ಸಾರಾಂಶ
ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಸದಸ್ಯೆ ಪಾಲು
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ರಾಜ್ಯ ರಾಜಕಾರಣದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿದ್ದರೆ ಕೊಪ್ಪಳದಲ್ಲಿ ಮಾತ್ರ ಬಿಜೆಪಿ ಸದಸ್ಯೆ ಕಾಂಗ್ರೆಸ್ ಬೆಂಬಲದೊಂದಿಗೆ ಉಪಾಧ್ಯಕ್ಷೆಯಾಗಲಿದ್ದಾರೆ.ನಿಚ್ಚಳ ಬಹುಮತ ಇರುವ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಿ ಅಮ್ಜಾದ್ ಪಟೇಲ್ ಆಯ್ಕೆಯಾಗುವುದು ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನವಾಗಿದ್ದು, ಇದೇ ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರ ಬೆಂಬಲಕ್ಕೆ ನಿಂತಿರುವ ಬಿಜೆಪಿ ಸದಸ್ಯೆಯನ್ನು ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಹೀಗಾಗಿ, ಆ. 21ರಂದು ನಡೆಯುವ ಕೊಪ್ಪಳ ನಗರಸಭೆ ಅಧ್ಯಕ್ಷೆ- ಉಪಾಧ್ಯಕ್ಷರ ಚುನಾವಣೆಯಲ್ಲಿ ರಾಜ್ಯವೇ ತಿರುಗಿ ನೋಡುವಂತೆ ಕಾಂಗ್ರೆಸ್ ಅಮ್ಜಾದ್ ಪಟೇಲ್ ಬಿಜೆಪಿಯ ಕೆಲವು ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗುವುದು ಪಕ್ಕಾ ಆಗಿದ್ದರೆ, ಇದೇ ವೇಳೆಯಲ್ಲಿ ಬಿಜೆಪಿಯ ಅಶ್ವಿನಿ ಭಗತ ಗದುಗಿನಮಠ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷೆಯನ್ನಾಗಿ ಮಾಡುವುದು ಪಕ್ಕಾ ಆಗಿದೆ.ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಸಂಗಣ್ಣ ಕರಡಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮತ್ತು ಇದಾದ ಮೇಲೆ ಕಾಂಗ್ರೆಸ್ ಜಿಲ್ಲೆಯ ಸೂಪರ್ ಅಧ್ಯಕ್ಷ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಉಪಸ್ಥಿತಿಯಲ್ಲಿ ನಡೆದ ಪ್ರತ್ಯೇಕ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಬಲಾಬಲ:ಕೊಪ್ಪಳ ನಗರಸಭೆ 31 ಸದಸ್ಯ ಬಲ ಹೊಂದಿದೆ. ಇದರಲ್ಲಿ ಕಾಂಗ್ರೆಸ್ ಓರ್ವ ಸದಸ್ಯೆ ಸರ್ಕಾರಿ ನೌಕರಿ ಬಂದಿದ್ದರಿಂದ ರಾಜೀನಾಮೆ ನೀಡಿದ್ದರೆ, ಬಿಜೆಪಿ ಸದಸ್ಯ ರಾಜಶೇಖರ ಆಡೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಸದಸ್ಯರ ಬಲ 29 ಸ್ಥಾನಕ್ಕೆ ಕುಸಿದಿದೆ.
ಈ ಪೈಕಿ ಕಾಂಗ್ರೆಸ್ 14 ಸದಸ್ಯರು, ಜೆಡಿಎಸ್ 2, ಪಕ್ಷೇತರ ನಾಲ್ಕು ಹಾಗೂ ಬಿಜೆಪಿಯ 9 ಸದಸ್ಯರು ಇದ್ದಾರೆ.ಜೆಡಿಎಸ್ ಮತ್ತು ಪಕ್ಷೇತರರು ಬಹುತೇಕರು ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡಿದ್ದಾರೆಯೇ ಹೊರತು ಸೇರ್ಪಡೆಯಾಗಿಲ್ಲ ಅಷ್ಟೆ. ಇನ್ನು ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಬೆಂಬಲಿಸಿ ಮೂವರು ಬಿಜೆಪಿ ಸದಸ್ಯರು ಬಿಜೆಪಿಯಲ್ಲಿಯೇ ಇದ್ದರೂ ಕಾಂಗ್ರೆಸ್ ಪರವಾಗಿದ್ದಾರೆ.
ಹೀಗಾಗಿ, ಕಾಂಗ್ರೆಸ್ ಅಧ್ಯಕ್ಷರಾಗಿ ಅಮ್ಜಾದ್ ಪಟೇಲ್ ಅವರನ್ನು ಆಯ್ಕೆ ಮಾಡಲು ತೀರ್ಮಾನ ಮಾಡಲಾಗಿದ್ದು, ಹಾಗೆಯೇ ಮಾಜಿ ಸಂಸದ ಸಂಗಣ್ಣ ಕರಡಿ ಅವರ ಬಿಗಿಪಟ್ಟಿನಿಂದಾಗಿ ಬಿಜೆಪಿಯಲ್ಲಿದ್ದು ತಮ್ಮನ್ನು ಬೆಂಬಲಿಸಿರುವ ಆಶ್ವಿನಿ ಭಗತ್ ಗದುಗಿನಮಠ ಅವರನ್ನು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಲು ತೀರ್ಮಾನ ಮಾಡಲಾಗಿದೆ. ಈಗೇನಿದ್ದರೂ ಆ. 21ರಂದು ಚುನಾವಣೆ ಪ್ರಕ್ರಿಯೆ ನಡೆಯುವುದೊಂದು ಬಾಕಿ ಇದೆ.ಗೋವಾ ಪ್ರವಾಸದಲ್ಲಿ:
ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಹಾಗೂ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಸದಸ್ಯರು ಸೇರಿ ಬರೋಬ್ಬರಿ 22 ಸದಸ್ಯರು ಗೋವಾ ಪ್ರವಾಸಕ್ಕೆ ಭಾನುವಾರ ತೆರಳಿದರು. ಶನಿವಾರ ತಡರಾತ್ರಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ಸದಸ್ಯರು ಗೋವಾ ಪ್ರವಾಸ ಬೆಳೆಸಿದ್ದಾರೆ.ಗೋವಾದಲ್ಲಿಯೇ ತಂಗುವ 22 ಸದಸ್ಯರು (ಇದರಲ್ಲಿ ಕೆಲವರು ಸದಸ್ಯರ ಪತಿಯರು, ಪುತ್ರರು) ಪ್ರಯಾಣ ಬೆಳೆಸಿದ್ದು, ಕೆಲವು ಮುಖಂಡರು ಸಹ ಇದ್ದಾರೆ. ಗೋವಾದಲ್ಲಿ ಎರಡು ದಿನ ಎಂಜಾಯ್ ಮಾಡಿಕೊಂಡು ಆ. 21ರಂದು ಬೆಳಗ್ಗೆ ಕೊಪ್ಪಳಕ್ಕೆ ಆಗಮಿಸಿ, ನೇರವಾಗಿ ನಗರಸಭೆ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿಯಲ್ಲಿ ಏಳು ಸದಸ್ಯರು:ಈಗ ಬಿಜೆಪಿಯಲ್ಲಿ ಕೇವಲ ಏಳು ಸದಸ್ಯರು ಗುರುತಿಸಿಕೊಂಡಿದ್ದಾರೆ. ಪೈಪೋಟಿ ಒಡ್ಡುವ ಯಾವ ಸಾಮರ್ಥ್ಯವೂ ಇಲ್ಲದಿರುವುದರಿಂದ ಪೈಪೋಟಿ ಮಾಡದೆ ಚುನಾವಣೆಗೆ ಹಾಜರಾಗಿ, ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸಾಂಕೇತಿಕವಾಗಿ ಭಾಗವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.