ಕೊಪ್ಪಳ ಲೋಕಸಭಾ ಕ್ಷೇತ್ರ: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ

| Published : Feb 25 2024, 01:47 AM IST

ಸಾರಾಂಶ

ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 1ರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದ್ದು, 6 ಕ್ಷೇತ್ರಗಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, ಈಗ ಅದನ್ನು ಛಿಧ್ರ ಮಾಡಿ ಮೇಲುಗೈ ಸಾಧಿಸಿರುವ ಭಾರತೀಯ ಜನತಾ ಪಾರ್ಟಿ ಸತತ ಮೂರು ಬಾರಿ ಗೆಲುವು ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿದೆಯಾದರೂ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಕಂಡಿದೆ.ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 1ರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದ್ದು, 6 ಕ್ಷೇತ್ರಗಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇನ್ನು ಕೆಆರ್‌ಪಿಪಿ ಪಕ್ಷ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿಯಿಂದ ಗೆಲುವು ಸಾಧಿಸಿದ ಜನಾರ್ದನ ರೆಡ್ಡಿ ಬಿಜೆಯೊಂದಿಗೆ ಮೈತ್ರಿಗೆ ಒಲವು ತೋರಿಸಿದ್ದಾರೆ.ಆದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನುವ ಲೆಕ್ಕಾಚಾರದಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಮತ್ತೊಮ್ಮೆ ಸ್ಪರ್ಧೆ ಮಾಡಿ, ಗೆಲುವು ಸಾಧಿಸುವ ಮೂಲಕ ವೈಯಕ್ತಿಕವಾಗಿ ಹ್ಯಾಟ್ರಿಕ್ ಸಾಧಿಸುವ ಹಂಬಲದಲ್ಲಿದ್ದಾರೆ. ಆದರೆ, ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಿಂತ ಈಗ ಟಿಕೆಟ್ ತರುವುದೇ ದೊಡ್ಡ ಸವಾಲಾಗಿದೆ.ಬಿಜೆಪಿ ಹೈಕಮಾಂಡ್ ಲೆಕ್ಕಾಚಾರದ ಪ್ರಕಾರ ಈಗಲೂ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೊಡುವುದು ಪಕ್ಕಾ ಎನ್ನಲಾಗುತ್ತಿದೆ. ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕಾಗಿರುವುದರಿಂದ ನೀಡಿಯೇ ನೀಡುತ್ತಾರೆ ಎನ್ನುವುದು ಈಗಿರುವ ವಾದ. ಆದರೆ, ಪಂಚಮಸಾಲಿ ಸಮುದಾಯಕ್ಕೆ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಮಾತ್ರ ಇಲ್ಲಿ ಏರುಪೇರಾಗುತ್ತದೆ ಎಂದು ಹೇಳಲಾಗುತ್ತಿದೆ.ಆದರೂ ಇದರ ನಡುವೆ ಸ್ಥಳೀಯವಾಗಿ ಸಂಸದ ಸಂಗಣ್ಣ ಕರಡಿ ಟಿಕೆಟ್‌ಗಾಗಿ ಒಂಟಿಸಲಗದಂತೆ ಹೋರಾಟ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕೆಲವರು ಸಂಸದ ಸಂಗಣ್ಣ ಕರಡಿ ವಿರುದ್ಧ ಮುನಿಸಿಕೊಂಡಿದ್ದಾರೆ. ಜತೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವೇಳೆಯಲ್ಲಿಯೂ ಕೆಲವೊಂದು ಗೊಂದಲ ಉಂಟಾಗಿವೆ. ಇದು, ಈಗ ಸಂಸದ ಸಂಗಣ್ಣ ಕರಡಿ ಟಿಕೆಟ್ ಪಡೆಯುವ ದಾರಿಗೆ ಅಡ್ಡಿಯಾಗುತ್ತಿದೆ.ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಹಾಲಪ್ಪ ಆಚಾರ್ ತಮ್ಮ ಸೋಲಿನಲ್ಲಿ ಸಂಸದ ಸಂಗಣ್ಣ ಕರಡಿ ಪಾತ್ರ ಇದೆ ಎಂದು ಭಾವಿಸಿದ್ದಾರೆ ಹಾಗೂ ನವೀನ್ ಗುಳಗಣ್ಣನವರ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಕ್ಕೂ ಮುನಿಸಿಕೊಂಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೇ ಬಹಿರಂಗವಾಗಿ ಹೇಳುತ್ತಿದ್ದಾರೆ.ಹಾಗೆಯೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶತಾಯಗತಾಯ ಪ್ರಯತ್ನ ಮಾಡಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಸಹ ಸಂಸದ ಸಂಗಣ್ಣ ಕರಡಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.ಕುಷ್ಟಗಿ ಶಾಸಕ ಹಾಗೂ ವಿರೋಧಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ನಾನಾ ಕಾರಣಗಳಿಗಾಗಿ ತಮ್ಮ ನಿಲುವು ಹೊಂದಿದ್ದಾರೆ. ಇನ್ನು ರಾಯಚೂರು ಮತ್ತು ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಮೂರು ಕ್ಷೇತ್ರಗಳಲ್ಲಿಯೂ ರಾಜಕೀಯ ಇರುಸು-ಮುರುಸು ಆಗಿವೆ.ಇದೆಲ್ಲವೂ ಈಗ ಸಂಸದ ಸಂಗಣ್ಣ ಕರಡಿ ಟಿಕೆಟ್ ಪಡೆಯುವ ಹಾದಿಗೆ ಅಡ್ಡಿಯಾಗಿದೆ. ಸಂಗಣ್ಣ ಕರಡಿ ಅವರ ಸಮುದಾಯದ ಪ್ರಮುಖರಾದ ಡಾ.ಕೆ.ಬಸವರಾಜ ಪರವಾಗಿ ಇನ್ನುಳಿದವರು ದೊಡ್ಡ ಲಾಬಿ ನಡೆಸುತ್ತಿದ್ದು, ಅದಕ್ಕೆ ಇವರೆಲ್ಲ ಸಾಥ್ ನೀಡುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.ಡಾ.ಕೆ.ಬಸವರಾಜ ಅವರು ಸಂಸದ ಸಂಗಣ್ಣ ಕರಡಿ ಅವರ ಕುರಿತು ಅಸಮಾಧಾನಗೊಂಡವರನ್ನು ಒಗ್ಗೂಡಿಸಿಕೊಂಡು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾಗಿ ತಮ್ಮ ಪರ ಒಲವು ಇದೆ ಎನ್ನುವುದನ್ನು ಸಾಬೀತು ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ, ಸಂಸದ ಸಂಗಣ್ಣ ಕರಡಿ ಅವರದ್ದು ಒಂಟಿಸಲಗದ ಹೋರಾಟದಂತಾಗಿದೆ.ಬಿಜೆಪಿ ಪಾಳೆಯದಲ್ಲಿಯೇ ಟಿಕೆಟ್‌ಗಾಗಿ ನಾನಾ ಕಸರತ್ತು ನಡೆಯುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಕೆಆರ್‌ಪಿಪಿ ಪಕ್ಷದಿಂದಲೂ ಪ್ರಯತ್ನ ನಡೆದಿದೆ. ಬಿಜೆಪಿಗೆ ಬೆಂಬಲ ನೀಡಲು ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿ ಗಾಳ ಹಾಕಿದ್ದಾರೆ.ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿರುವ ಸಿ.ವಿ. ಚಂದ್ರಶೇಖರ ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದು, ಅವರು ಸಹ ತೆರೆಮರೆಯಲ್ಲಿ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ ಎನ್ನುವುದು ಬಹಿರಂಗವಾಗಿಯೇ ಚರ್ಚೆಯಾಗುತ್ತಿದೆ.ನಾನಂತೂ ಟಿಕೆಟ್ ಆಕಾಂಕ್ಷಿ. ಪಕ್ಷದ ಹೈಕಮಾಂಡ್‌ ಸಹ ನನಗೆ ಟಿಕೆಟ್ ನೀಡುತ್ತದೆ ಎನ್ನುವ ವಿಶ್ವಾಸವಿದೆ. ಯಾರಾದರೂ ಪ್ರಯತ್ನ ಮಾಡುತ್ತಿರಬಹುದು. ಪಕ್ಷ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.ನಾನು ಈಗಲೇ ಏನೂ ಹೇಳುವುದಿಲ್ಲ, ಈಗ ಜೆಡಿಎಸ್ ಪಕ್ಷದಲ್ಲಿದ್ದೇನೆ. ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಪಕ್ಷದ ವರಿಷ್ಠರು ಸೇರಿಕೊಂಡು ಸೂಕ್ತ ಅಭ್ಯರ್ಥಿಯನ್ನು ತೀರ್ಮಾನ ಮಾಡುತ್ತಾರೆ ಎನ್ನುತ್ತಾರೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ.ನಾನು ಕೂಡ ಕೊಪ್ಪಳ ಲೋಕಸಭಾ ಕ್ಷೇತ್ರದ ಆಕಾಂಕ್ಷಿ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಮನವಿ ಮಾಡಿದ್ದೇನೆ. ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷ ಸೂಚಿಸಿದರೆ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಾರೆ ಕೊಪ್ಪಳ ಲೋಕಸಭೆ ಟಿಕೆಟ್‌ ಆಕಾಂಕ್ಷಿ ಡಾ.ಕೆ.ಬಸವರಾಜ.