ಕೊಪ್ಪಳ ಗಣಿ ಹಗರಣ ಸಿಬಿಐ ತನಿಖೆಯಾಗಲಿ

| Published : Oct 26 2025, 02:00 AM IST

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ₹400 ಕೋಟಿ ಗಣಿ ಹಗರಣ ನಡೆದ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ ಇಡೀ ಗಣಿ ಅಕ್ರಮದ ಸಮಗ್ರ ತನಿಖೆ ಹೊಣೆ ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಒತ್ತಾಯಿಸಿದ್ದಾರೆ.

- ಎಸ್‌.ಎಸ್‌. ಮಲ್ಲಿಕಾರ್ಜುನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಬಿಜೆಪಿ ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೊಪ್ಪಳ ಜಿಲ್ಲೆಯಲ್ಲಿ ₹400 ಕೋಟಿ ಗಣಿ ಹಗರಣ ನಡೆದ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ ಇಡೀ ಗಣಿ ಅಕ್ರಮದ ಸಮಗ್ರ ತನಿಖೆ ಹೊಣೆ ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳದಲ್ಲಿ ₹400 ಕೋಟಿ ಗಣಿ ಅಕ್ರಮ ಬಗ್ಗೆ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ ಧ‍್ವನಿ ಎತ್ತಿ, ಅಲ್ಲಿನ ಗಣಿ ಅಧಿಕಾರಿಗಳನ್ನು ಎತ್ತಂಗಡಿ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇದು ಕೇವಲ ಕೊಪ್ಪಳದ ಕಥೆಯಲ್ಲ. ಇಡೀ ರಾಜ್ಯದ ಗಣಿ ಅಕ್ರಮದ ತನಿಖೆಯನ್ನು ಸಿಪಿಐಗೆ ಒಪ್ಪಿಸಬೇಕು ಎಂದರು.

ಕೇವಲ ಕೊಪ್ಪಳ ಜಿಲ್ಲೆಯಲ್ಲೇ ₹400 ಕೋಟಿ ಹಗರಣವೆಂದರೆ ರಾಜ್ಯಾದ್ಯಂತ ಎಷ್ಟು ಸಾವಿರ ಕೋಟಿ ರು.ಗಳ ಹಗರಣ ನಡೆದಿರಬಹುದು? ಅದರಲ್ಲಿ ಗಣಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರ ಪಾಲೆಷ್ಟು? ಗಣಿ ಹಗರಣ ಸಿಬಿಐ ತನಿಖೆಯಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನಿರಪರಾಧಿ ಎಂಬುದು ಸಾಬೀತಾದರೆ ಮತ್ತೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿ ಎಂದರು.

ಕೆಲ ತಿಂಗಳ ಹಿಂದೆ ದಾವಣಗೆರೆಗೆ ರಾಜ್ಯ ಉಪ ಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಅಕ್ರಮ ಕಲ್ಲು ಗಣಿಗಾರಿಕೆ ನಡೆದ ಬಗ್ಗೆ ವರದಿ ನೀಡಿದಾಗ ನೆಪಮಾತ್ರಕ್ಕೆ ನಿಮ್ಮ ಸಹೋದರ ಎಸ್‌.ಎಸ್‌. ಗಣೇಶರ ಒಡೆತನದ ಕಲ್ಲು ಗಣಿಗಾರಿಕೆಗೆ ₹25 ಸಾವಿರ ದಂಡ ವಿಧಿಸಿ, ಕಣ್ಣೊರೆಸುವ ನಾಟಕ ಮಾಡಿದ್ದಿರಿ. ಇದನ್ನು ಜಿಲ್ಲೆಯ ಜನತೆ ಗಮನಿಸಿದ್ದಾರೆ ಎಂದು ಯಶವಂತ ರಾವ್‌ ಟೀಕಿಸಿದರು.

ಎಸ್‌.ಎಸ್‌. ಮಲ್ಲಿಕಾರ್ಜುನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಗಣಿ ಹಗರಣ ಸಿಬಿಐ ತನಿಖೆಗೆ ಒಪ್ಪಿಸಲಿ. ಇಲ್ಲವಾದರೆ ನಿಮ್ಮೆಲ್ಲಾ ಹಗರಣಗಳ ಬಗ್ಗೆ ದಾಖಲೆ ಸಮೇತ ಕಾಂಗ್ರೆಸ್‌ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯುವ ಮೂಲಕ ನಿಮ್ಮ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇವೆ ಎಂದು ಎಚ್ಚರಿಸಿದರು.

- - -

(ಕೋಟ್‌) ದಾವಣಗೆರೆ ಸ್ಮಾರ್ಟ್ ಸಿಟಿ, ಕುಂದುವಾಡ ಕೆರೆ, ಬಸ್‌ ನಿಲ್ದಾಣದಲ್ಲಿ ಬಿಜೆಪಿ ಲೂಟಿ ಮಾಡಿದೆ, ಸೂಟ್‌ಕೇಸ್ ಹಂಚಿಕೊಂಡಿದ್ದಾರೆ ಎಂದೆಲ್ಲಾ ‍‍‍ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆರೋಪಿಸಿದ್ದರು. ತಾವು ಮಾಡಿದ್ದ ಆರೋಪಗಳ ಬಗ್ಗೆ ತನಿಖೆ ಯಾಕೆ ಮಾಡಿಸಿಲ್ಲ? ಎರಡೂವರೆ ವರ್ಷದಿಂದ ನಿಮ್ಮದೇ ಸರ್ಕಾರವಿದೆ. ನಾವ್ಯಾರೂ ತನಿಖೆ ಮಾಡಿಸದಂತೆ ಹೇಳಿಲ್ಲ. ಗಣಿ ಹಗರಣ, ಭೂಮಿ ಕಬಳಿಕೆ ಹಗರಣಗಳ ತನಿಖೆಯೂ ಆಗಲಿ, ಸ್ಮಾರ್ಟ್ ಸಿಟಿ, ಕುಂದುವಾಡ ಕೆರೆ, ಬಸ್‌ ನಿಲ್ದಾಣಗಳ ಹಗರಣಗಳ ಬಗ್ಗೆಯೂ ತನಿಖೆಯಾಗಲಿ. - ಯಶವಂತ ರಾವ್ ಜಾಧವ್‌, ಬಿಜೆಪಿ ಮುಖಂಡ.

- - -

-25ಕೆಡಿವಿಜಿ5: ಯಶವಂತ ರಾವ್ ಜಾ‍ಧವ್