ. ಔಷಧಗಳನ್ನು ಎಲ್ಲಿಂದ ಖರೀದಿಸಲಾಯಿತು? ಇಷ್ಟೊಂದು ಪ್ರಮಾಣದ ಔಷಧಗಳಿಗೆ ಬೇಡಿಕೆ ಸಲ್ಲಿಸಿದ ವೈದ್ಯರು ಯಾರು? ಖರೀದಿಸಿದ ಔಷಧಗಳು ಬಳಕೆಯಾಗದೆ ಉಳಿದಿದ್ದೇಕೆ ಎಂಬ ಪ್ರಶ್ನೆಗಳಿಗೆ ತನಿಖೆಯಲ್ಲಿ ಉತ್ತರ ಕಂಡುಕೊಳ್ಳಬೇಕಿದೆ.

ಪೋರ್ಟಲ್ ಬಳಸಲಿಲ್ಲವೇಕೆ?: ಔಷಧಗಳ ಅವಧಿ ಮುಗಿಯುವ ಮುನ್ನವೇ ಸರ್ಕಾರದ ಪೋರ್ಟಲ್‌ನಲ್ಲಿ ಅವುಗಳ ವಿವರ ದಾಖಲಿಸಿ, ಬೇಡಿಕೆ ಇರುವ ಆಸ್ಪತ್ರೆಗಳಿಗೆ ವರ್ಗಾಯಿಸುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದಿರುವುದೇಕೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.

ಔಷಧಗಳು ಬಳಕೆಯಾಗದೆ ಅವಧಿ ಮೀರಲು ಯಾರು ಕಾರಣ ಎಂಬುದು ತನಿಖೆಯಿಂದ ತಿಳಿದುಬಂದ ಬಳಿಕ, ನಿಯಮಾನುಸಾರ ಸಂಬಂಧಪಟ್ಟವರಿಂದ ಹಣ ವಸೂಲಿ ಮಾಡುವ ಕ್ರಮ ಕೈಗೊಳ್ಳಲು ಅವಕಾಶವಿದೆ.

ಈ ಹಿಂದೆ ಕಿಮ್ಸ್‌ನ ನಿರ್ದೇಶಕರೊಬ್ಬರ ಅವಧಿಯಲ್ಲಿ ಪ್ರಯೋಗಾಲಯದ ಸಾಮಗ್ರಿಗಳನ್ನು ಅನಗತ್ಯವಾಗಿ ಖರೀದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು. ಖರೀದಿಯಲ್ಲಿ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ₹60 ಲಕ್ಷ ವಸೂಲಿಗೆ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ತಿಳಿದುಬಂದಿದೆ.

ಸರ್ಕಾರದ ಹಣ ದುರ್ಬಳಕೆ ಹಾಗೂ ಅನಗತ್ಯ ಖರೀದಿಗೆ ಸಂಬಂಧಿಸಿದಂತೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿರುವ ಹಿನ್ನೆಲೆಯಲ್ಲಿ, ಔಷಧ ತ್ಯಾಜ್ಯ ಪ್ರಕರಣದ ತನಿಖೆಯ ಫಲಿತಾಂಶದ ಮೇಲೆ ಗಮನ ನೆಟ್ಟಿದೆ.

ಸಮಿತಿ ರಚಿಸಲಾಗಿದೆ: ಔಷಧಗಳು ಬಳಕೆಯಾಗದೆ ಅವಧಿ ಮೀರಿರುವುದು ಹಾಗೂ ಅವುಗಳನ್ನು ವಿಲೇವಾರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಕೊಪ್ಪಳ ಕಿಮ್ಸ್ ನಿರ್ದೇಶಕ ಡಾ. ಅಂಬ್ರೇಶ ಹೇಳಿದರು.